

ಪಾ.ಶ್ರೀ.ಅನಂತರಾಮ್, ಕೋಲಾರ
ಯಾವುದೇ ನದಿ, ನಾಲೆ ಇಲ್ಲದೆ ಮಳೆಯನ್ನು ಆಶ್ರಯಿಸಿ ಕೃಷಿ ಮಾಡುತ್ತಿರುವ ಜಿಲ್ಲೆಯ ರೈತರು ಕೃಷಿ ಅರಣ್ಯದ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ಆಸಕ್ತಿ ತೋರಿದ್ದಾರೆ.
ರೈತರು ಪಿತ್ರಾರ್ಜಿತ ಆಸ್ತಿಯನ್ನು ಬರಡಾಗಿಸದೆ ಅರಣ್ಯ ಇಲಾಖೆ ಸಹಕಾರದಿಂದ ಕೃಷಿಯಲ್ಲಿ ಪ್ರಗತಿ ಸಾಧಿಸುವ ಮೂಲಕ ಬಯಲು ಸೀಮೆಗೆ ಮಾದರಿಯಾಗಿದ್ದಾರೆ.
ಅರಣ್ಯ ಇಲಾಖೆಯಿಂದ ನೀಡುವ ಶ್ರೀಗಂಧ, ಹೆಬ್ಬೇವು, ಸಿಲ್ವರ್, ಬೆಟ್ಟದ ನೆಲ್ಲಿಕಾಯಿ, ಮಾವು, ಬಿದಿರು, ನೇರಳೆ, ಬೇವು, ಬಿದಿರು, ಹಿಪ್ಪೆ, ಹೊಂಗೆ, ನುಗ್ಗೆ, ತೇಗ, ಕರಿಬೇವು, ಮಹಾಗನಿ ಇನ್ನಿತರ ಗಿಡ ನೆಟ್ಟು ಲಾಭಕ್ಕೆ ಚಿತ್ತ ಹರಿಸಿದ್ದಾರೆ.
ಜಿಲ್ಲೆಯ ಸುಮಾರು 80ಕ್ಕೂ ಹೆಚ್ಚು ರೈತರು ಈಗಾಗಲೆ ಸಾಮಾಜಿಕ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿ 4.72 ಲಕ್ಷ ಗಿಡಗಳನ್ನು ಪಡೆದು ಕೃಷಿಯಲ್ಲಿ ಖುಷಿ ಕಾಣಲು ಮುಂದಾಗಿದ್ದಾರೆ.
ಅರಣ್ಯ ಕೃಷಿಗೆ ಮಣ್ಣಿನ ಮಡಿಕೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದು ಸರ್ಕಾರ ಗಿಡಗಳ ಪೋಷಣೆಗಾಗಿ ಪ್ರೋತ್ಸಾಹಧನ ನೀಡುತ್ತಿರುವುದರಿಂದ ರೈತರು ಆಸಕ್ತಿ ತೋರುತ್ತಿದ್ದಾರೆ. ಇದರೊಂದಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿರುವವರಿಗೆ ವಿವಿಧ ಜಾತಿಯ ಸಸಿಗಳನ್ನು ಒದಗಿಸುವುದರಿಂದ ಹೊರೆಯಿಲ್ಲದೆ ಬೆಳೆ ಬೆಳೆಯಲು ಸಹಾಯವಾಗಿದೆ.
ಕೃಷಿ ಅರಣ್ಯ ಪ್ರೋತ್ಸಾಹಿಸುವ ಉದ್ದೇಶದಿಂದ ರೈತರು ಬಯಸಿದ ಸಸಿಗಳನ್ನು ವಿತರಿಸಿ ಬೆಳೆಸಲು ಸಾಮಾಜಿಕ ಅರಣ್ಯ ಇಲಾಖೆ ಉತ್ತೇಜನ ನೀಡುತ್ತಿದೆ. ಜಿಲ್ಲೆಯ ಸಾಧಕರಿಗೆ ಇತ್ತೀಚೆಗೆ ಅರಣ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಕೃಷಿ ಅರಣ್ಯ ಕುರಿತ ಸಮಾವೇಶದಲ್ಲಿ ಸನ್ಮಾನಿಸಿದ್ದು, ಇದರಿಂದ ರೈತಾಪಿ ವಲಯದಲ್ಲಿ ಸಂಚಲನ ಉಂಟಾಗಿದೆ.
