ತಗ್ಗಲಿದೆ ಚೆಕ್ ಡ್ಯಾಂಗಳ ಎತ್ತರ, ಕಾಲುವೆಗಳ ಒತ್ತುವರಿ, ನೀರು ಕಳವು ತಪ್ಪಿಸಲು ಸರ್ಕಾರ ನಿರ್ಧಾರ

30-klr-8 Alternative
Published on

ಕೋಲಾರ: ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಪಾಲಾರ್ ನದಿ ಪಾತ್ರದ ರಾಜ ಕಾಲುವೆಗಳಲ್ಲಿ ಜಿಪಂ ಮತ್ತು ಇನ್ನಿತರ ಇಲಾಖೆಗಳು ನಿರ್ಮಿಸಿರುವ ಚೆಕ್ ಡ್ಯಾಂಗಳಿಂದ ಕೆಸಿ ವ್ಯಾಲಿ ನೀರು ಹಾಗೂ ಮಳೆ ನೀರು ನಿಗದಿತ ಸಮಯಕ್ಕೆ ಕೆರೆಗಳಿಗೆ ಹರಿಯಲು ಅಡಚಣೆಯಾಗುವ ಹಿನ್ನೆಲೆಯಲ್ಲಿ ಚೆಕ್ ಡ್ಯಾಂಗಳ ಬಾಡಿವಾಲ್‌ನ ಎತ್ತರ ಕಡಿಮೆ ಮಾಡಲು ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.

ಈ ನಿರ್ಧಾರದಿಂದ ರಾಜ ಕಾಲುವೆಗಳ ಒತ್ತುವರಿ ತಪ್ಪಿಸಬಹುದಲ್ಲದೆ, ನೀರಿನ ದುರುಪಯೋಗ ತಡೆಬಹುದೆಂಬ ಲೆಕ್ಕಾಚಾರದಡಿ ಸಣ್ಣ ನೀರಾವರಿ ಇಲಾಖೆಯ ಟಾಸ್ಕ್ ಪೋರ್ಸ್ ಚೆಕ್ ಡ್ಯಾಂಗಳ ಬಾಡಿವಾಲ್‌ನ ಎತ್ತರ ಅವಶ್ಯಕತೆಗಿಂತ ಹೆಚ್ಚಿರುವ ಕಡೆ ಎತ್ತರವನ್ನು ವೈಜ್ಞಾನಿಕವಾಗಿ ಕತ್ತರಿಸಿ ವಿನ್ಯಾಸಕ್ಕೆ ತಕ್ಕಂತೆ ಗೇಟ್‌ಗಳನ್ನು ನಿರ್ಮಿಸಲು ಕಾಮಗಾರಿಗೆ ಚಾಲನೆ ನೀಡಿರುವುದರಿಂದ ಕೆರೆಗಳಿಗೆ ನಿಗದಿತ ಸಮಯಕ್ಕೆ ನೀರು ತುಂಬಿಸಲು ಸಾಧ್ಯವಾಗಲಿದೆ.

ಕೆಸಿ ವ್ಯಾಲಿ ಯೋಜನೆಯಡಿ 126 ಕೆರೆಗಳ ಪೈಕಿ 46 ಕೆರೆಗಳಿಗೆ ನೀರು ಹರಿದಿದೆ. ಉಳಿದ ಕೆರೆಗಳಿಗೆ ನೀರು ಹರಿಸಲು ಬಹುಕಮಾನು ಚೆಕ್ ಡ್ಯಾಂಗಳ ಬಾಡಿವಾಲ್ ಎತ್ತರಿಸಿರುವುದರಿಂದ ಗುರಿ ತಲುಪಲು ಕಷ್ಟ. ರಾಜಕಾಲುವೆ ಆಜುಬಾನಿನ ರೈತರು ನೀರನ್ನು ಅಕ್ರಮವಾಗಿ ಬಳಕೆ ಮಾಡಿಕೊಳ್ಳುವುದು ತಪ್ಪಿಸಬಹುದೆಂಬ ತಜ್ಞರ ಅಭಿಪ್ರಾಯ ಆಧರಿಸಿ ಸಣ್ಣ ನೀರಾವರಿ ಇಲಾಖೆ ಆಯುಕ್ತರು ಚೆಕ್ ಡ್ಯಾಂಗಳ ಬಾಡಿವಾಲ್ ಎತ್ತರ ಕತ್ತರಿಸಿ ಗೇಟ್ ಅಳವಡಿಸಲು ಅನುಮತಿ ನೀಡಿದ್ದಾರೆ.

