

ಕೋಲಾರ: ಮದ್ಯದಂಗಡಿಗಳಿಗೆ ಸರ್ಕಾರ ಅನುಮತಿ ನೀಡಿದ ಬಳಿಕ ಜಿಲ್ಲೆಯಲ್ಲಿ ಕಂಡು ಬಂದಿರುವ ಅಹಿತಕರ ಬೆಳವಣಿಗೆಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಹಸಿರು ವಲಯದಲ್ಲಿರುವ ಜಿಲ್ಲೆಯನ್ನು ಕರೊನಾದಿಂದ ರಕ್ಷಿಸಲು ಸರ್ಕಾರಕ್ಕೆ ಒಳ್ಳೆಯ ಅವಕಾಶ ಸಿಕ್ಕಿದೆ. ಆದರೆ ಆದಾಯಕ್ಕಾಗಿ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಮೂಲಕ 40 ದಿನ ಕಾಪಾಡಿಕೊಂಡು ಬಂದಿದ್ದ ವ್ಯವಸ್ಥೆಯನ್ನು ಬುಡಮೇಲು ಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅನೇಕ ಮದ್ಯ ವ್ಯಸನಿಗಳು ಲಾಕ್‌ಡೌನ್‌ನಿಂದ ಪರಿವರ್ತನೆಯಾಗಿದ್ದಾರೆ, ಇನ್ನು ಮುಂದೆ ಮದ್ಯ ಸಹವಾಸಕ್ಕೆ ಹೋಗುವುದಿಲ್ಲವೆಂದು ತೀರ್ಮಾನಿಸಿದ್ದಾರೆ. ಆದರೆ ಸರ್ಕಾರ ಖಜಾನೆಯಲ್ಲಿ ಹಣವಿಲ್ಲವೆಂಬ ಕಾರಣಕ್ಕೆ ಜನರನ್ನು ಮತ್ತೆ ಕುಡಿತದ ಬಾವಿಗೆ ತಳ್ಳುತ್ತಿರುವುದು ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚುನಾವಣೆಯಲ್ಲಿ ಪ್ರಜಾಪ್ರಭುತ್ವ ವಿಜಯಕ್ಕಾಗಿ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕಾಲು ಹಿಡಿದು ಬೇಡಿಕೊಂಡರೂ ಮತದಾನದ ಹಿಂದಿನ ದಿನ ರಾತ್ರಿಯೇ ಕಂಠಪೂರ್ತಿ ಕುಡಿದು ಹಕ್ಕು ಮರೆಯುವ ಕುಡುಕರು ಮದ್ಯ ಖರೀದಿಗಾಗಿ ಕ್ಯೂನಲ್ಲಿ ನಿಲ್ಲುವ ಮಟ್ಟಕ್ಕೆ ತಲುಪಿದ್ದಾರೆ. ಒಂದು ವೇಳೆ ಪರಿಸ್ಥಿತಿ ಉಲ್ಬಣಗೊಂಡು ಕರೊನಾ ಹಬ್ಬಿದರೆ ಯಾರು ಹೊಣೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ಜಿಲ್ಲೆಯಲ್ಲಿ ಒಂದೇ ಒಂದು ಕರೊನಾ ಪಾಸಿಟಿವ್ ಕೇಸ್ ಇಲ್ಲದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಗಲಿರಳು ಶ್ರಮಿಸಿದೆ. ಸರ್ಕಾರ ಇನ್ನಷ್ಟು ದಿನ ಜಿಲ್ಲೆಯನ್ನು ಹಸಿರು ವಲಯ ಆಗಿರುವುದಕ್ಕೆ ಅವಕಾಶ ಮಾಡಿಕೊಡಬಹುದಿತ್ತು. ಮದ್ಯ ಲಾಬಿಗೆ ಮಣಿದು ದುಡುಕಿನ ನಿರ್ಧಾರ ಕೈಗೊಂಡಿದ್ದು, ಅನಾಹುತವಾದರೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕರೊನಾದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹೀನಾಯ ಸ್ಥಿತಿಗೆ ತಲುಪಿದೆ ಎಂಬುದು ಸರಿ. ಹಾಗಂತ ಜಿಲ್ಲೆಯ ವಾತಾವರಣ ಹದಗೆಟ್ಟರೆ ಇಡೀ ಜಿಲ್ಲೆ ಕ್ವಾರಂಟೈನ್ ಆಗುವ ಅಪಾಯವಿರುವುದರಿಂದ ಮದ್ಯ ಮಾರಾಟ ವಿಷಯದಲ್ಲಿ ಸೂಕ್ಷ್ಮತೆ ಅರಿಯುವುದು ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.
