

ಕೋಲಾರ: ರೀಲರ್ಸ್‌ಗಳಿಂದ ರೇಷ್ಮೆ ನೂಲು ಖರೀದಿಗೆ ಸರ್ಕಾರ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ (ಕೆಎಸ್‌ಎಂಬಿ)ಗೆ 20 ಕೋಟಿ ರೂ. ಬಿಡುಗಡೆ ಮಾಡಿದ್ದು, ತಿಂಗಳಾಂತ್ಯದವರೆಗೆ ಖರೀದಿ ನಡೆಯಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ.ಆರ್. ರವಿಕುಮಾರ್ ಹೇಳಿದರು.
ಕೋಲಾರ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಗೆ ಸೋಮವಾರ ಭೇಟಿ ನೀಡಿದ್ದ ಅವರು ರೀಲರ್ಸ್ ಜತೆ ಚರ್ಚಿಸಿದ ನಂತರ ಮಾತನಾಡಿ, ರೀಲರ್‌ಗಳ ಬೇಡಿಕೆಯಂತೆ ಸರ್ಕಾರ ಮಧ್ಯಪ್ರವೇಶ ಮಾಡಿ ನೂಲು ಖರೀದಿ ಆರಂಭಿಸಿದೆ. 20 ಕೋಟಿ ರೂ. ಬಿಡುಗಡೆ ಮಾಡಿದೆ. ರೀಲರ್‌ಗಳ ಕೋರಿಕೆ ಮೇರೆಗೆ 15 ದಿನ ಖರೀದಿ ನಡೆಯಲಿದೆ ಎಂದರು.
ಬಸವರಾಜ್ ನೇತೃತ್ವದ ತಾಂತ್ರಿಕ ಸಮಿತಿಯ ಶಿಫಾರಸಿನಂತೆ ಎ, ಬಿ, ಸಿ, ಡಿ ಎಂದು ನಾಲ್ಕು ಗ್ರೇಡ್‌ಗಳಲ್ಲಿ ಧಾರಣೆ ನೀಡಲಾಗುವುದು. ಒಬ್ಬ ರೀಲರ್‌ಗೆ 30 ಕೆಜಿ ನಿಗದಿಪಡಿಸಲಾಗಿದೆ ಎಂದರು.
ರಾಜ್ಯದಿಂದ ರೇಷ್ಮೆನೂಲು ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮಬಂಗಾಳ, ಗುಜರಾತ್‌ಗೆ ಸಾಗಾಣಿಕೆಯಾಗುತ್ತಿತ್ತು. ಈ ರಾಜ್ಯಗಳು ಕೆಂಪು ವಲಯದಲ್ಲಿವೆ. ಅಂತಾರಾಜ್ಯ ಗಡಿ ಬಂದ್ ಆಗಿರುವುದರಿಂದ ವರ್ತಕರು ಬರುತ್ತಿಲ್ಲ. ಲಾಕ್‌ಡೌನ್ ಮೇ 31ರ ನಂತರ ಸಡಿಲಿಕೆಯಾದಲ್ಲಿ ಟ್ರೇಡರ್ಸ್, ವೀವರ್ಸ್ ಮುಕ್ತಮಾರುಕಟ್ಟೆಯಲ್ಲಿ ಖರೀದಿಗೆ ಪ್ರವೇಶಿಸಿದರೆ ಸರ್ಕಾರ ನೀಡುವುದಕ್ಕಿಂತ ಹೆಚ್ಚು ದರ ಸಿಗಲಿದೆ ಎಂದರು.
ಕೋಲಾರ, ರಾಮನಗರ, ಕೊಳ್ಳೆಗಾಲದ ರೀಲರ್‌ಗಳು ರೇಷ್ಮೆಯನ್ನು ಒಂದೇ ಕಡೆ ತರುವ ಬದಲು ಕೋಲಾರದವರು ಶಿಡ್ಲಘಟ್ಟ ಖರೀದಿ ಕೇಂದ್ರಕ್ಕೆ ಹೋದರೆ ಅನುಕೂಲ. ಅಲ್ಲೂ ಮಂಡಳಿಯ 5 ಸಿಬ್ಬಂದಿ ಇದ್ದಾರೆ. ನೂಲಿನ ಗುಣಮಟ್ಟ ಪರೀಕ್ಷೆ ಮಾಡಲಾಗುತ್ತದೆ. ದಾಸ್ತಾನು ಕೊಠಡಿ ಇದೆ. ಈ ಬಗ್ಗೆ ರೀಲರ್‌ಗಳೊಂದಿಗೆ ಚರ್ಚಿಸಿ ಎಂದರು.
