17 ಜನರ ತಂಡಕ್ಕೆ ಕೋಲಾರ ಗಡಿಯಲ್ಲೇ ನಿರ್ಬಂಧ

7-klr-17
Published on
ಕೋಲಾರ: ಗುಜರಾತ್‌ನಿಂದ ಮಾಲೂರಿಗೆ ಬರುತ್ತಿದ್ದ 17 ಜನರ ತಂಡದಲ್ಲಿ ಒಬ್ಬನಿಗೆ ಕರೊನಾ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲೆಗೆ ಪ್ರವೇಶ ನಿರಾಕರಿಸಿ ಗಡಿಭಾಗದ ಕಟ್ಟಿಗೇನಹಳ್ಳಿಯ ಚೆಕ್‌ಪೋಸ್ಟ್‌ನಿಂದ ಬೆಂಗಳೂರಿಗೆ ವಾಪಸ್ ಕಳುಹಿಸಲಾಗಿದೆ.
 ಗುಜರಾತ್‌ನ ಸೂರತ್‌ನಲ್ಲಿ ನಡೆದ ಧರ್ಮಪ್ರಚಾರದಲ್ಲಿ ಮಾಲೂರಿನಿಂದ ಭಾಗವಹಿಸಿದ್ದ ತಂಡ ಗುರುವಾರ ಬೆಳಗಿನ ಜಾವ ಸುಮಾರು 4 ಗಂಟೆಯ ವೇಳೆಗೆ ಗಡಿಭಾಗ ಕಟ್ಟಿಗೇನಹಳ್ಳಿಯ ಚೆಕ್‌ಪೋಸ್ಟ್ ಬಳಿ ಬಂದಿದೆ. ಸಾರಿಗೆ ಬಸ್‌ನಲ್ಲಿದ್ದ 17 ಜನರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ರ‌್ಯಾಪಿಡ್ ಕಿಟ್ ಮೂಲಕ ತಪಾಸಣೆ ಆರಂಭಿಸಿದ್ದಾರೆ.
 ತಪಾಸಣೆಯಲ್ಲಿ ಸರತಿ ಸಾಲಿನಲ್ಲಿ ಬಂದ ನಾಲ್ಕನೇ ವ್ಯಕ್ತಿಯ ಮಾದರಿಯಲ್ಲಿ ಕರೊನಾ ಲಕ್ಷಣ ಕಂಡುಬಂದ ತಕ್ಷಣ ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳು ಮುನ್ನೆಚ್ಚರಿಕೆ ವಹಿಸಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.
 ತಂಡದ ಸದಸ್ಯರ ದಾಖಲೆ ಪರಿಶೀಲನೆಯ ವೇಳೆ ಕರೊನಾ ಪರೀಕ್ಷೆಗೆ ಒಳಪಟ್ಟು ಕರೊನಾ ಲಕ್ಷಣ ಕಂಡು ಬಂದ ವ್ಯಕ್ತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ ನಿವಾಸಿ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂತು. ಸ್ಥಳಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿ ಮಾಹಿತಿ ಪಡೆದರು. ಮಾಲೂರಿನಲ್ಲಿ ಕ್ವಾರಂಟೈನ್ ಮಾಡಲು ನಿರಾಕರಿಸಿತಲ್ಲದೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸಲಾಯಿತು. ಅಲ್ಲಿಂದ ಬಂದ ಸಿಬ್ಬಂದಿ ವರ್ಗದವರು ಪಾಸಿಟಿವ್ ಬಂದ ವ್ಯಕ್ತಿಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ಉಳಿದ 16 ಮಂದಿಯನ್ನು ದೇವನಹಳ್ಳಿ ಸಮೀಪ ಕ್ವಾರಂಟೈನ್ ಮಾಡಲಾಗಿದೆ.