ಕೋಲಾರ ತಾಲೂಕಿನ ಹರಟಿಯ ಎನ್.ವಿ.ಪ್ರಕಾಶ್ ತಮ್ಮ ಪಾಲಿನ ಅರ್ಧ ಎಕರೆ ಭೂಮಿಯಲ್ಲಿ ಮಾವು, ಸೀಬೆ, ನೇರಳೆ, ತೆಂಗು ಸೇರಿ ಹತ್ತಾರು ಮರಗಳನ್ನು ಬೆಳೆದಿದ್ದಾರೆ. ಹಾಪ್‌ಕಾಮ್ ಮಾಜಿ ಅಧ್ಯಕ್ಷ ಅರಹಳ್ಳಿ ಗೋಪಾಲಕೃಷ್ಣ ಶ್ರೀಗಂಧ ಬೆಳೆಯುತ್ತಿದ್ದಾರೆ. ಮುಳಬಾಗಿಲು ತಾಲೂಕಿನ ಚಿಕ್ಕನಹಳ್ಳಿಯ ಜಿ.ವೆಂಕಟಪ್ಪ ಶ್ರೀಗಂಧ, ಹೆಬ್ಬೇವು, ನೆಲ್ಲಿ, ಮಾವು, ಬಿದಿರು ಬೆಳೆಯುತ್ತಿದ್ದರೆ, ಇದೇ ತಾಲೂಕಿನ ಪೆರಮಾಕನಹಳ್ಳಿಯ ಲಕ್ಷ್ಮೀದೇವಮ್ಮ ಕೃಷಿ ಅರಣ್ಯಕ್ಕೆ ಪೂರಕವಾದ ಗಿಡಗಳನ್ನು ಬೆಳೆಯುತ್ತಿದ್ದಾರೆ. ಉತ್ತನೂರು ಪಂಚಾಯಿತಿಗೆ ಸೇರಿದ ಕೆಂಚನಹಳ್ಳಿಯ ಹನುಮಪ್ಪ ಶ್ರೀಗಂಧ, ಹೆಬ್ಬೇವು, ಬಿದಿರು ಬೆಳೆಯುತ್ತಿದ್ದಾರೆ.
ಮಾಲೂರು ತಾಲೂಕಿನ ರಾಜೇನಹಳ್ಳಿ ಪಂಚಾಯಿತಿಗೆ ಸೇರಿದ ನಲ್ಲಾಂಡಹಳ್ಳಿಯ ಕೃಷ್ಣಯ್ಯಶೆಟ್ಟಿ 1 ಎಕರೆಯಲ್ಲಿ ಹೆಬ್ಬೇವು, 1 ಎಕರೆಯಲ್ಲಿ ಶ್ರೀಗಂಧ, ಸಿಲ್ವರ್ ಗಿಡಗಳನ್ನು ನೆಟ್ಟಿದ್ದಾರೆ. ಕೋಲಾರದ ಅಮ್ಮನಲ್ಲೂರು ಗ್ರಾಮದ ವನಜಾಕ್ಷಮ್ಮ ಶ್ರೀಗಂಧ, ಬೆಗ್ಲಿಹೊಸಹಳ್ಳಿಯ ಕೃಷ್ಣಪ್ಪ ಸೇರಿ 20ಕ್ಕೂ ಹೆಚ್ಚು ಸಾಧಕರನ್ನು ಗುರುತಿಸಿ ಗೌರವ ಸಮರ್ಪಣೆ ಮಾಡಲಾಗಿದೆ.
ಕೃಷಿ ಅರಣ್ಯ ಯೋಜನೆಯಿಂದ ರೈತರಿಗೆ ಆದಾಯ ಹೆಚ್ಚುತ್ತದೆಯಲ್ಲದೆ ಅರಣ್ಯ ಪ್ರದೇಶ ವಿಸ್ತರಣೆಗೆ ಸಹಾಯವಾಗುತ್ತದೆ. ರೈತರು ಬಯಸುವ ಗಿಡಗಳನ್ನು ಇಲಾಖೆಯಿಂದ ಒದಗಿಸಲಾಗುತ್ತದೆ. ಕೃಷಿ ಅರಣ್ಯದ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡಲಾಗುತ್ತದೆ, ಕೋಲಾರ ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಒಳ್ಳೆಯ ಅವಕಾಶ ಹಾಗೂ ವಾತಾವರಣವಿದೆ, ರೈತರು ಇಲಾಖೆಯ ಸಹಕಾರ ಪಡೆದು ಕೃಷಿ ಅರಣ್ಯದಲ್ಲಿ ಅಭಿವೃದ್ಧಿ ಸಾಧಿಸಬಹುದು. ವಿ.ದೇವರಾಜು, ಜಿಲ್ಲಾ ಸಾಮಾಜಿಕ ಅರಣ್ಯಾಧಿಕಾರಿ, ಕೋಲಾರ