

ಕೋಲಾರ: ಕೋಳಿ ಮಾಂಸ ಸೇವನೆಗೂ ಕರೊನಾಗೂ ಸಂಬಂಧ ಇಲ್ಲದಿರಬಹುದು. ಆದರೆ ಸ್ವಚ್ಛತೆಗೆ ಆದ್ಯತೆ ನೀಡದಿದ್ದರೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ನಗರದ ಎಲ್ಲ ಚಿಕನ್ ಸ್ಟಾಲ್‌ಗಳಲ್ಲಿ ಸುರಕ್ಷಿತ ಕ್ರಮ ಕೈಗೊಳ್ಳದಿದ್ದರೆ ಏಪ್ರಿಲ್ 1ರಿಂದ 25 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ನಗರಸಭೆ ಆಯುಕ್ತ ಶ್ರೀಕಾಂತ್ ಚಿಕನ್ ಅಂಗಡಿ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದರು.
ನಗರಸಭೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಚಿಕನ್ ಅಂಗಡಿ ಮಾಲೀಕರ ಸಭೆಯಲ್ಲಿ ಮಾತನಾಡಿ, ಚಿಕನ್ ಅಂಗಡಿ ಮಾಲೀಕರ ಹೊಟ್ಟೆ ಮೇಲೆ ಹೊಡೆಯುವ ಉದ್ದೇಶವಿಲ್ಲ. ಆದರೆ ಬಹುತೇಕ ಚಿಕನ್ ಅಂಗಡಿಗಳು ಟ್ರೇಡ್ ಲೈಸೆನ್ಸ್ ಇಲ್ಲದೆ ಅನಧಿಕೃತವಾಗಿ ನಡೆಯುತ್ತಿರುವುದಲ್ಲದೆ ಸ್ವಚ್ಛತೆ ಆದ್ಯತೆ ನೀಡಿಲ್ಲ. ಕೋಳಿ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ಕೆರೆ, ಚರಂಡಿ, ಕಾಲುವೆ, ರಸ್ತೆ, ಖಾಲಿ ನಿವೇಶನದಲ್ಲಿ ಬೇಕಾಬಿಟ್ಟಿಯಾಗಿ ಎಸೆದು ಜನರ ಆರೋಗ್ಯಕ್ಕೆ ಧಕ್ಕೆ ತರಲಾಗುತ್ತಿರುವುದರಿಂದ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು.
3 ತಿಂಗಳಿಂದ ಸ್ವಚ್ಛತೆ ಕಾಪಾಡಲು, ಕೋಳಿ ಮಾಂಸವನ್ನು ಗ್ಲಾಸ್ ಹೊದಿಕೆ ಇರುವ ಪೆಟ್ಟಿಗೆಯಲ್ಲಿಟ್ಟು ಮಾರಾಟ ಮಾಡಲು ಹಾಗೂ ಅಂಗಡಿ ಮುಂದೆ ಕೋಳಿಯನ್ನು ನೇತು ಹಾಕದಂತೆ ಸೂಚನೆ ನೀಡಿದ್ದರೂ ಸುಧಾರಣೆ ಕಂಡು ಬರದ ಹಿನ್ನೆಲೆಯಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ಜನರ ಆರೋಗ್ಯದ ಮೇಲೆ ಪರಿಣಾಮ ಬೀರದಂತೆ ಮುಂಜಾಗ್ರಜಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದಲ್ಲಿ ಮಾತ್ರ ಅಂಗಡಿ ಬಂದ್ ತೆರವುಗೊಳಿಸುವುದಾಗಿ ತಿಳಿಸಿದರು.
ಕೋಳಿ ಮಾಂಸವನ್ನು ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಕೊಡುವಂತಿಲ್ಲ. ಗ್ರಾಹಕರಿಗೆ ಮನೆಯಿಂದಲೇ ಸ್ಟೀಲ್ ಅಥವಾ ಥರ್ಮಾಕೋಲ್ ಡಬ್ಬಿ ತರುವದಂತೆ ಸೂಚಿಸಬೇಕು, ಒಂದು ವೇಳೆ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕಂಡು ಬಂದಲ್ಲಿ ಅದಕ್ಕೆ ಪ್ರತ್ಯೇಕ ದಂಡ ವಿಧಿಸಲಾಗುವುದು ಎಂದರು.