ಕೆಸಿ ವ್ಯಾಲಿ ನೀರು ಲಕ್ಷ್ಮೀ ಸಾಗರ ಕೆರೆ ದಾಟಿ ಮುಂದಿನ ಕೆರೆಗಳಿಗೆ ಹರಿಯುತ್ತಿದ್ದಂತೆ ಅನೇಕ ರೈತರು ಜಮೀನಿಗೆ ಅಕ್ರಮವಾಗಿ ಹರಿಸುತ್ತಿರುವುದರಿಂದ ಉಳಿದ ಕೆರೆಗಳಿಗೆ ನೀರು ಹರಿಯುತ್ತಿರಲಿಲ್ಲ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಸಚಿವ ಮಾಧುಸ್ವಾಮಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಸಭೆ ನಡೆಸಿ ಅಕ್ರಮ ತಡೆಗಟ್ಟಲು ಮಾರ್ಷಲ್‌ಗಳ ನೇಮಕದ ಜತೆಗೆ ನೀರು ನಿಗದಿತ ಸಮಯಕ್ಕೆ ಕೆರೆಗಳಿಗೆ ಹರಿಯಲು ಇರುವ ತಾಂತ್ರಿಕ ದೋಷ ನಿವಾರಿಸಲು ಸೂಚಿಸಿದ್ದ ಮೇರೆಗೆ ಟಾಸ್ಕ್ ಪೋರ್ಸ್ ಸಮೀಕ್ಷೆ ನಡೆಸಿದಾಗ ಅವೈಜ್ಞಾನಿಕವಾಗಿ ಚೆಕ್ ಡ್ಯಾಂ ನಿರ್ಮಿಸಿರುವುದು ಕಂಡುಬಂದಿದ್ದರಿಂದ ಗೇಟ್‌ಗಳನ್ನು ಅಳವಡಿಸಲು ಅನುಮೋದನೆ ನೀಡುವ ಮೂಲಕ ಕೆಸಿ ವ್ಯಾಲಿ ನೀರು ದುರುಪಯೋಗ ಹಾಗೂ ವ್ಯರ್ಥವಾಗುವುದನ್ನು ತಪ್ಪಿಸಲು ಕಾರ್ಯೋನ್ಮುಖರಾಗಿದ್ದಾರೆ.

ಕೆಸಿ ವ್ಯಾಲಿ ನೀರು ಹಾಗೂ ಮಳೆ ನೀರು ಪೋಷಕ ಮತ್ತು ರಾಜಕಾಲುವೆ ಮೂಲಕ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸರಣಿಯಲ್ಲಿ ಹರಿಯಬೇಕು. ಆದರೆ ಕಾಲುವೆಗಳಿಗೆ ಅಡ್ಡಲಾಗಿ ವಿವಿಧ ಇಲಾಖೆಗಳಿಂದ ಅವಶ್ಯಕತೆಗಿಂತ ಹೆಚ್ಚಿನ ಎತ್ತರದ ಬಾಡಿವಾಲ್‌ನ ಚೆಕ್ ಡ್ಯಾಂ ನಿರ್ಮಿಸಲಾಗಿದೆ, ಇನ್ನಷ್ಟು ಕಡೆ ಇದೇ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವುದರಿಂದ ಕೆರೆಗಳಿಗೆ ನೀರು ನಿಗದಿತ ವೇಳೆಗೆ ತಲುಪಲು ಸಾಧ್ಯವಾಗದೆ ನೀರಿನ ದುರುಪಯೋಗಕ್ಕೆ ಕಾರಣವಾಗಿದೆ.

ಕಾಲುವೆಗಳ ಅಕ್ಕ-ಪಕ್ಕದ ಜಮೀನುಗಳಲ್ಲಿ ಅನುಮತಿ ಇಲ್ಲದೆ ಕೃಷಿಹೊಂಡ, ಬಾವಿ ಹಾಗೂ ಕೊಳವೆ ಕೊರೆಸಲು ಅವಕಾಶವಿಲ್ಲದಿದ್ದರೂ ಕೆಲವರು ನಿಯಮ ಉಲ್ಲಂಘಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆ ಆಯುಕ್ತರು ಚೆಕ್ ಡ್ಯಾಂಗಳ ಎತ್ತರವನ್ನು ಕತ್ತರಿಸಿ ಗೇಟ್ ಅಳವಡಿಸಲು ಅನುಮೋದನೆ ನೀಡಿರುವುದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ಪ್ರಯೋಜನವಾಗುತ್ತದೆ. ನೀರಿನ ದುರ್ಬಳಕೆ ಸಧ್ಯಕ್ಕೆ ನಿಂತಿದ್ದು, ಎಲ್ಲ ಕೆರೆಗಳಿಗೆ ನಿಗದಿತ ಸಮಯಕ್ಕೆ ನೀರು ಹರಿಸಲಾಗುವುದು.

ಕೃಷ್ಣ, ಎಇಇ, ಸಣ್ಣ ನೀರಾವರಿ ಇಲಾಖೆ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net