ಕೋಲಾರಕ್ಕಿಲ್ಲ ವಿಶೇಷ ಅನುದಾನ. ಜನರ ಆಸೆಗೆ ತಣ್ಣೀರು

kc vally
Published on

ಕೋಲಾರ: ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನವಾಗಲಿ, ಪ್ಯಾಕೇಜ್ ಆಗಲಿ ಘೋಷಣೆ ಆಗದಿರುವುದು ಜನತೆಯಲ್ಲಿ ನಿರಾಸೆಯನ್ನುಂಟು ಮಾಡಿದೆ.

ಬರಪೀಡತ ಜಿಲ್ಲೆಯ ರೈತರ, ಶ್ರಮಿಕರ ಹಾಗೂ ನಿರುದ್ಯೋಗಿ ಯುವಕರ ಕಷ್ಟ ಅರ್ಥ ಮಾಡಿಕೊಂಡು ವಿಶೇಷ ಯೋಜನೆಗಳನ್ನು ಪ್ರಕಟಿಸಿ ಅನುದಾನ ಮೀಸಲಿಡಬಹುದೆಂದು ನಿರೀಕ್ಷಿಸಲಾಗಿತ್ತಾದರೂ ಜನರ ಆಸೆಗೆ ತಣ್ಣೀರು ಎರಚಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಅಬಕಾರಿ ಇಲಾಖೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆಯೇ ಹೊರತು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬಿಡಿಗಾಸೂ ಅನುದಾನ ಕೊಡಿಸಲು ವಿಫಲರಾಗಿದ್ದಾರೆಂಬ ಟೀಕೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಜತೆಗೆ ಜಿಲ್ಲೆಯ ಶಾಸಕರು ಈ ಹಿಂದಿನ ರೀತಿಯಲ್ಲಿ ಒಗ್ಗಟ್ಟು ಪ್ರದರ್ಶಿಸಿ ಜಿಲ್ಲೆಯ ಅಭಿವೃದ್ಧಿಗೆ ಬದ್ಧತೆಯಿಂದ ಕೆಲಸ ಮಾಡದಿರುವುದರಿಂದ ಬಜೆಟ್‌ನಲ್ಲಿ ವಿಶೇಷ ಯೋಜನೆಗಳ ಘೋಷಣೆಗೆ ಅಡ್ಡಿಯಾಗಿರಬಹುದೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕೆಜಿಎಫ್‌ನಲ್ಲಿ ಚಿನ್ನದ ಗಣಿಗೆ ಸೇರಿದ ನೂರಾರು ಎಕರೆ ಭೂಮಿ ಉಪಯೋಗಕ್ಕೆ ಬಾರದೆ ಪಾಳು ಬಿದ್ದಿದ್ದು, ಈ ಜಾಗವನ್ನು ಆರ್ಥಿಕಾಭಿವೃದ್ಧಿ ವಲಯವಾಗಿ ಪರಿವರ್ತನೆ ಮಾಡಲು ಸರ್ಕಾರಕ್ಕೆ ಅವಕಾಶವಿತ್ತಾದರೂ ಏಕೆ ಗಮನ ಹರಿಸಿಲ್ಲ ಎಂಬುದು ಪ್ರಶ್ನೆಯಾಗಿದೆ.

ಕೆಜಿಎಫ್‌ನಲ್ಲಿ ಸೋಲಾರ್ ವಿದ್ಯುತ್ ಉಪಕರಣಗಳ ಘಟಕ ಸ್ಥಾಪಿಸಲು ಅವಕಾಶವಿದ್ದು, ಈ ಬಗ್ಗೆ ಜಿಲ್ಲಾ ಆಡಳಿತದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದರೂ ಬಜೆಟ್‌ನಲ್ಲಿ ಚಕಾರ ಎತ್ತದಿರುವುದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳ ವೈಫಲ್ಯ ಕಾರಣವೆಂಬ ಆಕ್ರೋಶ ವ್ಯಕ್ತವಾಗಿದೆ.

ಕೆಜಿಎಫ್‌ನಲ್ಲಿ ಗುಡಿ ಕೈಗಾರಿಕೆ, ಗಾರ್ಮೆಂಟ್ಸ್‌ಗಳ ಸ್ಥಾಪನೆಗೆ ವಿಫುಲ ಅವಕಾಶಗಳಿದ್ದರೂ ಮುಖ್ಯಮಂತ್ರಿಗಳ ಗಮನ ಸೆಳೆಯಲು ಜನಪ್ರತಿನಿಧಿಗಳು ಆಸಕ್ತಿ ತೋರದಿರುವುದು ಜಿಲ್ಲೆಯ ದೌರ್ಭಾಗ್ಯವೆಂದು ವ್ಯಾಖ್ಯಾನಿಸಲಾಗಿದೆ.

ಮುಳಬಾಗಿಲಿನಲ್ಲಿ 1200 ಎಕರೆ ಪ್ರದೇಶವನ್ನು ಕೈಗಾರಿಕಾ ವಸಾಹತು ಪ್ರದೇಶವಾಗಿ ಅಭಿವೃದ್ಧಿಪಡಿಸುವ ಕುರಿತು ಸಚಿವ ನಾಗೇಶ್ ಅನೇಕ ಬಾರಿ ಪ್ರಸ್ತಾಪಿಸಿದ್ದರಾದರೂ ರಾಜ್ಯ ಬಜೆಟ್‌ನಲ್ಲಿ ಇದಕ್ಕೆ ಪೂರಕವಾದ ಭರವಸೆ ಸಿಕ್ಕಿಲ್ಲ.