ಕುಕ್ಕುಟೋದ್ಯಮಿ ಗೋವಿಂದರಾಜು ಮಾತನಾಡಿ, ವಿಶ್ವದ 125 ದೇಶಗಳಲ್ಲಿ ಚಿಕನ್ ಪ್ರಿಯರಿಗೆ ಅಲ್ಲಿನ ವ್ಯಾಪಾರಿಗಳು ಸುರಕ್ಷಿತವಾದ ಚಿಕನ್ ಮಾರಾಟ ಮಾಡಿ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ, ಕೋಲಾರ ನಗರದಲ್ಲಿ ಸ್ವಚ್ಚತೆ ಹಾಗೂ ಸುರಕ್ಷತೆ ಇಲ್ಲದ ಚಿಕನ್ ಮಾರಾಟ ಮಾಡುತ್ತಿರುವುದು ನಿಲ್ಲಬೇಕು, ಚಿಕನ್ ಅಂಗಡಿಗಳು ನಗರಸಭೆ ವಿಧಿಸಿರುವ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.
ಚಿಕನ್‌ಗೂ ಕರೊನಾಗೂ ಸಂಬಂಧವಿಲ್ಲ. ಸುಳ್ಳು ಮಾಹಿತಿಯಿಂದ ಕಕ್ಕುಟೋದ್ಯಮಕ್ಕೆ ಭಾರಿ ಹೊಡೆದ ಬಿದ್ದಿದೆ. ರಾಜ್ಯ ಒಂದರಲ್ಲೇ 4 ಸಾವಿರ ರೂ. ನಷ್ಟವಾಗಿದೆ, ಚಿಕನ್ ಅಂಗಡಿಗಳನ್ನು ಸ್ವಚ್ಛತೆ ಇಲ್ಲವೆಂಬ ಕಾರಣಕ್ಕೆ ಮುಚ್ಚಿಸಿದರೆ ಉದ್ಯಮಿಗಳಿಗೆ ಮತ್ತು ಚಿಕನ್ ಅಂಗಡಿ ಮಾಲೀಕರಿಗೆ ನಷ್ಟವಾಗುವುದರಿಂದ ಸ್ವಚ್ಛತೆ ಕಾಪಾಡಬೇಕು ಎಂದರು.
ನಗರಸಭೆ ಮಾಜಿ ಸದಸ್ಯ ತ್ಯಾಗರಾಜ್ ಮಾತನಾಡಿ, ಚಿಕನ್ ಅಂಗಡಿಗಳಲ್ಲಿನ ತ್ಯಾಜ್ಯವನ್ನು ಕೆರೆ, ಚರಂಡಿಗೆ ಎಸೆಯುವ ಬದಲು ಮೀರಾ ಸ್ವಯಂ ಸೇವಾ ಸಂಸ್ಥೆಗೆ ನೀಡಿದರೆ ಪರಿಸರಕ್ಕಾಗುವ ಹಾನಿ ತಪ್ಪುತ್ತದೆ ಎಂದರು.
ಕುಕ್ಕುಟೋದ್ಯಮಿಗಳ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ, ನಗರಸಭೆ ಪರಿಸರ ಇಂಜನಿಯರ್ ಪುನೀತ್ ಮಾತನಾಡಿದರು. ಚಿಕನ್ ಅಂಗಡಿ ಮಾಲೀಕರಾದ ಟಿಪ್ಪು, ಅಯ್ಯುಬ್ ಪಾಷಾ ಪ್ರತ್ಯೇಕ ಮಾಂಸ ಮಾರುಕಟ್ಟೆಗೆ ಒತ್ತಾಯಿಸಿದರು.