ಕೋಲಾರ ಅಭಿವೃದ್ಧಿ ಕಸಿದುಕೊಂಡ ಕರೊನಾ, ಚೇತರಿಕೆಗೆ ಬೇಕು ಕನಿಷ್ಠ 10 ವರ್ಷ

7-klr-11
Published on

ಪಾ.ಶ್ರೀ.ಅನಂತರಾಮ್, ಕೋಲಾರ

ಕರೊನಾ ಮಹಾಮಾರಿ ಜಗತ್ತಿನ ಎಲ್ಲ ದೇಶ, ರಾಜ್ಯ, ಜಿಲ್ಲೆ ಹಾಗೂ ಊರು-ಗಲ್ಲಿಗಳನ್ನು ತಲ್ಲಣಗೊಳಿಸಿದೆ, ಅಭಿವೃದ್ಧಿ ಕಾರ್ಯಗಳಿಗೆ ಮೀಸಲಾದ ಸಂಪತ್ತು ಜನರ ರಕ್ಷಣೆಗೆ ಬಳಕೆಯಾಗುತ್ತಿದೆ, ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ಹತ್ತಾರು ವರ್ಷಗಳು ಬೇಕಾಗಬಹುದು ಎಂಬ ಜಿಜ್ಞಾಸೆ ಆರಂಭವಾಗಿದೆ.

ಆರ್ಥಿಕ ಸಂಪನ್ಮೂಲ ಸದೃಢವಾಗಿರುವ ಪ್ರದೇಶಗಳಲ್ಲಿ ಚೇತರಿಕೆಗೆ ಅಷ್ಟೇನೂ ಅಡ್ಡಿಯಾಗಲಾರದು. ಆದರೆ, ಕೋಲಾರದಂತಹ ಬರ ಪೀಡಿತ ಹಾಗೂ ಹಿಂದುಳಿದ ಜಿಲ್ಲೆಗಳಿಗೆ ಕರೊನಾ ಕಂಟಕವಾಗಿದ್ದು ಸರ್ಕಾರ ಮತ್ತು ಉಳ್ಳವರು ಸಹಕರಿಸದಿದ್ದರೆ ಜನರ ಗೋಳು ಮುಗಿಯದ ಕಥೆ ಆಗುವುದರಲ್ಲಿ ಅನುಮಾನವಿಲ್ಲ. ಜಿಲ್ಲಾ ಕೇಂದ್ರ ಕೋಲಾರ ಕಳೆದ 70 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದ್ದರೂ ಜನಸಂಖ್ಯಾ ಸ್ಫೋಟ, ಸಂಪತ್ತಿನ ಕೊರತೆ, ಜನಪ್ರತಿನಿಧಿಗಳಲ್ಲಿನ ಇಚ್ಛಾಶಕ್ತಿ ಕೊರತೆ, ತೆರಿಗೆಗಳ್ಳರಿಂದಾಗಿ ನಿರೀಕ್ಷಿತ ಪ್ರಗತಿ ಕಾಣದೆ ಹಳ್ಳಿಗಿಂತ ಕಡೆಯಾಗಿದೆ.

2011ರ ಜನಗಣತಿ ಪ್ರಕಾರ ನಗರದ ಜನಸಂಖ್ಯೆ 1,38,662 ಇದ್ದು, ಈಗ 2 ಲಕ್ಷ ದಾಟಿರಬಹುದು. ನಗರಸಭೆ ವ್ಯಾಪ್ತಿಯಲ್ಲಿ 16097 ಮನೆಗಳು, 6550 ವಾಣಿಜ್ಯ ಕಟ್ಟಡಗಳು, 11590 ಖಾಲಿ ನಿವೇಶನ ಸೇರಿ ಒಟ್ಟು 34237 ಆಸ್ತಿಗಳಿವೆ, ಕೆಲವು ವಾರ್ಡುಗಳಲ್ಲಿ ಆಗ್ರಿಮೆಂಟ್ ಸೈಟುಗಳಲ್ಲಿ ಕಟ್ಟಡ ನಿರ್ಮಿಸಿದ್ದು ನಗರಸಭೆಯಿಂದ ಎಲ್ಲ ಸೌಕರ್ಯ ಕಲ್ಪಿಸುತ್ತಿದ್ದರೂ ದಾಖಲೆಗಳಿಲ್ಲದೆ ತೆರಿಗೆ ಸಂಗ್ರಹಣೆಗೆ ಅಡ್ಡಿಯಾಗಿದೆ.

ನಗರದಲ್ಲಿ 6426 ಮನೆಗಳಿಗೆ ನೀರಿನ ವ್ಯವಸ್ಥೆ ಉಂಟು, ಪೈಪ್‌ಲೈನ್ ಇಲ್ಲದೆಡೆ ಟ್ಯಾಂಕರ್‌ನಿಂದ ನೀರು ಪೂರೈಕೆಯಾಗುತ್ತಿದೆ. ನೀರಿನ ತೆರಿಗೆ ವಾರ್ಷಿಕ 5 ಕೋಟಿ ರೂ. ನಿರೀಕ್ಷಿಸಿದ್ದರೂ ಕಳೆದ ವರ್ಷದ್ದೇ 1.15 ಕೋಟಿ ರೂ. ಬಾಕಿಯಿದೆ. ವಾಣಿಜ್ಯ ತೆರಿಗೆ ಕಳೆದ ವರ್ಷ ಶೇ.65ರಷ್ಟು ಪ್ರಗತಿ ಸಾಧಿಸಿದ್ದು ಈ ಸಲ ವಸೂಲಾತಿ ಕಷ್ಟವಾಗಬಹುದು.

