

ಕೋಲಾರ: ಜಿಲ್ಲೆಯ ಯಾವುದೇ ತಾಲೂಕಿಗೆ ಹೋದರೂ ಜನ ನೀರು ಬಿಟ್ಟು ಬೇರೆ ಏನೂ ಕೇಳುತ್ತಿಲ್ಲ, ಬರ ಪೀಡಿತ ಜಿಲ್ಲೆಯಾಗಿರುವುದರಿಂದ ಅಧಿಕಾರಿಗಳು ಸಮಸ್ಯಾತ್ಮಕ ಗ್ರಾಮಗಳಲ್ಲಿ ನೀರಿಗೆ ಅಭಾವ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಕುಡಿಯುವ ನೀರಿನ ಸಮಸ್ಯೆ ಕುರಿತ ಸಭೆ ನಡೆಸಿ, ನೀರಿನ ವ್ಯವಸ್ಥೆಗೆ ಅನುದಾನ ಬೇಕಿದ್ದರೆ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಟ್ಟರೆ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ನೀರಿನ ಸಮಸ್ಯೆ ನಿವಾರಿಸಲು ಅಧಿಕಾರಿಗಳ ತಂಡ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದು ಅಗತ್ಯವಿರುವೆಡೆ ಹೊಸದಾಗಿ ಕೊಳವೆಬಾವಿ ಕೊರೆಸಲು ಅನುಮೋದನೆ ನೀಡಲಾಗುತ್ತಿದೆ ಎಂದು ಜಿಪಂ ಸಿಇಒ ಎಚ್.ವಿ.ದರ್ಶನ್ ವಿವರಿಸಿದರು.
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಯಾವ ಯಾವ ತಾಲೂಕಿನಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಸಲು ಅನುಮೋದನೆ ನೀಡಿದ್ದೀರಾ? ಮಾಹಿತಿ ಕೊಡಿ ಎಂದು ಕೇಳಿದರು.
ಉತ್ತರಿಸಿದ ಸಿಇಒ, ಕೆಜಿಎಫ್ ಕ್ಷೇತ್ರದಲ್ಲಿ 36 ಕೊಳವೆಬಾವಿ ಕೊರೆಸಲು ಅನುಮೋದನೆ ನೀಡಲಾಗಿದೆ ಎಂದಾಗ ಕೆಜಿಎಫ್ ಒಂದರಲ್ಲೇ ನೀರಿನ ಸಮಸ್ಯೆಯಲ್ಲ. ಜಿಲ್ಲೆಯ ಎಲ್ಲೆಡೆ ನೀರಿನ ಬವಣೆ ಇರುವಾಗ ತಾರತಮ್ಯ ಏಕೆ ಎಂದು ಪ್ರಶ್ನಿಸಿದರು.
ಇದರಿಂದ ಬೇಸತ್ತ ಸಿಇಒ, ನೀರಿನ ವಿಚಾರದಲ್ಲಿ ತಾರತಮ್ಯ ಮಾಡುತ್ತಿಲ್ಲ. ಅನುಮಾನವಿದ್ದರೆ ಮಾಹಿತಿ ನೀಡಿ, ನನಗೆ ತಿಳಿದ ಮಟ್ಟಿಗೆ ಅಧಿಕಾರಿಗಳು ಸಮಸ್ಯೆ ಇರುವ ಕಡೆ ಹೋಗಿ ಪರಿಹಾರ ಕಲ್ಪಿಸುತ್ತಿದ್ದಾರೆ. ಒಟ್ಟು 170 ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಲಾಗಿದ್ದು, 51 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಸರಾಸರಿ 156 ಟ್ರಿಪ್ ಹಾಗೂ ಉಳಿದ ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
ಕೊಳವೆಬಾವಿ ಕೊರೆಸುವ ಮೊದಲು ನೀರಿನ ಲಭ್ಯತೆ ಬಗ್ಗೆ ಖಚಿತಪಡಿಸಿಕೊಳ್ಳಲಾಗುತ್ತಿದೆ. ರೈತರ ಕೊಳವೆ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ, ಗ್ರಾಪಂನಲ್ಲಿ ಕುಡಿಯುವ ನೀರಿಗೆ 14ನೇ ಹಣಕಾಸು ಅನುದಾನ ಉಪಯೋಗಿಸಿಕೊಳ್ಳಲಾಗುತ್ತಿದೆ. 1.75 ಕೋಟಿ ರೂ.ಗಳಿಗೆ ಕ್ರಿಯಾಯೋಜನೆ ತಯಾರಿಸಿದ್ದು, ಉಳಿದ 25 ಲಕ್ಷಕ್ಕೆ ಶೀಘ್ರ ಕ್ರಿಯಾಯೋಜನೆ ತಯಾರಿಸಲಾಗುವುದು ಎಂದರು.
ಪರಿಸ್ಥಿತಿ ಅರಿತ ಸಚಿವ ನಾಗೇಶ್, ಅಧಿಕಾರಿಗಳು ಯಾರಿಂದಲೂ ಟೀಕೆ ಬರದಂತೆ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು, ಜನಪ್ರತಿನಿಧಿಗಳು ನೀಡುವ ಸಲಹೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಬೇಕು, ನಮಗೆ ಸಮಸ್ಯೆ ನಿವಾರಣೆ ಆಗಬೇಕು ಎಂದು ಸೂಚಿಸಿದರು. ಜಿಪಂ ಉಪ ಕಾರ್ಯದರ್ಶಿ ಸಂಜೀವಪ್ಪ, ಅಪರ ಜಿಲ್ಲಾಧಿಕಾರಿ ಬಿ. ಶಿವಸ್ವಾಮಿ, ಉಪ ವಿಭಾಗಾಧಿಕಾರಿ ಸೋಮಶೇಖರ್ ಸಭೆಯಲ್ಲಿದ್ದರು.
ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಬಗೆಹರಿಸಲು ಅನುದಾನದ ಕೊರತೆಯಿಲ್ಲ, ತಾಲೂಕುವಾರು ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ರಚಿಸಿದ್ದು, ನೀರಾವರಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಆದ್ಯತೆ ಮೇರೆಗೆ 36 ಕೊಳವೆಬಾವಿಗಳನ್ನು ಸ್ಕ್ಯಾನಿಂಗ್ ಮಾಡಿಸಿ ರಿಡ್ರಿಲ್ಲಿಂಗ್ ಮಾಡಿಸಲು 46 ಲಕ್ಷ ಅನುದಾನ ಮೀಸಲಿಡಲಾಗಿದೆ. ಜಿಲ್ಲೆಯ 11 ಏಜೆನ್ಸಿಯವರಿಗೆ ಕೊಳವೆಬಾವಿ ಕೊರೆಸಲು ಅನುಮತಿ ನೀಡಲಾಗಿದೆ. ಸಿ.ಸತ್ಯಭಾಮ, ಜಿಲ್ಲಾಧಿಕಾರಿ