

ಕೋಲಾರ: ನಮ್ಮ ಬ್ಯಾಂಕ್ 4 ಲಕ್ಷ ಮಹಿಳೆಯರಿಗೆ ಸಾಲ ನೀಡಿದೆಯಲ್ಲದೆ ವಸೂಲಾತಿಯಲ್ಲೂ ಗುರಿ ಸಾಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.
ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಮಂಗಳವಾರ ಆರ್ಥಿಕ ವರ್ಷದ ಕಡೆಯ ಜಿಲ್ಲಾಮಟ್ಟದ ಮೇಲ್ವಿಚಾರಣಾ ಹಾಗೂ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿ, ಬೇರೆ ರಾಜ್ಯಗಳಲ್ಲಿ ಅಲ್ಲಿನ ಡಿಸಿಸಿ ಬ್ಯಾಂಕುಗಳು ಮಹಿಳಾ ಸ್ವಸಹಾಯ ಗುಂಪುಗಳಿಗೆ ನೀಡಿರುವ ಸಾಲದ ಮೊತ್ತ ಅತಿ ಕಡಿಮೆ. ಆದರೆ ನಮ್ಮ ಬ್ಯಾಂಕಿನಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 4 ಲಕ್ಷ ಮಹಿಳೆಯರಿಗೆ 1000 ಕೋಟಿ ರೂ. ಸಾಲ ನೀಡಿರುವುದು ದೇಶದಲ್ಲಿಯೇ ಅತಿ ಹೆಚ್ಚು ಎಂದು ಅಭಿಪ್ರಾಯಿಸಿದರು.
ಬ್ಯಾಂಕ್ ವ್ಯಾಪ್ತಿಯ 180 ಸೊಸೈಟಿಗಳನ್ನು ಜೂನ್ ವೇಳೆಗೆ ಗಣಕೀಕರಣಗೊಳಿಸಲು ಸಿದ್ಧತೆ ನಡೆಯುತ್ತಿದೆ. ಮಹಿಳಾ ಸ್ವಸಹಾಯ ಗುಂಪುಗಳನ್ನು ಇ-ಶಕ್ತಿಯನ್ನಾಗಿ ಪರಿವರ್ತಿಸಲಾಗುತ್ತಿದ್ದು, ಸೊಸೈಟಿಗಳ ಆರ್ಥಿಕ ಚಟುವಟಿಕೆ ನಿರ್ವಹಣೆ, ಲೆಕ್ಕ ಪರಿಶೋಧನೆ, ಭ್ರಷ್ಟಾಚಾರ ತಡೆ ಹಾಗೂ ಪಾರದರ್ಶಕ ಆಡಳಿತಕ್ಕೆ ಅನುಕೂಲವಾಲಿದೆ ಎಂದರು.
ಸೊಸೈಟಿಗಳ ಲೆಕ್ಕಪರಿಶೋಧಕರು ನಬಾರ್ಡ್ ಅಧಿಕಾರಿಗಳು ಭಾಗವಹಿಸುವ ಸಭೆಗೆ ಬಂದರೆ ಸಾಲದು, ಡಿಸಿಸಿ ಬ್ಯಾಂಕಿನಿಂದ ನಡೆಸುವ ಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ಬಂದರೆ ಲೆಕ್ಕ ಪರಿಶೋಧನೆಗೆ ಸಂಬಂಧಿಸಿದ ವರದಿ ಮಂಡಿಸಿದಲ್ಲಿ ಏನಾದರೂ ವ್ಯತ್ಯಾಸಗಳಿದ್ದರೆ ಸರಿಪಡಿಸಲು ಅನುಕೂಲವಾಗುತ್ತದೆ ಎಂದು ಸಹಕಾರ ಉಪನಿರ್ದೇಶಕಿ ಶಾಂತಕುಮಾರಿ ಹಾಗೂ ಆಡಿಟರ್ ಹರೀಶ್‌ಗೆ ತಾಕೀತು ಮಾಡಿದರು.