ಜಿಲ್ಲೆಯ ಎಲ್ಲೆಡೆ ಮದ್ಯ ಬಿರುಸಾಗಿ ಬಿಕರಿಯಾಗಿದೆ, ದೊಡ್ಡವರು, ಚಿಕ್ಕವರು ವಿಶೇಷವಾಗಿ ವೃದ್ಧರು, ಮಕ್ಕಳು ಕ್ಯೂನಲ್ಲಿ ನಿಂತು ಖರೀದಿ ಮಾಡಿದ್ದಾರೆ. ಅದೆಷ್ಟೋ ಜನ ಮನೆ ತಲುಪಲಾಗದೆ ನೆಲಕ್ಕೆ ಉರುಳಿದ್ದಾರೆ.
70 ವರ್ಷದ ಇಬ್ಬರು ವೃದ್ಧೆಯರು ನಗರದ ಬಸ್ ನಿಲ್ದಾಣ ಬಳಿಯ ಬಾರ್‌ಗೆ ಬೆಳಗ್ಗೆ 5 ಗಂಟೆಗೆ ಬಂದು ಮದ್ಯ ಖರೀದಿ ಮಾಡಿ ಮನೆಗೆ ತೆರಳಿದರೆ, ನಗರದ ಅಂತರಗಂಗೆ ರಸ್ತೆಯ ಕುವೆಂಪು ಪಾರ್ಕ್ ಬಳಿ ಕುಡುಕನೊಬ್ಬ ತೂರಾಡಿಕೊಂಡು ಬಂದು ಬಿದ್ದು ಗಾಯಗೊಂಡಿದ್ದಾನೆ.
ಕೆಜಿಎಫ್, ಶ್ರೀನಿವಾಸಪುರ, ಮುಳಬಾಗಿಲು ಇನ್ನಿತರೆಡೆ ಕುಡುಕರ ಸಂಭ್ರಮ ಹೆಚ್ಚಾಗಿತ್ತು. ಜಿಲ್ಲೆಯ ಗಡಿಭಾಗದ ತಮಿಳುನಾಡು, ಆಂಧ್ರದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡದಿರುವ ಹಿನ್ನೆಲೆಯಲ್ಲಿ ಅಲ್ಲಿನ ಅನೇಕರು ಜಿಲ್ಲೆಗೆ ಬಂದು ಮದ್ಯ ಖರೀದಿಸಿದ್ದಾರೆ. ಮದ್ಯದಂಗಡಿಗಳಲ್ಲಿ ಬಹುತೇಕ ಓಲ್ಡ್ ಸ್ಟಾಕ್ ಖಾಲಿ ಆಗಿದೆ, ಮಂಗಳವಾರ ಹೊಸ ಸ್ಟಾಕ್ ಬರಲಿದ್ದು ಏನೇನು ಅಧ್ವಾನವಾಗುತ್ತದೋ ಎಂದು ಪ್ರಜ್ಞಾವಂತ ನಾಗರಿಕರು ದುಗುಡ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಮತ್ತು ದಾನಿಗಳು ನೀಡಿದ ಪರಿಹಾರದಿಂದ ಜೀವನ ತಳ್ಳಿದ ಬಡವರಿಗೆ ಲಾಕ್‌ಡೌನ್ ಸಡಿಲಿಕೆಯಿಂದ ನಾಲ್ಕು ಕಾಸು ಸಂಪಾದಿಸಲು ಅವಕಾಶ ಸಿಕ್ಕಿದೆ. ಹಣವನ್ನು ಕುಡಿಯಲು ಖರ್ಚು ಮಾಡಿದರೆ ಕುಟುಂಬಸ್ಥರು ಉಪವಾಸ ಮಲಗಬೇಕಾಗುತ್ತದೆ. ಜಿಲ್ಲೆಯನ್ನು ರಕ್ಷಣೆ ಮಾಡಲು ಜಿಲ್ಲಾಡಳಿತಕ್ಕೆ ಅಧಿಕಾರ ನೀಡುವುದು ಸೂಕ್ತ.
ವಿ.ಗೀತಾ, ಮಹಿಳಾ ಹೋರಾಟಗಾರ್ತಿ, ಕೋಲಾರ