ತುರ್ತು ಸ್ಪಂದನೆಗೆ ಯೋಜನೆ ರೂಪಿಸಲು ಐಜಿಪಿ ಶರತ್‌ಚಂದ್ರ ಸೂಚನೆ

10-klr-5
Published on

ಕೋಲಾರ: ಜಿಲ್ಲೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತುರ್ತು ಸ್ಪಂದನೆ ವ್ಯವಸ್ಥೆಗೆ ಯೋಜನೆ ರೂಪಿಸುವಂತೆ ಕೇಂದ್ರ ವಲಯ ಐಜಿಪಿ ಕೆ.ವಿ. ಶರತ್‌ಚಂದ್ರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ತ್ವರಿತ ಪರಿಹಾರ ಮತ್ತು ತುರ್ತು ಸ್ಪಂದನೆಗಾಗಿ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಪ್ರೈ.ಲಿ. ಸಿಎಸ್‌ಆರ್ ಅಡಿಯಲ್ಲಿ ನೀಡಿರುವ 50 ದ್ವಿಚಕ್ರ ವಾಹನಗಳನ್ನು ಪೊಲೀಸ್ ಕವಾಯತು ಮೈದಾನದಲ್ಲಿ ಸ್ವೀಕರಿಸಿ ಕಂಪನಿಗೆ ಅಭಿನಂದನೆ ತಿಳಿಸಿದರು.

ಜಿಲ್ಲೆಯಲ್ಲಿ ಅಪರಾಧಗಳ ಸಂಖ್ಯೆ ಕಡಿಮೆಗೊಳಿಸಿ ಜನತೆಗೆ ನ್ಯಾಯ ಕಲ್ಪಿಸಲು ಸುಸಜ್ಜಿತ ಮೋಟಾರ್ ಸೈಕಲ್ ನೆರವಾಗಲಿದೆ ಎಂದರು.

ರಾಜ್ಯ ಪೊಲೀಸ್ ಇಲಾಖೆ ಎರಡು ತಿಂಗಳ ಹಿಂದಷ್ಟೇ ತುರ್ತು ಸ್ಪಂದನೆ ವ್ಯವಸ್ಥೆ ರೂಪಿಸಿದೆ. 112 ಸಂಖ್ಯೆಗೆ ಕರೆ ಮಾಡಿದರೆ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಕರೆ ಸ್ವೀಕರಿಸಿ ಸಂಬಂಧಿಸಿದ ಜಿಲ್ಲೆಗೆ ಮಾಹಿತಿ ಕಳುಹಿಸಿ ಸಾರ್ವಜನಿಕರಿಗೆ ತುರ್ತಾಗಿ ಸ್ಪಂದಿಸುವ ಕೆಲಸವಾಗುತ್ತದೆ. ಸಮಸ್ಯೆ ಪರಿಹಾರವಾದ ಬಳಿಕ ಕೇಂದ್ರ ಕಚೇರಿಗೆ ಮತ್ತೆ ಮಾಹಿತಿ ಸಲ್ಲಿಸುವ ವ್ಯವಸ್ಥೆ ಚಾಲ್ತಿಯಲ್ಲಿದೆ ಎಂದರು.