 ಗುಜರಾತಿನ ಸುರತ್‌ನಲ್ಲಿ ನಡೆದ ಧರ್ಮ ಪ್ರಚಾರಕ್ಕೆ ಕಳೆದ ಫೆಬ್ರವರಿಯಲ್ಲಿ ತಾಲೂಕಿನಿಂದ ಸಾಕಷ್ಟು ಮಂದಿ ಮುಸ್ಲಿಮರು ತೆರಳಿದ್ದರು. ಆದರೆ ಸೋಂಕು ಹೆಚ್ಚಾಗುತ್ತಿದ್ದಂತೆ ಸರ್ಕಾರ ಲಾಕ್‌ಡೌನ್ ಮಾಡಿದ ಹಿನ್ನೆಲೆಯಲ್ಲಿ ಎಲ್ಲರನ್ನೂ ಅಲ್ಲೇ ಕ್ವಾರಂಟೈನ್ ಮಾಡಲಾಗಿತ್ತು. 44 ಮಂದಿಯ ಒಂದು ತಂಡ ಮೇ 3ರಂದು ಮಾಲೂರಿಗೆ ಬರುತ್ತಿದ್ದಂತೆ ಗಡಿಯಲ್ಲೇ ಸ್ವತಃ ಜಿಲ್ಲಾಧಿಕಾರಿ ಸಿ. ಸತ್ಯಭಾಮ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಎಲ್ಲರ ತಪಾಸಣೆ ನಡೆಸಿ ರಾಜೇನಹಳ್ಳಿ ಸಮೀಪ ಇರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
 2ನೇ ಹಂತದಲ್ಲಿ 17 ಮಂದಿ ಬರುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ಇರಲಿಲ್ಲ. ಬಸ್‌ನ್ನು ಗಡಿಯಿಂದ ಒಳಕ್ಕೆ ಬಿಡದೆ ಆಚೆಯೇ ನಿಲ್ಲಿಸಿ ತಪಾಸಣೆ ನಡೆಸಲು ಚೆಕ್‌ಪೋಸ್ಟ್‌ನ ಸಿಬ್ಬಂದಿ ತೋರಿದ ಸಮಯ ಪ್ರಜ್ಞೆಯಿಂದ  ಸದ್ಯಕ್ಕೆ ಕೋಲಾರ ಹಸಿರು ವಲಯವಾಗಿಯೇ ಉಳಿದುಕೊಂಡಿದೆ.
 ಮನೆ ಮಾಡಿದ ಆತಂಕ: ಕೋಲಾರ ಜಿಲ್ಲೆ ಪ್ರಸ್ತುತ ಹಸಿರು ವಲಯಲ್ಲಿದೆ. ಆದರೆ ಜಿಲ್ಲೆಯಿಂದ ಹೊರಹೋಗಿರುವವರು, ವಿವಿಧ ರಾಜ್ಯಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಲಾಕ್‌ಡೌನ್ ಸಡಿಲಿಕೆ ನಂತರ ಬರಲಾರಂಭಿಸಿದ್ದಾರೆ. ಅನೇಕರು ವಿವಿಧ ರಾಜ್ಯಗಳಿಗೆ ತೆರಳುವ ಸಲುವಾಗಿ ನಡಿಗೆಯಲ್ಲೇ ರಾತ್ರೋರಾತ್ರಿ  ಜಿಲ್ಲೆಯ ಗಡಿಭಾಗ ಪ್ರವೇಶಿಸುತ್ತಿದ್ದಾರೆ. ಇದು ಸಾಲದೆಂಬಂತೆ ಮದ್ಯ ಮಾರಾಟಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಆದರೆ ನೆರೆಯ ಆಂಧ್ರ, ತಮಿಳುನಾಡಿನಿಂದಲೂ ಜಿಲ್ಲೆಯ ಗಡಿ ಭಾಗದಲ್ಲಿನ ಮದ್ಯದಂಗಡಿಗಳಿಗೆ ಎಡತಾಕುತ್ತಿರುವುದು ಜಿಲ್ಲೆಯ ಜನತೆಯನ್ನು ಆತಂಕಕ್ಕೀಡುಮಾಡಿದೆ.

ಗುಜರಾತ್‌ನಿಂದ ಬಂದಿದ್ದ ತಂಡದಲ್ಲಿದ್ದ ಒಬ್ಬನಿಗೆ ರ‌್ಯಾಪಿಡ್ ಪರೀಕ್ಷೆ ಸಂದರ್ಭದಲ್ಲಿ ಕರೊನಾ ಲಕ್ಷಣ ಬಂದಿದ್ದರಿಂದ ಕೂಡಲೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದ ಜತೆ ಮಾತನಾಡಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ತಂಡ ಕೋಲಾರಕ್ಕೆ ಬರುವ ಮುನ್ನ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿರಲಿಲ್ಲ. ಜಿಲ್ಲೆಯ ಎಲ್ಲ ಗಡಿಭಾಗದಲ್ಲಿ ಎಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.   ಎಚ್. ನಾಗೇಶ್, ಜಿಲ್ಲಾ ಉಸ್ತುವಾರಿ ಸಚಿವ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net