ಸಿರಿಧಾನ್ಯದಲ್ಲಿ ಸಿರಿಕಂಡ ಶ್ರೀನಿವಾಸಪುರ ತಾಲೂಕಿನ ಗುಂಡಮ್ಮನತ್ತ ಗ್ರಾಮದ ರತ್ನಮ್ಮ

7-klr-4 Alternative
Published on

ಪಾ.ಶ್ರೀ.ಅನಂತರಾಮ್ ಕೋಲಾರ

ಅದೆಷ್ಟೋ ಮಹಿಳೆಯರು ಓದಿಗೆ ತಕ್ಕ ಕೆಲಸ ಸಿಗದೆ ಸ್ವಯಂ ಉದ್ಯೋಗ ಮೂಲಕ ಬದುಕಿಗೆ ದಾರಿ ಕಂಡುಕೊಂಡಿದ್ದಾರೆ. ಈ ಹಾದಿಯಲ್ಲಿ ಶ್ರೀನಿವಾಸಪುರ ತಾಲೂಕಿನ ಗುಂಡಮ್ಮನತ್ತ ಗ್ರಾಮದ ರತ್ನಮ್ಮ ಮಾದರಿ ಆಗಿದ್ದಾರೆ.

ಟೀಚರ್ ಆಗಬೇಕೆಂದುಕೊಂಡಿದ್ದ ರತ್ನಮ್ಮ ಸ್ವಯಂ ಉದ್ಯೋಗಕ್ಕಿಳಿದು ಇತರರಿಗೆ ಮಾದರಿಯಾಗುವುದರ ಜತೆಗೆ ಸಂಪನ್ಮೂಲ ವ್ಯಕ್ತಿಯಾಗಿಯೂ ರೂಪುಗೊಂಡಿದ್ದಾರೆ.

ಕೋಲಾರದ ಅಬ್ಬಣಿ ಗ್ರಾಮದವರಾದ ರತ್ನಮ್ಮ ಪಿಯುಸಿ ಮುಗಿದ ನಂತರ ಗುಂಡಮ್ಮನತ್ತ ಗ್ರಾಮದ ಜಿ.ಎಂ.ನಾರಾಯಣಸ್ವಾಮಿ ಎಂಬುವರನ್ನು ಮದುವೆಯಾದರು. ಪತಿ ಟಿಸಿಎಚ್ ಮಾಡಿದ್ದರೂ ಶಿಕ್ಷಕ ವೃತ್ತಿ ಸಿಗದೆ ವ್ಯವಸಾಯದತ್ತ ಮುಖ ಮಾಡಿದ್ದರು. ತನಗಂತೂ ಟೀಚರ್ ಆಗುವ ಅದೃಷ್ಟ ಸಿಗಲಿಲ್ಲ, ಪತ್ನಿಗಾದರೂ ಅವಕಾಶ ಸಿಗಲಿ ಎಂಬ ಆಶಯದಿಂದ ಟಿಸಿಎಚ್‌ಗೆ ಸೇರಿಸಿದರು. ಒಳ್ಳೆ ಅಂಕ ಬಂದರೂ ರತ್ನಮ್ಮ ಶಿಕ್ಷಕಿ ಆಗಲು ಸಾಧ್ಯವಾಗದಿದ್ದಾಗ ಪತಿಯೊಂದಿಗೆ ಕೃಷಿಯಲ್ಲಿ ಜತೆಯಾದರು. ಸಿರಿಧಾನ್ಯಗಳಿಂದ ಮಹಿಳೆಯರು ಮತ್ತು ಮಕ್ಕಳಿಗೆ ಉಪಯುಕ್ತವಾಗುವ ಪೌಷ್ಟಿಕ ಆಹಾರ ಉತ್ಪಾದನೆ ಕಲಿತರು.

ರತ್ನಮ್ಮ ಅವರ ಆಸಕ್ತಿ ಗಮನಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ವಿಶೇಷ ತರಬೇತಿ ಪಡೆಯಲು ಅವಕಾಶ ಕಲ್ಪಿಸಿದರು. ಪ್ರಯೋಜನ ಪಡೆದ ರತ್ನಮ್ಮಮನೆಯಲ್ಲೇ ಸಿರಿಧ್ಯಾನಗಳ ಸಂಗ್ರಹಣೆಗಾಗಿ ಗೋದಾಮು ಹಾಗೂ ಹಿಟ್ಟಿನ ಗಿರಣಿ ತೆರೆದರು. ವಿವಿಧ ಬಗೆಯ ಪುಡಿಗಳನ್ನು ತಯಾರಿಸಿ ಪ್ಯಾಕಿಂಗ್ ಮಾಡಿ ಅಂಗನವಾಡಿ ಹಾಗೂ ಆನ್ ಲೈನ್ ಮೂಲಕ ಬೇಡಿಕೆ ಸಲ್ಲಿಸುವ ಗ್ರಾಹಕರಿಗೆ ಸರಬರಾಜು ಮಾಡತೊಡಗಿದರು.

ಮಹಿಳೆಯರಿಗೆ ತರಬೇತಿ: ಸ್ವಾವಲಂಬನೆ ಕಂಡುಕೊಂಡಿರುವ ರತ್ನಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವೃತ್ತಿ ತರಬೇತಿ ಶಿಬಿರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಆಸಕ್ತರಿಗೆ ಅರಿವು ಮೂಡಿಸುತ್ತಿದ್ದಾರೆ. ಪತಿ ಬೆನ್ನೆಲುಬಾಗಿದ್ದಾರೆ. ದಿನದ 24 ಗಂಟೆ ಕೆಲಸ ಮಾಡುವಷ್ಟು ಬೇಡಿಕೆ ಇದೆ, ಸದ್ಯಕ್ಕೆ 4 ಮಹಿಳೆಯರು ತಮ್ಮೊಂದಿಗೆ ಕೆಲಸ ಮಾಡುತ್ತಿದ್ದು, ಉದ್ದಿಮೆ ವಿಸ್ತರಿಸಲು ಪ್ರಯತ್ನ ನಡೆಯುತ್ತಿದೆ ಎಂದು ರತ್ನಮ್ಮ ವಿಜಯವಾಣಿಗೆ ತಿಳಿಸಿದರು.

ಶಿಕ್ಷಕಿ ಆಗುವ ಅವಕಾಶ ಸಿಗಲಿಲ್ಲ, ಈಗ ಮಹಿಳೆಯರಿಗೆ ಸ್ವಯಂ ಉದ್ಯೋಗ ಹಾಗೂ ಆರ್ಥಿಕ ಸಬಲೀಕರಣದ ಪಾಠ ಹೇಳುವ ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆ ಹಾಗೂ ಗಂಗಮ್ಮ ಸ್ತ್ರೀಶಕ್ತಿ ಸಂಘ ಪ್ರೋತ್ಸಾಹ ನೀಡುತ್ತಿರುವುದರಿಂದ ಕೈಲಾದ ಮಟ್ಟಿಗೆ ಸಾಧನೆ ಮಾಡುವಂತಾಗಿದೆ. ಸಿರಿಧಾನ್ಯಗಳ ಆಹಾರಕ್ಕೆ ಬೇಡಿಕೆ ಬಂದಲ್ಲಿ ತಯಾರಿಸಿ ಸರಬರಾಜು ಮಾಡುತ್ತೇವೆ. ರತ್ನಮ್ಮ, ಉದ್ಯಮಿ, ಗುಂಡಮ್ಮನತ್ತ, ಶ್ರೀನಿವಾಸಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net