

ಕೋಲಾರ: ಯಶಸ್ಸಿನತ್ತ ಸಾಗಿರುವ ಡಿಸಿಸಿ ಬ್ಯಾಂಕ್ ಸಾಧನೆ ಹಾದಿಯಲ್ಲಿ ಮುಂದುವರಿಯುತ್ತಿದ್ದು, ಮಾ.28ರೊಳಗೆ ಕನಿಷ್ಠ 50 ಕೋಟಿ ರೂ. ಠೇವಣಿ ಸಂಗ್ರಹಿಸುವ ಗುರಿ ಸಾಧಿಸಬೇಕು ಎಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಸೂಚಿಸಿದರು.
ನಗರದ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಹಿಸಿ ಮಾತನಾಡಿ, ರಾಷ್ಟ್ರಮಟ್ಟದ ಸಾಧಕರ ಯಶೋಗಾಥೆ ಮೂಲಕ ನಬಾರ್ಡ್ ಚರಿತ್ರೆಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಮಹತ್ವವನ್ನು ಮುಂದುವರಿಸಿಕೊಂಡು ಹೋಗುವ ಕೆಲಸವನ್ನು ಸಿಬ್ಬಂದಿ ವರ್ಗ ಕೆಲಸದ ಮೂಲಕ ಸಾಧಿಸಬೇಕು ಎಂದರು.
ನಷ್ಟ ಹಾಗೂ ಭ್ರಷ್ಟಾಚಾರದಿಂದಾಗಿ ಅಸ್ತಿತ್ವ ಕಳೆದುಕೊಂಡಿದ್ದ ಡಿಸಿಸಿ ಬ್ಯಾಂಕ್ ಕಳೆದ 6 ವರ್ಷಗಳ ಅವಧಿಯಲ್ಲಿ ಯಶಸ್ಸಿನತ್ತ ಸಾಗಿದೆ. ಈ ಕುರಿತ ಪುಸ್ತಕವನ್ನು ನಬಾರ್ಡ್ ಮಾ.18ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡುತ್ತಿದೆ. ಇದು ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಶ್ರಮಕ್ಕೆ ಸಂದ ಗೌರವ. ಇದನ್ನು ಉಳಿಸಿಕೊಂಡು ಹೋಗಲು ಸಿಬ್ಬಂದಿ ಠೇವಣಿ ಸಂಗ್ರಹಕ್ಕೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಶೇ.2ಕ್ಕೆ ಎನ್‌ಪಿಎ: ಸಾಲ ಮತ್ತು ಸುಸ್ತಿ ಸಾಲವನ್ನು ಸಕಾಲಕ್ಕೆ ವಸೂಲಿ ಮಾಡುವ ಮೂಲಕ ಎನ್‌ಪಿಎ ಶೇ.2ಕ್ಕೆ ಇಳಿಸುವುದರೊಂದಿಗೆ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳಬೇಕು. ಮಹಿಳೆಯರು, ರೈತರು ಬಡ್ಡಿ ಮಾಫಿಯಾ ಜಾಲಕ್ಕೆ ಸಿಲುಕದಂತೆ ಎಚ್ಚರಿಕೆ ವಹಿಸುವ ಜತೆಗೆ ಬಡವರ ಆಶಾಕಿರಣವಾಗಿ ಬ್ಯಾಂಕ್ ಕೆಲಸ ಮಾಡಬೇಕು. ಸಾಲ ಮಂಜೂರಾತಿ ಮಾಡುವಾಗ ಇಡೀ ಕುಟುಂಬದ ಸದಸ್ಯರ ಜತೆಗೆ ಚರ್ಚಿಸಬೇಕು. ಬ್ಯಾಂಕ್ ನಿರ್ದೇಶಕ ಶಿಫಾರಸಿಗೆ ಮಣಿದು ಕಣ್ಣು ಮುಚ್ಚಿಕೊಂಡು ಸಾಲ ನೀಡಬಾರದು. ಸಾಲ ಸುಸ್ತಿಯಾದಾಗ ಸಿಬ್ಬಂದಿ ಹೊಣೆಗಾರರಾವುದರಿಂದಾಗಿ ಗ್ರಾಹಕರ ಪೂರ್ವಾಪರ ಪರಿಶೀಲಿಸಿ, ಸಾಲ ವಾಪಸ್ ಬರುವುದಿಲ್ಲ ಎಂದಾದರೆ ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದರು.
ಸಾಲಮನ್ನಾ: ಜಿಲ್ಲೆಯ 1014 ರೈತರು ಪಡೆದಿರುವ 1 ಲಕ್ಷ ರೂ. ಅಲ್ಪಾವಧಿ ಸಾಲ ಒಟ್ಟು 9.24 ಕೋಟಿ ರೂ.ಮನ್ನಾ ಆಗಿದ್ದು, ಈ ಪ್ರಕ್ರಿಯೆ ಮಾ.25ರೊಳಗೆ ಪೂರ್ಣಗೊಳ್ಳುವುದರಿಂದ ಸಿಬ್ಬಂದಿ ರೈತರನ್ನು ಸಂಪರ್ಕಿಸಿ ಅಗತ್ಯ ದಾಖಲೆ ಪಡೆದು ಯೋಜನೆಯ ಲಾಭ ಹೊಂದುವಂತೆ ಮಾಡಬೇಕು ಎಂದು ಸೂಚಿಸಿದರು.
ನಿರ್ದೇಶಕರಾದ ಎಂ.ಎಲ್.ಅನಿಲ್ ಕುಮಾರ್, ಮೋಹನ್ ರೆಡ್ಡಿ, ಎನ್.ನಾಗಿರೆಡ್ಡಿ, ಬಿ.ವಿ.ವೆಂಕಟರೆಡ್ಡಿ, ಕೆ.ಎಚ್.ಚನ್ನರಾಯಪ್ಪ, ಎಂಡಿ ರವಿ, ಎಜಿಎಂ ಬೈರೇಗೌಡ, ಚೌಡಪ್ಪ, ನಾಗೇಶ್ ಇದ್ದರು.
ಮೊಬೈಲ್ ಬ್ಯಾಂಕಿಂಗ್ ಶೀಘ್ರ: ಮಂಗಳೂರಿನಲ್ಲಿ ಮೊಬೈಲ್ ಬ್ಯಾಂಕಿಗ್ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಕೋಲಾರ ಡಿಸಿಸಿ ಬ್ಯಾಂಕ್ ಎಂಡಿ ನೇತೃತ್ವದ ತಂಡವು ದಕ್ಷಿಣ ಕನ್ನಡ ಜಿಲ್ಲೆಗೆ ತೆರಳಿ ಪರಿಶೀಲನೆ ನಡೆಸಲಿದೆ. ನಬಾರ್ಡ್ 2 ವಾಹನಗಳನ್ನು ಉಚಿತವಾಗಿ ನೀಡಲು ಮುಂದೆ ಬಂದಿದ್ದು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ವಾಹನ ಒದಗಿಸಿ ಗ್ರಾಮೀಣ ಜನತೆಗೆ ಮನೆ ಬಾಗಿಲಲ್ಲೇ ಬ್ಯಾಂಕಿಂಗ್ ಸೇವೆ ಒದಗಿಸಲಾಗುವುದು ಎಂದು ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.