

ಕೋಲಾರ: ಕರೊನಾ ನಿಯಂತ್ರಣಕ್ಕೆ ಸರ್ಕಾರದ ಕಾರ್ಯಕ್ರಮಗಳು ಮಾಮೂಲಿ ಸ್ಕೀಂ ಅಲ್ಲ, ಜನರ ಪ್ರಾಣಕ್ಕೆ ತಂದಿರುವ ಸ್ಕೀಂಗಳು. ಅಲರ್ಟ್ ಆಗಿದ್ದು ಒಂದು ಜೀವವೂ ಹೋಗದಂತೆ ಕಾರ್ಯನಿರ್ವಹಿಸಬೇಕು ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ತುರ್ತು ಸಭೆಯಲ್ಲಿ ಡಿಎಚ್‌ಒ ಕಾರ್ಯನಿರ್ವಹಣೆಗೆ ಅತೃಪ್ತಿ ವ್ಯಕ್ತಪಡಿಸಿ ಅಲರ್ಟ್ ಆಗಿದ್ದು ಪರಿಸ್ಥಿತಿ ನಿಭಾಯಿಸಿ, ಸ್ವಲ್ಪ ಯಾಮಾರಿದರೂ ಜನರ ಜೀವಕ್ಕೇ ಆಪತ್ತು. ಅವಶ್ಯ ಪರಿಕರಗಳನ್ನು ಆಸ್ಪತ್ರೆಗಳಿಗೆ ಪೂರೈಸಿ, ಸರ್ಕಾರದಲ್ಲಿ ಪಿಪಿಇ ಕಿಟ್ ಕೊರತೆಯಿದೆ. ಜಿಲ್ಲಾಡಳಿತ ಲಭ್ಯವಿರುವ ಸಂಪನ್ಮೂಲದಲ್ಲಿ ಕಿಟ್ ತರಿಸಿಕೊಳ್ಳಿ ಎಂದರು.
ಲಾಠಿ ಹಿಡಿಯಿರಿ: ಲಾಕ್‌ಡೌನ್ ಉಲ್ಲಂಘಿಸಿ ಜನರ ಅನಗತ್ಯ ಓಡಾಟ ಕಂಡರೆ ಜಿಲ್ಲಾ ದಂಡಾಧಿಕಾರಿಗಳಾಗಿ ನೀವೇ ಲಾಠಿ ಹಿಡಿದರೆ ತಪ್ಪೇನಿಲ್ಲ ಎಂದು ಜಿಲ್ಲಾಧಿಕಾರಿಗೆ ಸಲಹೆ ನೀಡಿದರು.
ಏ. 6ರಂದು ತೀರ್ಮಾನ: ರೈತರು ತರಕಾರಿ, ಹಣ್ಣು ಮಾರಲಾಗದೆ ಸಂಕಷ್ಟದಲ್ಲಿದ್ದು, ಸರ್ಕಾರ ಮಧ್ಯಪ್ರವೇಶಕ್ಕೆ ಸರ್ವ ಪಕ್ಷಗಳ ಸಭೆಯಲ್ಲಿ ತೀರ್ಮಾನಿಸಿದ್ದರಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು, ನಷ್ಟ ಪರಿಹಾರ ಬಗ್ಗೆ ಏ.6ರ ಸಭೆಯಲ್ಲಿ ತೀರ್ಮಾನವಾಗಲಿದೆ. ರೈತರಿಗೆ ಕೀಟನಾಶಕ ಅಂಗಡಿ ತೆರೆಯಲು ಅವಕಾಶ ಕಲ್ಪಿಸಬೇಕು, ವಿದ್ಯುತ್ ಏರಿಳಿತದಿಂದ ಮೋಟಾರ್ ಸುಟ್ಟುಹೋಗುತ್ತಿದ್ದು, ರಿವೈಂಡಿಂಗ್ ಮಾಡುವವರಿಗೆ ಕೆಲಸಕ್ಕೆ ಅನುವು ಮಾಡಿಕೊಡಬೇಕು ಎಂದು ಡಿಸಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 95 ಕಡೆ ಕುಡಿಯುವ ನೀರಿನ ಸಮಸ್ಯೆಯಿರುವ ಬಗ್ಗೆ ಗ್ರಾಮೀಣ ನೀರು ಸರಬರಾಜು ಇಲಾಖೆ ಇಇ ವೆಂಕಟಾಚಲಯ್ಯ ಸಭೆಗೆ ಮಾಹಿತಿ ನೀಡಿದಾಗ ಬಹುತೇಕ ರಿಗ್ ಮಾಲೀಕರು ತಮಿಳುನಾಡಿನವರು, ಎಲ್ಲರೂ ಊರಿಗೆ ಹೋಗಿರುವುದರಿಂದ ಸಂಬಂಧಪಟ್ಟವರ ಜತೆ ಚರ್ಚಿಸಿ ಅವಶ್ಯವಿರುವೆಡೆ ಬೋರ್‌ವೆಲ್ ಕೊರೆಸಲು ಕ್ರಮ ವಹಿಸಿ ಎಂದು ಸಿಇಒಗೆ ಸೂಚಿಸಿದರು.