ಕೆಎಸ್‌ಎಂಬಿಯಲ್ಲಿ ನೂಲು ಖರೀದಿಸಿದ ತಕ್ಷಣ ಶೇ.60 ಹಣ ನೀಡಲಾಗುವುದು. ಮೂರು ದಿನದೊಳಗೆ ಗುಣಮಟ್ಟ ಪರೀಕ್ಷೆ ನಡೆಸಿ ಉಳಿಕೆ ಹಣ ಪಾವತಿಸಲಾಗುವುದು ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಿರುವ ಪ್ಯಾಕೇಜ್‌ನಲ್ಲಿ ರೇಷ್ಮೆ ಬೆಳೆಗಾರರಿಗೆ ಸಹಾಯ ಮಾಡಿಲ್ಲ ಎಂದು ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಸಿ.ವಿ. ನಾರಾಯಣಸ್ವಾಮಿ, ಪದಾಧಿಕಾರಿ ನಾಗನಾಳ ಶ್ರೀನಿವಾಸ್ ಪ್ರಶ್ನಿಸಿದಾಗ ಉತ್ತರಿಸಿದ ಎಂಡಿ ರವಿಕುಮಾರ್, ಕೆಎಸ್‌ಎಂಬಿ ಮಧ್ಯಪ್ರವೇಶಿಸಿದ ನಂತರ 30ರಿಂದ 50 ರೂ. ಧಾರಣೆ ಹೆಚ್ಚಾಗಿದೆ. ಇದು ಪರೋಕ್ಷವಾಗಿ ರೈತನಿಗೆ ಅನುಕೂಲವಾಗುತ್ತಿದೆ ಎಂದರು.
ವೀವರ್ಸ್, ಮಲ್ಟಿಎಂಡ್, ಚರಕ ನೂಲು ಬಿಚ್ಚಾಣಿಕೆದಾರರಿಗೆ, ನೂಲು ಬಿಚ್ಚಾಣಿಕೆಯಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಇನ್ಸೆಂಟಿವ್ ನೀಡುವ ಸಂಬಂಧ ರೇಷ್ಮೆ ಇಲಾಖೆ ಆಯುಕ್ತರು ಸರ್ಕಾರದ ಮುಂದೆ ಕಡತ ಮಂಡಿಸಿದ್ದಾರೆ ಎಂದರು.
ಕೋಲಾರ ಮಾರುಕಟ್ಟೆ ಉಪನಿರ್ದೇಶಕ ಎಂ.ರಾಧಾಕೃಷ್ಣ, ಸಹಾಯಕ ನಿರ್ದೇಶಕಿ ಲಕ್ಷ್ಮೀರೆಡ್ಡಿ, ರೇಷ್ಮೆ ಬೆಳೆಗಾರರ ಸಂಘದ ಕಾರ್ಯದರ್ಶಿ ಶಂಕರೇಗೌಡ, ಪ್ರಗತಿಪರ ರೈತ ಶಿವಣ್ಣ ಹಾಗೂ ರೀಲರ್ಸ್‌ಗಳು ಹಾಜರಿದ್ದರು.
ಲಾಕ್‌ಡೌನ್‌ನಿಂದ ರೀಲರ್ಸ್ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದರಿಂದ ನೂಲು ಖರೀದಿಗೆ ಸರ್ಕಾರವನ್ನು ಒತ್ತಾಯಿಸಬೇಕಾಯಿತು. ಸರ್ಕಾರ ರೀಲರ್ಸ್ ಬಳಿ ಕೆಲಸ ಮಾಡುವವರಿಗೆ ಯಾವುದೇ ಪ್ಯಾಕೇಜ್ ಘೋಷಿಸಿಲ್ಲ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು. ಅನ್ಸರ್ ಪಾಷಾ, ಕೋಲಾರ ಸಿಲ್ಕ್ ರೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