ಕೋಲಾರದಲ್ಲಿ 1.16 ಲಕ್ಷ ಲೀಟರ್ ಮದ್ಯ ಮಾರಾಟ, ಸಾಮಾನ್ಯ ದಿನಗಳಲ್ಲಿ ಮಾರಾಟ ಆಗುವುದಕ್ಕಿಂತ ಶೇ.300ಕ್ಕೂ ಅಧಿಕ ಮದ್ಯ ಮಾರಾಟ

5-klr-15
Published on

ಕೋಲಾರ: ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ 1,16,568 ಲೀಟರ್ ಮದ್ಯ ಮಾರಾಟವಾಗಿದ್ದು, ಸಾಮಾನ್ಯ ದಿನಗಳಲ್ಲಿ ಮಾರಾಟ ಆಗುವುದಕ್ಕಿಂತ ಶೇ.300ಕ್ಕೂ ಅಧಿಕ ಮದ್ಯ ಮಾರಾಟ ದಾಖಲಾಗಿದೆ.

ಜಿಲ್ಲೆಯಲ್ಲಿ ಮಾ.24ರಿಂದ ಲಾಕ್‌ಡೌನ್ ಘೋಷಣೆಯಾದ ನಂತರ ಮದ್ಯ ಮಾರಾಟವನ್ನು ಸರ್ಕಾರ ನಿಷೇಧಿಸಿದ್ದರಿಂದ ಸರಿಸುಮಾರು 40 ದಿನಗಳಿಗೂ ಅಧಿಕ ಸಮಯದಿಂದ ಮದ್ಯಪ್ರಿಯರು ಮದ್ಯ ಸಿಗದೆ ಚಡಪಡಿಸುತ್ತಿದ್ದರು.

ರಾಜ್ಯ ಸರ್ಕಾರ ಸೋಮವಾರದಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದೇ ತಡ ಸೂರ್ಯ ಉದಯಿಸುವುದರೊಳಗೆ ಮದ್ಯಪ್ರಿಯರು ಬಾರ್‌ಗಳ ಮುಂದೆ ಜಮಾಯಿಸಿದ್ದರು. ಬೆಳಗ್ಗೆ 9 ಗಂಟೆಗೆ ಮದ್ಯದಂಗಡಿ ಬಾಗಿಲು ತೆಗೆಯುತ್ತಿದ್ದಂತೆಯೇ ಕಿಲೋಮೀಟರ್ ಸರತಿಯಲ್ಲಿ ಗಂಟೆಗಟ್ಟಲೆ ನಿಂತು ಮದ್ಯ ಖರೀದಿಸಿದ್ದಾರೆ.

ಮಧ್ಯಾಹ್ನ 2 ಗಂಟೆಯೊಳಗೆ ಬಹುತೇಕ ಎಲ್ಲ ಅಂಗಡಿಗಳಲ್ಲಿ ಶೇ.75ಕ್ಕಿಂತಲೂ ಹೆಚ್ಚು ಮದ್ಯ ಖಾಲಿಯಾಗಿತ್ತು. ಅನಂತರ ಕೆಲ ಬ್ರ್ಯಾಂಡ್‌ಗಳಷ್ಟೇ ಇದ್ದುದರಿಂದ ಅನೇಕರು ತಮಗೆ ಬೇಕಾದ ಬ್ರ್ಯಾಂಡ್ ಸಿಗದೆ ನಿರಾಶರಾಗಿದ್ದರು. ಮದ್ಯ ಸಿಕ್ಕ ಖುಷಿಯಲ್ಲಿ ಅನೇಕರು ಕಂಠಪೂರ್ತಿ ಕುಡಿದು ಕಿಕ್‌ನಲ್ಲಿ ರಸ್ತೆ ಬದಿಯಲ್ಲಿ ಬಿದ್ದಿದ್ದರೆ, ಇನ್ನು ಕೆಲವರು ನಶೆಯಲ್ಲಿ ಜಗಳವಾಡಿಕೊಂಡಿದ್ದೂ ಇದೆ.

ಬೊಕ್ಕಸಕ್ಕೆ ಹಣ: ಜಿಲ್ಲೆಯಲ್ಲಿ ಎಂಎಸ್‌ಐಎಲ್‌ನ 21 ಮದ್ಯದಂಗಡಿಗಳು ಹಾಗೂ ಸಿಎಲ್-2 ಸನ್ನದುಗಳು 104 ಇದ್ದು, ಒಟ್ಟು 125 ಮದ್ಯದಂಗಡಿಗಳಲ್ಲಿ 84, 502.928 ಮದ್ಯ ಹಾಗೂ 32,065.37 ಬಿಯರ್ ಸೇರಿ ಒಟ್ಟು 1,16,568.298 ಲೀಟರ್ ಮದ್ಯ ಮಾರಾಟವಾಗಿದೆ. ಹಾಲು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಕೋಲಾರದಲ್ಲಿ ಮದ್ಯಪ್ರಿಯರೂ ‘ಮದ್ಯ’ ಸಾಗರದಲ್ಲಿ ಮುಳುಗಿ ಸರ್ಕಾರದ ಬೊಕ್ಕಸಕ್ಕೆ ಹಣ ಹರಿಸಿದ್ದಾರೆ.

ಜಾಲಿ ಮೂಡ್‌ನಲ್ಲಿ ಮದ್ಯಪ್ರಿಯರು: ಲಾಕ್‌ಡೌನ್ ನಂತರ ಎರಡನೇ ದಿನವಾದ ಮಂಗಳವಾರವೂ ಮದ್ಯದಂಗಡಿಗಳು ಓಪನ್ ಆಗಿದ್ದೇ ತಡ, ಜಿಲ್ಲೆಯ ಹಲವೆಡೆ ಮದ್ಯಪ್ರಿಯರು ದರ ಏರಿಕೆ ಬಿಸಿ ನಡುವೆಯೂ ಮದ್ಯ ಖರೀದಿಸಲು ಮುಗಿ ಬಿದ್ದಿದ್ದರು. ಅಬಕಾರಿ ಇಲಾಖೆಯ ಆದೇಶಕ್ಕೂ ಕೇರ್ ಮಾಡದ ಕೆಲವರು ಬಾರ್ ಪಕ್ಕದಲ್ಲೇ ಕುಳಿತು ಮದ್ಯ ಸವಿಯುತ್ತಿದ್ದ ದೃಶ್ಯ ಕಂಡು ಬಂತು.

ಜಿಲ್ಲೆಯಲ್ಲಿ ಸಾಮಾನ್ಯ ದಿನಗಳಲ್ಲಿ ಮದ್ಯ ಸರಾಸರಿ 22,680 ಲೀಟರ್ ಹಾಗೂ ಬಿಯರ್ 10,301 ಲೀಟರ್ ಮಾರಾಟವಾಗುತ್ತಿತ್ತು. ಇದಕ್ಕೆ ಹೋಲಿಸಿದರೆ ಲಾಕ್‌ಡೌನ್ ತೆರವಾದ ನಂತರ ಸೋಮವಾರ ಒಂದೇ ದಿನ ಮದ್ಯ ಶೇ. 372 ಹಾಗೂ ಬಿಯರ್ ಶೇ.311 ಹೆಚ್ಚು ಮಾರಾಟವಾಗಿದೆ. ಕೆ.ಕೆ. ಸುಮಿತಾ, ಅಬಕಾರಿ ಉಪ ಆಯುಕ್ತೆ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net