

ಕೋಲಾರ: ಮಾಲೂರು ತಾಲೂಕಿನ ಗಡಿಭಾಗ ಮಾಸ್ತಿ ಹೋಬಳಿಯ ದಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯ ಗುಂಡ್ಲುಪಾಳ್ಯ ಗ್ರಾಮದಲ್ಲಿ ಮಂಗಳವಾರ ನಿಷೇಧಿತ ಜಲ್ಲಿಕಟ್ಟು ಸ್ಪರ್ಧೆ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.
ತಮಿಳುನಾಡಿನ ಗ್ರಾಮೀಣ ಕ್ರೀಡೆಯಲ್ಲಿ ಜಲ್ಲಿಕಟ್ಟು ಅತ್ಯಂತ ಹೆಸರುವಾಸಿ. ಸಂಕ್ರಾಂತಿ ಸಂದರ್ಭದಲ್ಲಿ ಈ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಆಂಧ್ರ, ತಮಿಳುನಾಡಿನಲ್ಲಿ ನಡೆಯುವ ಜಲ್ಲಿಕಟ್ಟು (ರಾಸುಗಳ ಓಟ) ಸ್ಪರ್ಧೆಗೆ ನ್ಯಾಯಾಲಯದ ಆದೇಶದ ಮೇರೆಗೆ ರಾಜ್ಯದ ವಿವಿಧ ಕಡೆ ನಿಷೇಧ ವಿಧಿಸಲಾಗಿರುವುದರಿಂದ ಕಳೆದ ವರ್ಷ ಕೋಲಾರ ಜಿಲ್ಲೆಯಲ್ಲಿ ಜಲ್ಲಿಕಟ್ಟು ನಡೆದಿರಲಿಲ್ಲ. ಆದರೆ ಈ ಬಾರಿ ಗುಂಡ್ಲುಪಾಳ್ಯದ ಯುವಕರು ಜಲ್ಲಿಕಟ್ಟು ಆಚರಿಸಲು ನಿರ್ಧರಿಸಿ ಕಾರ್ಯಕ್ರಮ ಆಯೋಜಿಸುವ ಮೂಲಕ ನಿಷೇಧಾಜ್ಞೆ ಉಲ್ಲಂಘಿಸಿದ್ದಾರೆ.
ನೆರೆ ರಾಜ್ಯಗಳಲ್ಲಿ ಜಲ್ಲಿಕಟ್ಟಿನಿಂದ ಸಾವು-ನೋವು ಸಂಭವಿಸಿದ ನಂತರ ಕೋರ್ಟ್ ನಿರ್ದೇಶನದ ಮೇರೆಗೆ ಸರ್ಕಾರ ಜಲ್ಲಿಕಟ್ಟು ನಿಷೇಧಿಸಿದೆ. ಅದರಂತೆ ಜಿಲ್ಲೆಯಲ್ಲೂ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಜಲ್ಲಿಕಟ್ಟಿಗೆ ಅವಕಾಶ ನೀಡುತ್ತಿಲ್ಲ. ಮಾಲೂರಿನ ಗುಂಡ್ಲುಪಾಳ್ಯ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದಂದು ರಾಸುಗಳಿಗೆ ಕಿಚ್ಚು ಹಾಯಿಸಲಾಗಿಲ್ಲ. ಇದರಿಂದ ಗ್ರಾಮಕ್ಕೆ ಕೇಡುಂಟಾಗಿದೆ ಎಂದು ಊರಹಬ್ಬದ ಅಂಗವಾಗಿ ಜಲ್ಲಿಕಟ್ಟು ನಡೆಸಲಾಗಿದ್ದು ಗ್ರಾಮಸ್ಥರು ಬೆಳಗ್ಗೆ ರಾಸುಗಳನ್ನು ಅಲಂಕರಿಸಿ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಿದರು.
ಊರ ಹೊರವಲಯದಲ್ಲಿ ಮಧ್ಯಾಹ್ನ 12.30ರ ವೇಳೆಗೆ ರಾಸುಗಳೊಂದಿಗೆ ಜಮಾಯಿಸಿದ ಗ್ರಾಮಸ್ಥರು ಒಂದೊಂದಾಗಿಯೇ ಹಗ್ಗದೊಂದಿಗೆ ಓಟಕ್ಕೆ ಬಿಟ್ಟಿದ್ದಾರೆ. ದಿಕ್ಕಾಪಾಲಾಗಿ ಓಡುತ್ತಿದ್ದ ರಾಸುಗಳನ್ನು ಹಿಡಿದು ಕಟ್ಟಿಹಾಕುವ ಸಲುವಾಗಿ ಯುವಕರ ದಂಡು ಹಿಂದೆಯೇ ಓಡುತ್ತಿದ್ದ ದೃಶ್ಯ ಕಂಡುಬಂತು. ರಾಸು ಹಾಯ್ದು ಒಂದಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಯಾವುದೇ ಅನಾಹುತ ಸಂಭವಿಸದಿರುವುದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಅತ್ಯಂತ ರೋಮಾಂಚನಕಾರಿಯಾದ ರಾಸುಗಳ ಓಟ ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಮನೆ, ಕಟ್ಟಡದ ಮೇಲ್ಭಾಗ, ಮರ ಏರಿ ಕುಳಿತಿದ್ದ ದೃಶ್ಯ ಕಂಡುಬಂತು. ಗುಂಡ್ಲುಪಾಳ್ಯ ಸುತ್ತಮುತ್ತಲ ಹಳೇಪಾಳ್ಯ, ಬೂದಿಕೋಟೆ ಸೇರಿ ಹಲವು ಗ್ರಾಮಗಳಿಂದ ಜನ ಬಂದಿದ್ದರು. ಓಟದಲ್ಲಿ ನೆರೆಯ ತಮಿಳುನಾಡಿನಿಂದಲೂ ರಾಸುಗಳನ್ನು ಕರೆತರಲಾಗಿತ್ತು ಎನ್ನಲಾಗಿದೆ. ಸರಿಸುಮಾರು ಮೂರು ಗಂಟೆಗಳ ಕಾಲ ರಾಸುಗಳ ಓಟ ನಡೆದಿದೆ.
ಗ್ರಾಮದಲ್ಲಿ ಅದ್ದೂರಿಯಾಗಿ ರಾಸುಗಳ ಓಟ ನಡೆದಿದ್ದರೂ ಒಬ್ಬನೇ ಒಬ್ಬ ಪೊಲೀಸ್ ಪೇದೆಯೂ ಇತ್ತ ಸುಳಿದಿರಲಿಲ್ಲ ಎಂಬುದು ವಿಶೇಷ.