ಕೆರೆ ಅಂಗಳದಲ್ಲಿ ಕೋಳಿ ಬಿಟ್ಟುಹೋದ ಸಾಕಣೆದಾರ

Published on

ಕೋಲಾರ: ಕಂಪನಿಯವರು ಕೋಳಿಗಳನ್ನು ಪಡೆಯದ ಹಿನ್ನೆಲೆಯಲ್ಲಿ ಸಾಕಣೆದಾರರೊಬ್ಬರು ರಾತ್ರೋರಾತ್ರಿ ಲಕ್ಕೂರು ಗ್ರಾಮದ ದೊಡ್ಡ ಕೆರೆಯಂಗಳದಲ್ಲಿ ಸಾವಿರಾರು ಕೋಳಿಗಳನ್ನು ಬಿಟ್ಟುಹೋಗಿದ್ದಾರೆ

ಕೋಳಿ ತಿನ್ನುವುದರಿಂದ ರೋಗ ಹರಡುತ್ತದೆ ಎಂಬ ವದಂತಿಯಿಂದ ಜನ ಕೋಳಿ ಮಾಂಸ ಸೇವಿಸುವುದನ್ನು ಬಿಟ್ಟಿದ್ದಾರೆ. ಜಿಲ್ಲಾಡಳಿತವೂ ಮಾಂಸ ಮಾರಾಟಕ್ಕೆ ಬ್ರೇಕ್ ಹಾಕಿರುವುದರಿಂದ ಈಗ ಕೋಳಿಗಳನ್ನು ಕೇಳುವವರಿಲ್ಲ ಎಂಬ ವಾತಾವರಣ ನಿರ್ಮಾಣವಾಗಿದೆ.

ಮಾಲೂರಿನ ಲಕ್ಕೂರು ಗ್ರಾಮದಲ್ಲಿ ಕೋಳಿ ಮೇಯಿಸುವವರು ಯಾರೋ ಬುಧವಾರ ರಾತ್ರಿ ಗ್ರಾಮದ ದೊಡ್ಡ ಕೆರೆಯಂಗಳದಲ್ಲಿ ಕೋಳಿಗಳನ್ನು ತಂದು ಬಿಟ್ಟಿದ್ದಾರೆ. ಇದರಲ್ಲಿ ಸಾವಿರಾರು ಕೋಳಿಗಳು ಮೃತಪಟ್ಟಿದ್ದವು. ಇನ್ನೂ ಒಂದಷ್ಟು ಕೋಳಿಗಳು ಜೀವಂತವಾಗಿದ್ದವು.

ಈ ವಿಷಯ ತಿಳಿಯುತ್ತಿದ್ದಂತೆ ಲಕ್ಕೂರು ಸೇರಿ ಸುತ್ತಮುತ್ತಲ ಗ್ರಾಮಗಳಿಂದ ಸಾರ್ವಜನಿಕರು ಕೆರೆ ಬಳಿ ಜಮಾಯಿಸಿದರಾದರೂ ಕೋಳಿಗಳನ್ನು ಮುಟ್ಟುವ ಧೈರ್ಯ ಮಾಡಲಿಲ್ಲ.

ವಿಷಯ ತಿಳಿದ ಲಕ್ಕೂರು ಗ್ರಾಪಂ ಅಧ್ಯಕ್ಷೆ ಸುಬ್ಬಮ್ಮ ಕೃಷ್ಣಪ್ಪ, ಪಿಡಿಒ ಲೋಕೇಶ್ ಹಾಗೂ ಇತರ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಜೆಸಿಬಿ ಮೂಲಕ ಗುಂಡಿ ತೋಡಿಸಿ ಕೋಳಿಗಳನ್ನು ಮುಚ್ಚಿ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net