

ಕೋಲಾರ: ನಗರದ ಪೇಟೆಚಾಮನಹಳ್ಳಿಯಲ್ಲಿ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿರುವ ಅಪರೂಪದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಪೇಟೆಚಾಮನಹಳ್ಳಿಯ ನಿವಾಸಿ ಕೃಷ್ಣಪ್ಪ (80) ಮೂರ‌್ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಭಾನುವಾರ ಕೋಲಾರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಸೋಮವಾರ ಬೆಳಗ್ಗೆ ಬೆಂಗಳೂರಿಗೆ ಹೊರಡಬೇಕಿತ್ತು. ಮನೆ ಸದಸ್ಯರು ಬೆಳಗ್ಗೆ 5 ಗಂಟೆಗೆ ಎಚ್ಚರಿಸಲು ಹೋದಾಗ ಕೃಷ್ಣಪ್ಪ ಮೃತಪಟ್ಟಿದ್ದರು. ಈ ವಿಚಾರವನ್ನು ಪತ್ನಿ ಜಯಮ್ಮ (68) ಅವರಿಗೆ ತಿಳಿಸಲು ಹೋದಾಗ ಅವರೂ ಸಹ ನಿಧನರಾಗಿದ್ದರು.
ಐದೂವರೆ ದಶಕಗಳ ದಾಂಪತ್ಯ ಜೀವನದಲ್ಲಿ ಹೊಲದ ಕೆಲಸಕ್ಕೆ ಜತೆಯಾಗಿಯೇ ಹೋಗುತ್ತಿದ್ದರು. ಮಕ್ಕಳು-ಸೊಸೆಯಂದಿರು ಹಾಗೂ ಮೊಮ್ಮಕ್ಕಳೊಂದಿಗೆ ನೆಮ್ಮದಿ ಜೀವನ ನಡೆಸುತ್ತಿದ್ದರು. ಭಾನುವಾರ ರಾತ್ರಿ ಕುಟುಂಬದ ಸದಸ್ಯರೊಂದಿಗೆ ಊಟ ಮಾಡಿ ನಿದ್ರೆಗೆ ಜಾರಿದವರು ಜತೆಯಾಗಿ ಜೀವನಯಾತ್ರೆ ಮುಗಿಸಿದ್ದು ಅಚ್ಚರಿ ಸಂಗತಿ.