ತರಕಾರಿ ಹಾಗೂ ಕೃಷಿ ಉತ್ಪನ್ನ ಸಾಗಾಟಕ್ಕೆ ತೊಂದರೆಯಾಗದಿರಲಿ

5-klr-2
Published on

ಕೋಲಾರ: ತರಕಾರಿ ಹಾಗೂ ಕೃಷಿ ಉತ್ಪನ್ನಗಳ ಸಾಗಾಟ ಮತ್ತು ಮಾರಾಟಕ್ಕೆ ಯಾವುದೇ ಅಡೆತಡೆ ಉಂಟಾಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಮಹದೇವನ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೋವಿಡ್ -19 ನಿಯಂತ್ರಣ ಸಭೆಯಲ್ಲಿ ಮಾತನಾಡಿ, ಸೋಮವಾರದಿಂದ ಜಿಲ್ಲೆಯಲ್ಲಿರುವ ಫುಡ್ ಪ್ರೊಸೆಸಿಂಗ್ ಘಟಕಗಳು ಪ್ರಾರಂಭವಾಗಬೇಕು. ಜ್ಯೂಸ್ ಕಂಪನಿಗಳು ಉತ್ಪಾದನೆ ಪ್ರಾರಂಭಿಸಬೇಕು. ಇದರಿಂದ ಜಿಲ್ಲೆಯ ರೈತರು ಬೆಳೆದ ಹಣ್ಣುಗಳ ವಿಲೇವಾರಿಗೆ ಅನುಕೂಲವಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಹೆಚ್ಚಾಗಿ ಟೊಮ್ಯಾಟೊ ಹಾಗೂ ಕ್ಯಾಪ್ಸಿಕಂ ಬೆಳೆದಿದ್ದು, ಇದನ್ನು ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ಮಾರಾಟ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.

ಕರೋನಾ ಸೋಂಕು ಸಂಬಂಧಿಸಿದಂತೆ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ. ಮುಂದಿನ ದಿನಗಳಲ್ಲಿ ಪ್ರಕರಣ ಕಂಡುಬಂದರೆ ಚಿಕಿತ್ಸೆಗೆ ಸಿದ್ಧರಾಗಿರಿ ಎಂದು ಡಿಎಚ್‌ಒಗೆ ಸೂಚಿಸಿದರಲ್ಲದೆ ಸಾರ್ವಜನಿಕರು ಈಗಾಗಲೆ ಬಳಸಿರುವ ಮಾಸ್ಕ್‌ಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಬಳಸಿದ ಮಾಸ್ಕ್‌ಗಳಿಂದಲೂ ಕರೊನಾ ಸೋಂಕು ಹರಡುವ ಸಾಧ್ಯತೆ ಇರುತ್ತದೆ ಎಂದರು.

ಜಿಲ್ಲೆಯಲ್ಲಿ ಕರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಕೈಗೊಂಡಿರುವ ಕ್ರಮಗಳ ಕುರಿತು ವಿವರವಾದ ಮಾಹಿತಿ ನೀಡಿದ ಡಿಸಿ ಸಿ.ಸತ್ಯಭಾಮ, ಜಿಲ್ಲೆಯಲ್ಲಿ 17 ಫೀವರ್ ಕ್ಲಿನಿಕ್‌ಗಳನ್ನು ತೆರೆಯಲಾಗಿದೆ. ಜಿಲ್ಲೆಯ ಎಲ್ಲ ಖಾಸಗಿ ಕ್ಲಿನಿಕ್ ಹಾಗೂ ಆಸ್ಪತ್ರೆಗಳನ್ನು ತೆರೆದಿಡುವಂತೆ ನೋಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಯಾವುದಾದರು ಪಾಸಿಟಿವ್ ಕಂಡುಬಂದರೆ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಜಿಪಂ ಸಿಇಒ ಎಚ್. ವಿ. ದರ್ಶನ್, ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ, ಕೆಜಿಎಫ್ ಎಸ್ಪಿ ಮಹಮದ್ ಸುಜಿತಾ, ಎಡಿಸಿ ಬಿ.ಶಿವಸ್ವಾಮಿ, ಎಸಿ ಸಿ.ಸೋಮಶೇಖರ್, ಜಿಪಂ.ಉಪಕಾರ್ಯದರ್ಶಿ ಸಂಜೀವಪ್ಪ, ಡಿಎಚ್‌ಒ ಡಾ.ಎಸ್.ಎನ್.ವಿಜಯಕುಮಾರ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಚಾರಿಣಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net