ಜಿಲ್ಲಾ ಕೇಂದ್ರವಾದ ಕೋಲಾರದಲ್ಲಿ ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಮೈಸೂರು ಮಾದರಿಯಲ್ಲಿ ಕೌಶಲ ತರಬೇತಿ ಕೇಂದ್ರ ಸ್ಥಾಪಿಸುವುದಾಗಿ ಸಚಿವರು ನೀಡಿದ್ದ ಭರವಸೆ ಈಡೇರಿಲ್ಲ. ಸುರಕ್ಷತೆ ಇಲ್ಲದ ಕೃಷಿ ಹೊಂಡಗಳಿಗೆ ಬೇಲಿ ಹಾಕುವ ಕಾರ್ಯಕ್ರಮಕ್ಕೆ ಬಿಡಿಗಾಸೂ ಆರ್ಥಿಕ ಸಹಾಯ ಸಿಕ್ಕಿಲ್ಲ, ನರಸಾಪುರ, ವೇಮಗಲ್, ಮಾಲೂರಿನಲ್ಲಿ ಖಾಲಿ ಉಳಿದಿರುವ ಜಾಗದಲ್ಲಿ ಹೊಸ ಕೈಗಾರಿಕೆ ಸ್ಥಾಪನೆಯಾಗಿಲ್ಲ. ಕೈಗಾರಿಕೆಗಳಿಗೆ ನೀರು ಮತ್ತು ಇನ್ನಿತರ ಸೌಕರ್ಯ ಒದಗಿಸದಿರುವುದರಿಂದ ಉದ್ಯಮಿಗಳು ನಿರಾಸೆಯಿಂದ ಜಾಗ ಖಾಲಿ ಮಾಡುತ್ತಿದ್ದು, ಇದಕ್ಕೆ ಬಜೆಟ್‌ನಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ.

ಕೋಲಾರ ಎಪಿಎಂಸಿಯಲ್ಲಿ ಟೊಮ್ಯಾಟೊ ಮಾರುಕಟ್ಟೆಗೆ ಸ್ಥಳದ ಅಭಾವವಿದ್ದು, ಜಮೀನು ಮಂಜೂರಾತಿಗೆ ಸರ್ಕಾರಕ್ಕೆ ಆಡಳಿತ ಮಂಡಳಿ ಪ್ರಸ್ತಾವನೆ ಕಳುಹಿಸಿ 3-4 ತಿಂಗಳಾದರೂ ಒಂದಿಂಚೂ ಭೂಮಿ ಪಡೆಯಲಾಗಿಲ್ಲ. ಈ ಬಾರಿ ಬಜೆಟ್‌ನಲ್ಲಿ ಟೊಮ್ಯಾಟೊ ಮಾರುಕಟ್ಟೆಗೆ ವಿಶೇಷ ಅನುದಾನ ಕೊಡಿಸಲು ಸ್ಥಳೀಯ ಶಾಸಕರಿಂದ ಯಾವುದೇ ಪ್ರಯತ್ನವಾಗಿಲ್ಲವೆಂಬುದು ರೈತರ ಆರೋಪ.

ಕೋಲಾರಕ್ಕೆ ನೀರು ಹರಿಸಲು ವರ್ಷ: ಬಜೆಟ್‌ನಲ್ಲಿ ಎತ್ತಿನಹೊಳೆ ಯೋಜನೆಗೆ 1500 ಕೋಟಿ ರೂ. ಮೀಸಲಿಟ್ಟಿದ್ದು ಕೋಲಾರಕ್ಕೆ ನೀರು ಹರಿಸಲು ಎಷ್ಟು ವರ್ಷ ಬೇಕಾಗಬಹುದೆಂಬುದು ಜಿಜ್ಞಾಸೆ ಉಂಟಾಗಿದೆ. ಅಟಲ್ ಭೂ-ಜಲ ಯೋಜನೆಯಡಿ ಅಂತರ್ಜಲ ಮಟ್ಟ ಹೆಚ್ಚಿಸಲು ನಿಗದಿಪಡಿಸಿರುವ ಅನುದಾನದಲ್ಲಿ ಜಿಲ್ಲೆಗೆ ಎಷ್ಟು ಅನುದಾನ ಸಿಗುತ್ತದೋ ನೋಡಬೇಕು, ಜಿಲ್ಲೆಯಲ್ಲಿ ವಿಶ್ವದ ಗಮನ ಸೆಳೆಯುವ ಪ್ರವಾಸಿ ತಾಣಗಳಿದ್ದು ಪದ್ಮಶ್ರೀ ಡಾ.ಸುಧಾಮೂರ್ತಿ ಅವರ ನೇತೃತ್ವದಲ್ಲಿ ರಚನೆಗೊಳ್ಳುವ ಪ್ರವಾಸೋದ್ಯಮ ಟಾಸ್ಕ್ ಪೋರ್ಸ್‌ನಿಂದ ಪ್ರಯೋಜನವಾಗುವ ಭರವಸೆ ಇದೆ. ಹನಿ ನೀರಾವರಿಗೆ ಬಜೆಟ್‌ನಲ್ಲಿ ನಿಗದಿ ಮಾಡಿರುವ ಹಣದಲ್ಲಿ ಜಿಲ್ಲೆಗೆ ಹೆಚ್ಚಿನ ಅನುದಾನ ಪಡೆಯಲು ಜನಪ್ರತಿನಿಧಿಗಳು ಪ್ರಯತ್ನಿಸಿದಲ್ಲಿ ತೋಟಗಾರಿಕೆ ಹಾಗೂ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net