ಫೋನ್‌ಇನ್ ಕಾರ್ಯಕ್ರಮದಲ್ಲಿ ಜನತೆಗೆ ಕರೊನಾಗಿಂತ ನೀರಿನ ಭಯ

Published on

ಕೋಲಾರ: ದೇಶಾದ್ಯಂತ ಕರೊನಾ ಭಯದಿಂದ ಜನ ತತ್ತರಿಸುತ್ತಿದ್ದಾರೆ. ಇತ್ತ ಜಿಲ್ಲೆಯ ಜನ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.

ಕರೊನಾ ಸೇರಿ ವಿವಿಧ ಸಮಸ್ಯೆಗಳ ಕುರಿತು ಜನರ ಅಭಿಪ್ರಾಯ, ಸಲಹೆಗಾಗಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಗುರುವಾರ ಡಿಸಿ ಕಚೇರಿಯಲ್ಲಿ ನಡೆಸಿದ 2 ಗಂಟೆಗಳ ಫೋನ್‌ಇನ್ ಕಾರ್ಯಕ್ರಮದಲ್ಲಿ 118 ಜನರ ಪೈಕಿ ಶೇ.90 ಜನ ಕುಡಿಯಲು ಶುದ್ಧ ನೀರು ಕೊಡಿ ಎಂದು ಆಗ್ರಹಿಸಿದರು.

ಕರೆ ಮಾಡಿದವರೊಂದಿಗೆ ತಾಳ್ಮೆಯಿಂದ ಸಂಭಾಷಿಸಿದ ಡಿಸಿ ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್ ನೀರು ಒದಗಿಸಲಾಗುತ್ತಿದೆ, ಸಿಆರ್‌ಎಫ್ ನಡಿ ಸಲ್ಲಿಸಿದ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ, ಗ್ರಾಮಗಳ ನೀರಿನ ಸಮಸ್ಯೆಯನ್ನು ಎರಡು-ಮೂರು ದಿನಗಳಲ್ಲಿ ನಿವಾರಿಸುವ ಭರವಸೆ ನೀಡಿದರು.

ಶುದ್ಧ ನೀರಿಗಾಗಿ ಆರ್‌ಒ ಘಟಕ ಮಂಜೂರಾತಿಗೆ ಮುಳಬಾಗಿಲಿನ ಕಲ್ಕರೆಯ ಸುಧಾಕರ್ ತಿಳಿಸಿದಾಗ, ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹಾಲಿ ಇರುವ ಘಟಕ ದುರಸ್ತಿಗೊಳಿಸಿ ನೀರಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಹಳ್ಳಿಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂಬ ಸಲಹೆಗೆ ಪ್ರತಿಕ್ರಿಯಿಸಿದ ಅವರು, ಪಿಡಿಒಗಳಿಗೆ ಮುತುವರ್ಜಿ ವಹಿಸಿ ಕೆಲಸ ಮಾಡಲು ಸೂಚಿಸಲಾಗಿದೆ, ಜಿಪಂ ಸಿಇಒ ಪ್ರತಿದಿನ ನನಗೆ ವರದಿ ನೀಡುತ್ತಿದ್ದಾರೆ ಎಂದರು.

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತರಕಾರಿ ಮಾರಾಟಕ್ಕೆ ನಗರದ ಜೂನಿಯರ್ ಕಾಲೇಜು ಮೈದಾನವನ್ನು ಆಯ್ಕೆ ಮಾಡಿಕೊಂಡ ರೀತಿಯಲ್ಲೇ ನಗರದ ಇನ್ನಿತರ ಕಡೆ ಮಾರುಕಟ್ಟೆ ವ್ಯವಸ್ಥೆ ಮಾಡುವಂತೆ ಕೋಲಾರದ ಸುಹಾಸ್ ಸಲಹೆ ನೀಡಿದರೆ, ಸೂಪರ್ ಮಾರ್ಕೆಟ್‌ಗಳಲ್ಲಿ ಸಿಬ್ಬಂದಿಗಳೇ ಸಾಮಗ್ರಿ ನೀಡುವಂತಾಗಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ ಸಲಹೆ ನೀಡಿದರು.

ಮುದವತ್ತಿಯ ವಿಶ್ವನಾಥ್ ಕೆಸಿ ವ್ಯಾಲಿ ನೀರಿನ ದುರುಪಯೋಗ ತಡೆಗೆ ಒತ್ತಾಯಿಸಿದಾಗ, ನಿರ್ದಿಷ್ಟ ಪ್ರಕರಣ ತಿಳಿಸಿದಲ್ಲಿ ಕ್ರಮ ಜರುಗಿಸಲಾಗುವುದು ಎಂದರು.

ಭೇದ-ಭಾವ ಇಲ್ಲ: ಕರೊನಾ ವಿರುದ್ಧ ಪ್ರತಿಯೊಬ್ಬರೂ ಹೋರಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳದ ಜನರಿಗೆ ಸಾಕಷ್ಟು ಸಾರಿ ಬುದ್ಧಿ ಹೇಳಿದರೂ ಉದ್ಧಟತನ ತೋರುವವರಿಗೆ ಪಾಠ ಕಲಿಸುವುದು ಅನಿವಾರ್ಯ, ಸಮುದಾಯಗಳೊಂದಿಗೆ ಗುರುತಿಸಿಕೊಂಡವರು ಜನ ಜಾಗೃತಿ ಮೂಡಿಸುವ ಮೂಲಕ ಅನಾಹುತ ತಪ್ಪಿಸಬೇಕೆಂದು ನಗರಸಭೆ ಮಾಜಿ ಸದಸ್ಯ ಅಪ್ರೋಜ್ ಪಾಷಾಗೆ ಸತ್ಯಭಾಮ ಕಿವಿಮಾತು ಹೇಳಿದರು.

