

ವೇಮಗಲ್: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ರತಿ ಕುಟುಂಬಕ್ಕೂ ಸಾಲ ನೀಡುವ ಶಕ್ತಿ ಪಡೆದಿರುವ ಡಿಸಿಸಿ ಬ್ಯಾಂಕ್ ರೈತರು, ಮಹಿಳೆಯರ ಜೀವನಾಡಿಯಾಗಿದ್ದು, ಸಮರ್ಪಕ ಸಾಲ ವಸೂಲಿ ಮೂಲಕ ದೇಶದ ನಂಬರ್ ಒನ್ ಬ್ಯಾಂಕ್ ಆಗಿ ಹೊರಹೊಮ್ಮಲಿ ಎಂದು ಶಾಸಕ ಕೆ.ಶ್ರೀನಿವಾಸಗೌಡ ಆಶಿಸಿದರು.
ಕೋಲಾರ ತಾಲೂಕಿನ ವೇಮಗಲ್ ಎಸ್‌ಎಫ್‌ಸಿಎಸ್ ಆಶ್ರಯದಲ್ಲಿ ಗುರುವಾರ ಡಿಸಿಸಿ ಬ್ಯಾಂಕಿನಿಂದ ಮಹಿಳಾ ಸಂಘಗಳಿಗೆ 3.56 ಕೋಟಿ ರೂ ಸಾಲದ ಚೆಕ್ ವಿತರಿಸಿ ಸೊಸೈಟಿ ಗಣಕೀಕರಣಕ್ಕೆ ಚಾಲನೆ ನೀಡಿ ಮಾತನಾಡಿದರು.
ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಇಂದು ಹೆಮ್ಮರವಾಗಿ ಬೆಳೆಯಲು ಬ್ಯಾಲಹಳ್ಳಿ ಗೋವಿಂದಗೌಡ ಅವರೇ ಕಾರಣ. ಅವರು ಅಧ್ಯಕ್ಷರಾಗುವುದಕ್ಕೆ ಮೊದಲ ಬಾರಿ ನಾನೇ ವಿರೋಧ ವ್ಯಕ್ತಪಡಿಸಿದ್ದಕ್ಕೆ ಪಶ್ಚಾತ್ತಾಪವಿದೆ. ಗೋವಿಂದಗೌಡ ಬಿಟ್ಟು ಬೇರೆ ಯಾರೇ ಅಧ್ಯಕ್ಷರಾಗಿದ್ದರೂ ಬ್ಯಾಂಕ್ ಸುಧಾರಣೆಯಾಗುತ್ತಿರಲಿಲ್ಲ. ಊಹೆಗೂ ನಿಲುಕದ ರೀತಿಯಲ್ಲಿ ಬ್ಯಾಂಕ್ ಮತ್ತೆ ಹೆಮ್ಮರವಾಗಿ ಬೆಳೆದು ನೂರಾರು ಕೋಟಿ ರೂ. ಸಾಲ ನೀಡುವ ಶಕ್ತಿ ಪಡೆದುಕೊಂಡಿದೆ. ಕಟ್ಟು ನಿಟ್ಟಾಗಿ ಸಾಲ ವಸೂಲಾತಿ ಮಾಡಿ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸುವಂತಾಗಬೇಕು ಎಂದರು.
ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಮಾತನಾಡಿ, ಬ್ಯಾಂಕ್ ದಿವಾಳಿಯಾಗಿದ್ದಾಗ ಯಾರೂ ಸರಿಪಡಿಲು ಮುಂದೆ ಬರಲಿಲ್ಲ, ಈಗ ಒಳ್ಳೆಯದಾಗಿರುವಾಗ ಎಲ್ಲರೂ ಆರೋಪ ಮಾಡುತ್ತಾರೆ. ಇದಕ್ಕೆ ಕಿವಿ ಗೊಡಬಾರದು, ನಮ್ಮ ಆತ್ಮಸಾಕ್ಷಿಗೆ ಒಪ್ಪುವ ಕೆಲಸ ಮಾಡಬೇಕೆಂದು ನಂಬಿದ್ದೇನೆ ಎಂದು ಟೀಕಾಕಾರರಿಗೆ ಟಾಂಗ್ ನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಗ್ರಾಹಕರಿಗೆ ಪಾರದರ್ಶಕ ಆಡಳಿತ ನೀಡುವ ಉದ್ದೇಶದಿಂದ ಸೊಸೈಟಿಯನ್ನು ಗಣಕೀಕರಣಗೊಳಿಸಲು ಕ್ರಮ ಕೈಗೊಂಡಿದ್ದು, ಪ್ರತಿಯೊಬ್ಬರೂ ಡಿಸಿಸಿ ಬ್ಯಾಂಕಿನಲ್ಲಿ ಹಣಕಾಸು ವಹಿವಾಟು ನಡೆಸಬೇಕು ಎಂದರು.
ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಡಿಸಿಸಿ ಬ್ಯಾಂಕಿನಲ್ಲಿ ರೈತರು, ಮಹಿಳೆಯರು ಸೇರಿ ವಿವಿಧ ಕ್ಷೇತ್ರದವರು 280 ಕೋಟಿ ರೂ. ಠೇವಣಿ ಇಟ್ಟಿದ್ದಾರೆ, ಆದರೂ ಕೆಲ ವ್ಯಕ್ತಿಗಳು ಬ್ಯಾಂಕ್ ವಿರುದ್ಧ ಆರೋಪ ಮಾಡುವುದು, ದೂರು ನೀಡುವುದು ಮಾಡುತ್ತಿದ್ದಾರೆ, ಇದನ್ನು ಎದುರಿಸುವ ಶಕ್ತಿ ಆಡಳಿತ ಮಂಡಳಿಗಿದೆ ಎಂದು ತಿರುಗೇಟು ನೀಡಿದರು.
ಬ್ಯಾಂಕ್ ನಿರ್ದೇಶಕ ಕೆ.ವಿ.ದಯಾನಂದ್, ಎಪಿಎಂಸಿ ಅಧ್ಯಕ್ಷ ಮಂಜುನಾಥ್, ನಿರ್ದೇಶಕ ಚಂದ್ರೇಗೌಡ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕ ಚೆಂಜಿಮಲೆ ರಮೇಶ್, ವೇಮಗಲ್ ಎಸ್‌ಎಫ್‌ಸಿಎಸ್ ಅಧ್ಯಕ್ಷ ನಾಗೇಶ್, ನಿರ್ದೇಶಕರಾದ ಬೈರಾರೆಡ್ಡಿ, ವೀರಭದ್ರಪ್ಪ, ಓಬಣ್ಣ, ವೆಂಕಟರಾಮ್, ಶೈಲಜಾ ವೆಂಕಟೇಶ್, ಮಂಜುನಾಥ್, ಸೊಸೈಟಿ ಉಪಾಧ್ಯಕ್ಷ ರಾಮಸ್ವಾಮಿ, ನರಸಾಪುರ ಸೊಸೈಟಿ ಅಧ್ಯಕ್ಷ ಮುನಿರಾಜು, ಸಿಇಒ ಶಂಕರಪ್ಪ ಉಪಸ್ಥಿತರಿದ್ದರು.
ವೇಮಗಲ್‌ನಲ್ಲಿ ಡಿಸಿಸಿ ಬ್ಯಾಂಕ್ ಶಾಖೆ ಆರಂಭಿಸುವ ಚಿಂತನೆಯಿದೆ. ಡಿಸಿಸಿ ಬ್ಯಾಂಕಿನಲ್ಲೇ ಪ್ರತಿಯೊಬ್ಬರೂ ಹೆಚ್ಚು ಠೇವಣಿ ಇಟ್ಟರೆ ಆಕರ್ಷಕ ಬಡ್ಡಿ ನೀಡುವ ಜತೆಗೆ ಮತ್ತಷ್ಟು ರೈತರು, ತಾಯಂದಿರಿಗೆ ಸಾಲ ನೀಡಲು ಸಹಕಾರಿಯಾಗುತ್ತದೆ. ಬ್ಯಾಲಹಳ್ಳಿ ಎಂ.ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