

ಬೂದಿಕೋಟೆ: ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಸಮೀಪದ ದಿನ್ನಕೊತ್ತೂರು, ಪಚ್ಚಾರ್ಲಹಳ್ಳಿ, ಪೂಜಾರ್ಲಹಳ್ಳಿ, ಕೋಟರಾಮಗುಳ್ಳ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶನಿವಾರ ರಾತ್ರಿ 30ಕ್ಕೂ ಹೆಚ್ಚು ಕಾಡಾನೆ ದಾಳಿ ಮಾಡಿದ್ದು, ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾಗಿದೆ.
ದಿನ್ನಕೊತ್ತೂರು ಗ್ರಾಮದ ಭಯ್ಯರೆಡ್ಡಿಗೆ ಸೇರಿದ ಟೊಮ್ಯಾಟೊ, ವಿಶ್ವನಾಥ್ ರೆಡ್ಡಿ ಹಾಗೂ ವೆಂಕಟೇಶ್ ರೆಡ್ಡಿಗೆ ಸೇರಿದ ಮಾವಿನಗಿಡಗಳು, ಪಾಪಿರೆಡ್ಡಿ ಬೀನ್ಸ್, ತೀತುಬನಹಳ್ಳಿ ಗ್ರಾಮದ ರೈತ ತಿಮ್ಮರಾಯಪ್ಪಗೆ ಸೇರಿದ ಎಲೆಕೋಸು ಸೇರಿ ಇತರ ಬೆಳೆಗಳನ್ನು ಆನೆಗಳು ನಾಶ ಮಾಡಿವೆ.
ಬೂದಿಕೋಟೆ ಸಮೀಪದ ದಿನ್ನಕೊತ್ತೂರು ಬಳಿ ಬೀಡು ಬಿಟ್ಟಿರುವ ಕಾಡನೆಗಳನ್ನು ನೋಡಲು ಸುತ್ತಮುತ್ತಲಿನ ನೂರಾರು ಗ್ರಾಮಸ್ಥರು ಲಾಕ್‌ಡೌನ್ ನಡುವೆಯೂ ಮುಗಿಬಿದ್ದರು. ಜನರನ್ನು ಓಡಿಸಲು ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟರು. ಆನೆಗಳ ದಾಳಿಯಿಂದ ನಿರಂತರವಾಗಿ ಬೆಳೆ ನಾಶವಾಗುತ್ತಿರುವ ಕಾರಣ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಆನೆಗಳ ಗುಂಪಿನಲ್ಲಿ ಹಲವು ಮರಿ ಆನೆಗಳಿದ್ದು, ಸದ್ಯಕ್ಕೆ ಕಾರ್ಯಾಚರಣೆ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರು ಆನೆ ನೋಡಲು ಗುಂಪು ಗುಂಪಾಗಿ ಬರುತ್ತಿರುವುದರಿಂದ ಕಾರ್ಯಾಚರಣೆಗೆ ಕಷ್ಟವಾಗುತ್ತಿದೆ. ಬನ್ನೇರಘಟ್ಟದಿಂದ ನುರಿತ ಸಿಬ್ಬಂದಿ ಕರೆಸಿ ಕಾರ್ಯಾಚರಣೆ ಮಾಡಲಾಗುವುದು. ದಿವಾಕರ್, ಆರ್.ಎಫ್.ಒ ಅರಣ್ಯ ಇಲಾಖೆ ಮಾಲೂರು