ಮುಖ್ಯಮಂತ್ರಿಯಿಂದ ಪುಸ್ತಕ ಬಿಡುಗಡೆ: ರಾಜ್ಯದಲ್ಲಿನ ಅತ್ಯುತ್ತಮ ಸಹಕಾರ ಬ್ಯಾಂಕ್‌ಗಳ ಕುರಿತು ಮಾ.18ರಂದು ವಿಧಾನಸೌಧದಲ್ಲಿ ನಡೆಯುವ ಸಮ್ಮೇಳನದಲ್ಲಿ ಕೋಲಾರ ಡಿಸಿಸಿ ಬ್ಯಾಂಕ್ 2013-14ರಲ್ಲಿ ಹೇಗಿತ್ತು, ಕಳೆದ 6 ವರ್ಷಗಳಲ್ಲಿ ಬ್ಯಾಂಕಿನ ಆರ್ಥಿಕ ಪರಿಸ್ಥಿತಿ ಯಾವ ರೀತಿಯಲ್ಲಿ ಸುಧಾರಿಸಿದೆ ಎಂದು ನಬಾರ್ಡ್‌ನಿಂದ ಸಿದ್ಧವಾಗಿರುವ ಪುಸ್ತಕವನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ಬಿಡುಗಡೆ ಮಾಡಲಿದ್ದಾರೆ ಎಂದರು.
ನಬಾರ್ಡ್ ಅಧಿಕಾರಿಯ ಸೂಚನೆಗಳು: ಸೊಸೈಟಿಗಳ ಲೆಕ್ಕ ಪರಿಶೋಧನೆ ಹಾಗೂ ಪ್ರಗತಿ ಪರಿಶೀಲನೆಯನ್ನು ಕಾಲ ಕಾಲಕ್ಕೆ ಪರಾಮರ್ಶಿಸದಿದ್ದರೆ ಅಕ್ರಮಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ. ಕನಿಷ್ಠ ಪ್ರತಿ ಎರಡು ತಿಂಗಳಿಗೊಮ್ಮೆ ಸೊಸೈಟಿಗಳ ಪ್ರಗತಿ ಪರಿಶೀಲನೆ ಕಡ್ಡಾಯವಾಗಿ ಮಾಡಬೇಕೆಂದು ನಬಾರ್ಡ್ ಎಜಿಎಂ ನಟರಾಜನ್ ಸೂಚಿಸಿದರು.
ಮಹಿಳಾ ಸ್ವ-ಸಹಾಯ ಸಂಘಗಳಿಗೆ ಡಿಸಿಸಿ ಬ್ಯಾಂಕಿನಿಂದ ಯಥೇಚ್ಛವಾಗಿ ಸಾಲ ನೀಡುತ್ತಿರುವುದರಿಂದ ಸಂಘಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸಬೇಕು. ಜತೆಗೆ ಸಂಘಗಳ ಮೂಲಕ ಆದಾಯೋತ್ಪನ್ನ ಚಟುವಟಿಕೆಗಳ ಅನುಷ್ಠಾನಕ್ಕೆ ಪ್ರೇರಣೆ ನೀಡಬೇಕು ಎಂದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ನಾಗರಾಜ್, ಎಂಡಿ ರವಿ, ಅಧಿಕಾರಿಗಳಾದ ಬೈರೇಗೌಡ, ಶಿವಕುಮಾರ್, ನಾಗೇಶ್, ಅಪೆಕ್ಸ್ ಬ್ಯಾಂಕ್ ಎಜಿಎಂ ವೆಂಕಟೇಶ್ ಉಪಸ್ಥಿತರಿದ್ದರು.
3 ವರ್ಷಗಳಿಂದ ದೇಶದ ಯಾವುದೇ ಡಿಸಿಸಿ ಬ್ಯಾಂಕಿಗೆ ಕೇಂದ್ರ ಸರ್ಕಾರದಿಂದ ಬಡ್ಡಿ ಮನ್ನಾ ಬಾಬ್ತಿನ ಹಣ ಬಿಡುಗಡೆಯಾಗಿಲ್ಲ. ಅನೇಕ ಸಲ ಅಪೆಕ್ಸ್ ಮತ್ತು ನಬಾರ್ಡ್‌ಗೆ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ. ಮಹಿಳೆಯರ ಸಾಲ ಹಾಗೂ ಬೆಳೆ ಸಾಲದ ಬಡ್ಡಿ ಹಣ ಒಟ್ಟು 10 ಕೋಟಿ ಬರಬೇಕಾಗಿದೆ. ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