ಹೋಂಡಾ ನೀಡಿರುವ 50 ಬೈಕುಗಳನ್ನು ಜಿಲ್ಲಾ ವ್ಯಾಪ್ತಿಯ ಠಾಣೆಗಳಿಗೆ 4-5ರಂತೆ ಹಂಚಿಕೆ ಮಾಡಿ ತುರ್ತು ಸ್ಪಂದನೆಗೆ ಯೋಜನೆ ರೂಪಿಸುವಂತೆ ಎಸ್ಪಿಗೆ ಸೂಚಿಸಿದ ಅವರು, ಇದರಿಂದ ಅಪರಾಧಗಳ ಸಂಖ್ಯೆ ಕಡಿಮೆ ಆಗಬೇಕು. ಆಗ ಮಾತ್ರ ಕಂಪನಿ ನೀಡಿರುವ ಕೊಡುಗೆ ಸಾರ್ಥಕವಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ಹೋಂಡಾ ಸಂಸ್ಥೆ ಸಿಎಸ್‌ಆರ್ ಅಡಿ ಸರ್ಕಾರಕ್ಕೆ ಮತ್ತು ಜಿಲ್ಲೆಗೆ 38.28 ಕೋಟಿ ರೂ. ನೀಡಿದೆ. ಜಿಲ್ಲೆಯಲ್ಲಿ ಒಳಾಂಗಣ ಕ್ರೀಡಾಂಗಣ, ಮಾಲೂರು, ಕೆಜಿಎಫ್ ಕ್ರೀಡಾಂಗಣ ಅಭಿವೃದ್ಧಿ ಸೇರಿ ಆರೋಗ್ಯ, ಶಿಕ್ಷಣ, ಕ್ರೀಡೆಗೆ ಸಹಕಾರ ನೀಡಿದೆ ಎಂದರು.

ಹೋಂಡಾ ಸಂಸ್ಥೆಯ ಸಾಮಾನ್ಯ ಮತ್ತು ಕಾರ್ಪೋರೇಟ್ ವ್ಯವಹಾರಗಳ ನಿರ್ದೇಶಕ ಹರ್ಭಜನ್ ಸಿಂಗ್ ಮಾತನಾಡಿ, ಸಂಸ್ಥೆಯು ಹರಿಯಾಣ, ಮಹಾರಾಷ್ಟ್ರ, ಜಾರ್ಖಂಡ್, ರಾಜಸ್ಥಾನ, ಗುಜರಾತ್‌ನಲ್ಲಿ ಕ್ಷಿಪ್ರ ಸ್ಪಂದನೆ ತಂಡಗಳನ್ನು ಸಶಕ್ತಗೊಳಿಸಿದ್ದು, ಕರ್ನಾಟಕ ಪೊಲೀಸ್ ತಂಡದ ಜತೆಗೆ ಕೈ ಜೋಡಿಸಲು ಹರ್ಷವಾಗುತ್ತಿದೆ ಎಂದರು.

ಎಸ್ಪಿ ಕಾರ್ತಿಕ್ ರೆಡ್ಡಿ, ಜಿಪಂ ಸಿಇಒ ಎಚ್.ವಿ. ದರ್ಶನ್, ಎಎಸ್ಪಿ ಎಸ್. ಜಾಹ್ನವಿ, ಹೋಂಡಾ ನರಸಾಪುರ ಘಟಕ ಉಪಾಧ್ಯಕ್ಷ ನವೀನ್ ಅವಲ್, ಕಾರ್ಯನಿರ್ವಾಹಕ ಉಪಾಧ್ಯಕ್ಷ ಹಿರೋಕಿ ಚುಬಚಿ ಹಾಜರಿದ್ದರು.

ವಾಹನದ ವಿಶೇಷತೆ: ಸುಸಜ್ಜಿತ ಬೈಕ್ ಫ್ಲ್ಯಾಷರ್ ಮತ್ತು ಬ್ಲಿಂಕರ್, ಸಾರ್ವಜನಿಕ ಘೋಷಣೆ ವ್ಯವಸ್ಥೆ, ಸೂತನ್, ಫ್ಯ್ಲಾಷ್ ಲೈಟ್, ಸುರಕ್ಷಾ ಹೆಲ್ಮೆಟ್, ಗಾಳಿ ಪರದೆ ಮತ್ತು ಕ್ರೂಸರ್ ಸೈಡ್‌ಬಾಕ್ಸ್ ಒಳಗೊಂಡಿದ್ದು, ಜೈಪುರದಲ್ಲಿನ ಘಟಕದಿಂದ ಸಾಧನ ಸಲಕರಣೆಯನ್ನು ತಂದು ಜೋಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net