ನೀರು ಮತ್ತು ವಾಣಿಜ್ಯ ತೆರಿಗೆಯನ್ನು ಏ.1ರೊಳಗೆ ಪಾವತಿಸುವವರಿಗೆ ಶೇ.5 ರಿಯಾಯಿತಿ ನೀಡಲು ನಗರಸಭೆ ನಿರ್ಧರಿಸಿತ್ತು. ಆದರೆ ಕರೊನಾದಿಂದ ಮೇ 31ರವರೆಗೆ ಗಡುವು ನೀಡಲಾಗಿದೆಯಾದರೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಕುಸಿತ, ಬಡವರು ಮತ್ತು ಮಧ್ಯಮ ವರ್ಗದವರ ಬಳಿ ಹಣ ಕೇಳುವುದು ಹೇಗೆ ಎಂಬ ಜಿಜ್ಞಾಸೆ ಉಂಟಾಗಿರುವುದರಿಂದ ನಗರಸಭೆಯ ಆರ್ಥಿಕ ಸ್ಥಿತಿಯ ಮೇಲೆ ದುಷ್ಪರಿಣಾಮ ಉಂಟಾಗಲಿದೆ.

ನಗರಸಭೆಗೆ 14 ಮತ್ತು 15ನೇ ಹಣಕಾಸು ಯೋಜನೆಯಡಿ ಸಿಗುವ ಅನುದಾನ, ನಗರೋತ್ಥಾನ, ಅಮೃತ ಸಿಟಿ ಯೋಜನೆ, ಸಿಆರ್‌ಎಫ್ ನಿಧಿಯಿಂದ ಅನುದಾನ ಕಡಿತಗೊಳ್ಳುವ ಸಾಧ್ಯತೆಗಳಿದ್ದು, ಜಿಲ್ಲಾ ಕೇಂದ್ರದಲ್ಲಿ ಅನುಷ್ಠಾನಗೊಳ್ಳಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುವ ಸಾಧ್ಯತೆಗಳಿವೆ.

ಕರೊನಾದಿಂದ ನಗರದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರಿದ್ದು ನೀರು, ರಸ್ತೆ,ಚರಂಡಿ, ಬೀದಿ ದೀಪ ಸೇರಿ ವಿವಿಧ ಕಾಮಗಾರಿಗಳಿಗೆ ಹಣದ ಕೊರತೆಯಿಂದ ಅಭಿವೃದ್ಧಿ ಕುಂಠಿತವಾಗುವುದರಿಂದ ಚೇತರಿಕೆಗೆ ಕನಿಷ್ಠ 5ರಿಂದ10 ವರ್ಷ ಹಿಡಿಯುವ ಲಕ್ಷಣದ ಜತೆಗೆ ಸಮಗ್ರ ಅಭಿವೃದ್ಧಿಗೆ 1000 ಕೋಟಿ ರೂ. ಬೇಕಾಗುವುದರಿಂದ ದೊಡ್ಡ ಮೊತ್ತ ಕ್ರೋಡೀಕರಿಸುವುದು ಸವಾಲಾಗಿದೆ.

ಕರೊನಾದಿಂದ ಕೋಲಾರ ನಗರದ ಅಭಿವೃದ್ಧಿಗೆ ದೊಡ್ಡ ಹೊಡೆತ ಬಿದ್ದಿದೆ. ತೆರಿಗೆ ಸಂಗ್ರಹಣೆ ಇಲ್ಲದೆ ಮೂಲ ಸೌಕರ್ಯ ಒದಗಿಸುವುದು ಅಸಾಧ್ಯ, ಜನರ ಬಳಿ ಹಣ ಕೇಳುವುದು ಕಷ್ಟವಾಗಬಹುದು. ನಗರಸಭೆ ಸಿಬ್ಬಂದಿಗೆ ಸಂಬಳ ನೀಡಲು ಸಮಸ್ಯೆಯಾದರೆ ಅಭಿವೃದ್ಧಿ ಎಲ್ಲಿಂದ ನಿರೀಕ್ಷಿಸಲು ಸಾಧ್ಯ. ಕರೊನಾದಿಂದ ದೇಶ ಬೇಗನೆ ಮುಕ್ತವಾದಲ್ಲಿ ಕೋಲಾರ ನಗರವೂ ಅದಷ್ಟು ಬೇಗನೆ ಚೇತರಿಕೆ ಕಾಣುತ್ತದೆ, ಇಲ್ಲದಿದ್ದರೆ ಸುಧಾರಣೆಗೆ ಕನಿಷ್ಠ 10 ವರ್ಷ ಬೇಕಾಗಬಹುದು. ಬಿ.ಎಂ.ಮುಬಾರಕ್, ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ, ಕೋಲಾರ ಕರೊನಾದಿಂದ ನಗರದ ಅಭಿವೃದ್ಧಿ ಮೇಲೆ ಪರಿಣಾಮ ಬೀರಿದೆ, ಏಪ್ರಿಲ್ ಸಂಬಳ ಇನ್ನೂ ನೀಡಲಾಗಿಲ್ಲ, ತೆರಿಗೆ ವಸೂಲಿಗೆ ಜನರ ಬಳಿ ಹೋಗಲು ಭಯವಾಗುತ್ತಿದೆ, ನಗರಸಭೆಯನ್ನು ಕಷ್ಟದಿಂದ ಪಾರು ಮಾಡಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ, ತೆರಿಗೆ ಬಾಕಿ ಉಳಿಸಿಕೊಂಡಿರುವವರು ಪಾವತಿಸಿದರೆ ಅನುಕೂಲ. ಶ್ರೀಕಾಂತ್, ಪೌರಾಯುಕ್ತ, ನಗರಸಭೆ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net