

ಕೋಲಾರ: ಸಹಸ್ರಾರು ಗಿಡಗಳನ್ನು ನೆಟ್ಟು ಪರಿಸರ ಉಳಿಸಿರುವ ಪದ್ಮಶ್ರೀ ಸಾಲು ಮರದ ತಿಮ್ಮಕ್ಕನಂತಹವರು ದೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಆಶಿಸಿದರು.
ಮನ್ವಂತರ ಪ್ರಕಾಶನ ಮತ್ತು ಮನ್ವಂತರ ಜನಸೇವಾ ಟ್ರಸ್ಟ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರ ಮಾರ್ಗದರ್ಶನದಲ್ಲಿ ಎಸ್ಸೆನ್ನಾರ್ ಜಿಲ್ಲಾಸ್ಪತ್ರೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶುಕ್ರವಾರ ಗಿಡ ನೆಟ್ಟು ಮಾತನಾಡಿ, ಸಾಲುಮರದ ತಿಮ್ಮಕ್ಕ ಅವರ ಬಗ್ಗೆ ಎಲ್ಲೆಡೆ ಪ್ರಚಾರವಿದೆ. ಸಹಸ್ರಾರು ಗಿಡ ನೆಟ್ಟು ಪೋಷಿಸಿರುವ ಅವರು ರಾಷ್ಟ್ರಮಟ್ಟದ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ. ಇಂತಹವರ ಸಂಖ್ಯೆ ಹೆಚ್ಚಬೇಕು ಎಂದರು.
ಕೋಲಾರದಂತಹ ಒಣ ಪ್ರದೇಶದಲ್ಲಿ ಮನ್ವಂತರ ಜನಸೇವಾ ಟ್ರಸ್ಟ್‌ನಂತಹ ಪರಿಸರ ಪ್ರೀಯರಿದ್ದಾರೆನ್ನುವುದು ಶ್ಲಾಘನೀಯ, ಸಸಿ ನೆಡಲು ಆಸ್ಪತ್ರೆ ಆವರಣ ಆರಿಸಿಕೊಂಡಿರುವುದು ಸಂತಸದ ವಿಚಾರ ಎಂದರು.
ಜಿಲ್ಲಾಧಿಕಾರಿ ಸಿ. ಸತ್ಯಭಾಮ ಮಾತನಾಡಿ, ಯುವ ಸಮುದಾಯಕ್ಕೆ ಪರಿಸರದ ಮಹತ್ವ ತಿಳಿಸಬೇಕು. ಆಧುನಿಕ ದಿನಗಳಲ್ಲಿ ಪರಿಸರ ಉಳಿವಿಗೆ ಫ್ಯಾನ್ಸಿ ಆಗಿ ಸೆಲ್ಫಿ ಜತೆ ಗಿಡ ನೆಡುವುದು, ಪೋಷಿಸುವ ಕಾರ್ಯಕ್ರಮ ಮಾಡಬೇಕಿದೆ. ಪರಿಸರ ರಕ್ಷಣೆ ಬಗ್ಗೆ ಜನರಲ್ಲಿ ಅರಿವು ಮೂಡುತ್ತಿದ್ದರೂ ಇನ್ನಷ್ಟು ದೂರ ಕ್ರಮಿಸಬೇಕಿದೆ. ಎಲ್ಲರೂ ಒಟ್ಟಾಗಿ ಪರಿಸರ ರಕ್ಷಿಸೋಣ ಎಂದು ಕರೆ ನೀಡಿದರು.
ಪರಿಸರ ಸಾಹಿತಿ, ಮನ್ವಂತರ ಪರಿಸರ ಪಡೆಯ ಮುಖ್ಯ ಸಲಹೆಗಾರ ಎಚ್.ಎ.ಪುರುಷೋತ್ತಮ ರಾವ್ ಮಾತನಾಡಿ, ಹಲವು ವರ್ಷಗಳಿಂದ ಮನ್ವಂತರ ಪ್ರಕಾಶನ ಮತ್ತು ಜನಸೇವಾ ಟ್ರಸ್ಟ್ ಸಾಮಾಜಿಕ ಕಳಕಳಿಯಿಂದ ಅನೇಕ ಕಾರ್ಯಕ್ರಮಗಳ ಜತೆಗೆ ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡುತ್ತಿದೆ ಎಂದರು.
ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಅರಣ್ಯ ಇಲಾಖೆ ಡಿಎಫ್‌ಒ ಈ.ಶಿವಶಂಕರ್, ಸಾಮಾಜಿಕ ಅರಣ್ಯ ಉಪಸಂರಕ್ಷಣಾಧಿಕಾರಿ ವಿ.ದೇವರಾಜ್, ಜಿಲ್ಲಾಸ್ಪತ್ರೆ ಸರ್ಜನ್ ಡಾ.ಎಸ್.ಜಿ.ನಾರಾಯಣಸ್ವಾಮಿ, ನಗರಸಭೆ ಸದಸ್ಯ ರಾಕೇಶ್, ಪತ್ರಕರ್ತರ ಸಂಘದ ಅಧ್ಯಕ್ಷ ವಿ. ಮುನಿರಾಜು, ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಪಾ.ಶ್ರೀ.ಅನಂತರಾಮ್, ಖಜಾಂಚಿ ಎಸ್.ಎನ್.ಪ್ರಕಾಶ್, ಮನ್ವಂತರ ಪಡೆಯ ಸಂಚಾಲಕರಾದ ಎ.ಬಾಲನ್, ನಿರಂಜನ್, ವನ್ಯಜೀವಿ ಗೌರವ ಪರಿಪಾಲಕ ಕೆ.ಎನ್.ತ್ಯಾಗರಾಜ್, ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ, ಸವಿತಾ ಸಮಾಜದ ಮುಖಂಡ ಎಸ್.ಮಂಜುನಾಥ್, ಸ್ಕೌಟ್ಸ್ ಜಿಲ್ಲಾ ಸಂಘಟಕ ವಿ. ಬಾಬು, ರಕ್ತನಿಧಿ ಕೇಂದ್ರದ ತಂತ್ರಜ್ಞ ನಂದೀಶ್ ಹಾಜರಿದ್ದರು.