ಮನೆಬಾಗಿಲಿಗೆ ಪಡಿತರ: ಪಿಡಿಒ, ಇತರ ಅಧಿಕಾರಿಗಳ ಸಹಕಾರದಿಂದ ಮನೆಬಾಗಿಲಿಗೆ ಪಡಿತರ ತಲುಪಿಸಿ ರಾಜ್ಯಕ್ಕೆ ಮಾದರಿಯಾಗಿ, ಈ ಬಗ್ಗೆ ಖಜಾನಾಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸುವಂತೆ ಹೇಳಿದರು.
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಲಾಕ್‌ಡೌನ್ ಆದೇಶ ಉಲ್ಲಂಘಿಸಿ ರಸ್ತೆಯಲ್ಲಿ, ಗಡಿ ಭಾಗದಲ್ಲಿ ಜನ ಅನಗತ್ಯವಾಗಿ ಓಡಾಡುತ್ತಿರುವುದರಿಂದ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಗಡಿಭಾಗದಲ್ಲಿ ಯಾರೇ ಬಂದರೂ ಅವರನ್ನು ಕೂಲಂಕುಶವಾಗಿ ವಿಚಾರಣೆ ನಡೆಸಬೇಕು, ಹಣ್ಣು, ತರಕಾರಿ ಸಾಗಾಟ ಮಾಡುವ ರೈತರಿಗೆ ತೊಂದರೆ ನೀಡಬಾರದು ಎಂದು ಸೂಚಿಸಿದರು.
ಕಟ್ಟು ನಿಟ್ಟು ಜಾರಿ: ಬಂಗಾರಪೇಟೆ ಭಾಗದಲ್ಲಿ ಬೀಡುಬಿಟ್ಟಿರುವ ದೆಹಲಿ ಮೂಲದ 18 ಮಂದಿ ಧರ್ಮ ಪ್ರಚಾರಕರನ್ನು ಕರೊನಾ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ ಮಾಡದೆ ಮಸೀದಿಯಲ್ಲಿ ಉಳಿದ ಬಗ್ಗೆ ವಿಳಂಬವಾಗಿ ಮಾಹಿತಿ ನೀಡಿದ ಕೆಜಿಎಫ್ ಎಸ್ಪಿ ಮಹಮದ್ ಸುಜೀತಾ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಡಿಸಿ ಸಿ.ಸತ್ಯಭಾಮ ಎಲ್ಲರನ್ನೂ ಆರ್.ಎಲ್. ಜಾಲಪ್ಪ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ರಕ್ತ, ಗಂಟಲುದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದರು.
ಶಾಸಕರಾದ ಕೆ.ಶ್ರೀನಿವಾಸಗೌಡ, ಕೆ.ವೈ. ನಂಜೇಗೌಡ, ಎಂ. ರೂಪಕಲಾ, ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹಮದ್, ತೂಪಲ್ಲಿ ಚೌಡರೆಡ್ಡಿ, ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಉಪಾಧ್ಯಕ್ಷೆ ಯಶೋಧ ಕೃಷ್ಣಮೂರ್ತಿ, ಸಿಇಒ ಎಚ್.ವಿ. ದರ್ಶನ್, ಎಸ್ಪಿಗಳಾದ ಕಾರ್ತಿಕ್‌ರೆಡ್ಡಿ, ಮಹಮದ್ ಸುಜೀತಾ, ಡಿಎಚ್‌ಒ ಡಾ.ಎಸ್.ಎನ್.ವಿಜಯಕುಮಾರ್, ಜಿಲ್ಲಾ ಸರ್ಜನ್ ಡಾ. ಎಸ್.ಜಿ.ನಾರಾಯಣಸ್ವಾಮಿ, ಐಎಂಎ ಅಧ್ಯಕ್ಷ ಡಾ. ನಾರಾಯಣಸ್ವಾಮಿ ಇತರರಿದ್ದರು.
ಜಿಲ್ಲೆಯ ಎಲ್ಲ ಶಾಸಕರು, ಸಂಸದರಿಗೆ ಪ್ರತಿ ದಿನವೂ ಜಿಲ್ಲಾ ಮಟ್ಟದ ಹೆಲ್ತ್ ಬುಲೆಟಿನ್ ಅನ್ನು ವಾಟ್ಸ್ ಆ್ಯಪ್ ಗ್ರೂಪ್‌ಗೆ ಕಳುಹಿಸುವಂತೆ ಡಿಸಿಗೆ ಸೂಚಿಸಿದರು. ಆಂಧ್ರ, ತಮಿಳುನಾಡು ಗಡಿಯಲ್ಲಿ ಕಟ್ಟೆಚ್ಚರ ವಹಿಸಬೇಕು, ದಿನಬಳಕೆ ವಸ್ತು ಖರೀದಿಗೆ ಸಮಯ ನಿಗದಿಪಡಿಸಬೇಕು. ಎಚ್.ನಾಗೇಶ್, ಜಿಲ್ಲಾ ಉಸ್ತುವಾರಿ ಸಚಿವ