ಕೆಲವರ ಕರೆಗೆ ಉತ್ತರಿಸಿದ ಜಿಪಂ ಸಿಇಒ ಎಚ್.ಎ.ದರ್ಶನ್ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಬವಣೆ ನಿವಾರಿಸಲು ಜಿಲ್ಲಾಮಟ್ಟದಲ್ಲಿ ಟಾಸ್ಕ್ ಪೋರ್ಸ್ ರಚನೆ ಜತೆಗೆ ಗ್ರಾಪಂ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಜಿಲ್ಲಾ ಆಡಳಿತಕ್ಕೆ ಪ್ರಶಂಸೆ: ಕರೊನಾ ವೈರಸ್ ಜಿಲ್ಲೆಯನ್ನು ಆವರಿಸಿಕೊಳ್ಳದಂತೆ ಮುಂಜಾಗ್ರತಾ ಕ್ರಮ ಕೈಗೊಂಡ ಜಿಲ್ಲಾಡಳಿತಕ್ಕೆ ಬಂಗಾರಪೇಟೆಯ ಹರೀಶ್ ಇನ್ನಿತರರು ಪ್ರಶಂಸೆ ವ್ಯಕ್ತಪಡಿಸಿದರು.

ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ, ಕೆಜಿಎಫ್ ಎಸ್ಪಿ ಮಹಮದ್ ಸುಜೀತ ಕರೆ ಮಾಡಿದವರಿಗೆ ಮಾಹಿತಿ ನೀಡಿದರು. ಎಡಿಸಿ ಬಿ.ಶಿವಸ್ವಾಮಿ, ಡಿಎಚ್‌ಒ ಡಾ.ಎಸ್.ಎನ್.ವಿಜಯಕುಮಾರ್, ಜಿಲ್ಲಾಸ್ಪತ್ರೆ ಸರ್ಜನ್ ಡಾ.ಎಸ್.ಜಿ.ನಾರಾಯಣಸ್ವಾಮಿ, ಆಹಾರ ಇಲಾಖೆ ಉಪನಿರ್ದೇಶಕ ನಾಗರಾಜ್ ಕೆಳಗಿನಮನೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಿಣಿ, ಅಬಕಾರಿ ಡಿಸಿ ಕೆ.ಕೆ.ಸುಮಿತಾ, ಕೃಷಿ ಇಲಾಖೆ ಜೆಡಿ ಡಾ.ಶಿವಕುಮಾರ್, ತೋಟಗಾರಿಕೆ ಇಲಾಖೆ ಡಿಡಿ ಗಾಯತ್ರಿ, ನಗರಾಭಿವೃದ್ಧಿ ಕೋಶದ ಪಿಡಿ ಎಂ.ರಂಗಸ್ವಾಮಿ, ಸಣ್ಣ ನೀರಾವರಿ ಇಲಾಖೆ ಇಇ ಸುರೇಶ್ ಕುಮಾರ್ ಇನ್ನಿತರ ಇಲಾಖೆ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಐಟಿ ಟೀಂ: ಡಿಸಿ ಕಚೇರಿಯ ಐಟಿ ಟೀಂನ ಗುರುಪ್ರಸಾದ್, ಹರಿಪ್ರಸಾದ್, ಬಿ.ಎಂ.ಮುನಿವೆಂಕಟಪ್ಪ, ಜೆ.ರವಿಕುಮಾರ್, ಹರಿಪ್ರಸಾದ್, ಸ್ವಾತಿ ಹಾಗೂ ಗೌತಮ್ ಫೋನ್ ಇನ್ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ದಕ್ಷತೆ ತೋರಿ ಮೆಚ್ಚುಗೆ ಗಳಿಸಿದರು.

ಏ.5ರಂದು ಪ್ರತಿಯೊಬ್ಬರೂ ಮನೆಗಳಲ್ಲಿದ್ದು ಬೆಳಕು ಪಸರಿಸುವ ಮೂಲಕ ಒಗ್ಗಟ್ಟು ಸಾಬೀತು ಮಾಡಬೇಕೆಂಬ ಪ್ರಧಾನಿ ಕರೆಗೆ ಜಿಲ್ಲೆಯ ಜನತೆ ಬೆಂಬಲ ನೀಡಬೇಕು, ಅಂದು ರಾತ್ರಿ 9 ಗಂಟೆಗೆ 9 ನಿಮಿಷ ಕರೆಂಟ್ ಆ್ ಮಾಡಿ ಎಣ್ಣೆ ದೀಪ, ಬುಡ್ಡಿದೀಪ, ಕ್ಯಾಂಡಲ್ ಅಥವಾ ಮೊಬೈಲ್ ಟಾರ್ಚ್ ಆನ್ ಮಾಡಿ ಬೆಳಕು ಹರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಿ.ಸತ್ಯಭಾಮ, ಜಿಲ್ಲಾಧಿಕಾರಿ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net