

ಕೋಲಾರ: ಕರೊನಾ ಸೋಂಕು ಹರಡುವಿಕೆ ತಡೆಗಟ್ಟುವ ಸಲುವಾಗಿ ಇಡೀ ದೇಶವೇ ಲಾಕ್‌ಡೌನ್ ಆಗಿದೆ, ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡುವಂತೆ ಕೇಂದ್ರ ಸರ್ಕಾರ ಆದೇಶಿಸಿದ್ದರೂ ಕೋಲಾರ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಕಂಪನಿಯೊಂದು ಕರೊನಾ ಸಂಬಂಧ ಮುನ್ನೆಚ್ಚರಿಕಾ ಕ್ರಮ ವಹಿಸದೆ ಕಾರ್ಮಿಕರಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದ ಬಗ್ಗೆ ಗ್ರಾಮಸ್ಥರು ವಿರೋಧಿಸಿ ಸೋಮವಾರ ಮುಚ್ಚಿಸಿದರು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ನರಸಾಪುರದಲ್ಲಿ ಸಿಫಾನಿ ಕಾರ್ಖಾನೆಯನ್ನೂ ಸ್ಥಗಿತಗೊಳಿಸಲಾಗಿತ್ತು. ಆದರೆ ಕೈಗಾರಿಕೆ ಇಲಾಖೆಯಿಂದ ವಿಶೇಷ ಅನುಮತಿ ಪಡೆದ ಮಾಲೀಕರು ಸೋಮವಾರ ಕಾರ್ಖಾನೆ ಶುರು ಮಾಡಿದ್ದರು. ವಿಷಯ ತಿಳಿದ ಸ್ಥಳೀಯರು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಕಾರ್ಯಪ್ರವೃತ್ತರಾದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಉಪ ನಿರ್ದೇಶಕ ಎನ್. ರವಿಚಂದ್ರ, ಜಿಪಂ ಸದಸ್ಯೆ ರೂಪಶ್ರೀ ಮಂಜು ಮುಖಂಡರೊಂದಿಗೆ ತೆರಳಿ ಕಾರ್ಖಾನೆ ಪರಿಶೀಲಿಸಿದರು. ಸುರಕ್ಷತಾ ಸಾಧನಗಳಿಲ್ಲದೆ ಕಾರ್ಮಿಕರಿಂದ ಕೆಲಸ ಮಾಡಿಸುತ್ತಿದ್ದುದು ಕಂಡುಬಂದ ಹಿನ್ನೆಲೆಯಲ್ಲಿ ತಕ್ಷಣವೇ ಬಂದ್ ಮಾಡುವಂತೆ ಆದೇಶಿಸಿದರು.
ಕಾರ್ಮಿಕರಿಗೆ ಸುರಕ್ಷತಾ ಸಾಧನ ವಿತರಿಸಿದ ನಂತರ ಕಾರ್ಖಾನೆ ಚಾಲನೆ ಮಾಡಲು ಅವಕಾಶ ಕೊಡುವ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದರು. ಈ ಮಧ್ಯೆ, ಕಾರ್ಖಾನೆಗೆ ಭೇಟಿ ನೀಡಿದ ಅಧಿಕಾರಿಗಳು ಸಹ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಕಂಡು ಬಂತು.
ಗ್ರಾಮಸ್ಥರ ಕಿಡಿ: ಕಾರ್ಖಾನೆಯಲ್ಲಿ ಬೇರೆ ರಾಜ್ಯಗಳ ನೂರಾರು ಕಾರ್ಮಿಕರಿದ್ದು, ಯಾವುದೇ ಸುರಕ್ಷತಾ ಕ್ರಮ ಅನುಸರಿಸದೆ ಅವರಿಂದ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಇವರು ಸ್ಥಳೀಯವಾಗಿ ವಾಸವಿದ್ದಾರೆ. ಅಗತ್ಯ ವಸ್ತುಗಳ ಖರೀದಿಗೆ ಸುತ್ತಮುತ್ತಲ ಗ್ರಾಮಗಳಿಗೆ ಆಗಮಿಸುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ಕಾರ್ಮಿಕರಿಗೆ ರಜೆ ನೀಡಿ ಅವರ ರಾಜ್ಯಗಳಿಗೆ ಕಳುಹಿಸಿಕೊಡಬೇಕು ಎಂದು ಖಾಜಿಕಲ್ಲಹಳ್ಳಿ ಗ್ರಾಮಸ್ಥರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.