ವೈಜ್ಞಾನಿಕ, ತಾಂತ್ರಿಕ ಬದಲಾವಣೆಯ ಅಲೆಗೆ ಯುವಸಮುದಾಯ ಕೊಚ್ಚಿ ಹೋಗದಿರಿ

5-klr-1
Published on

ಕೋಲಾರ: ವೈಜ್ಞಾನಿಕ, ತಾಂತ್ರಿಕ ಬದಲಾವಣೆಯ ಅಲೆಯಲ್ಲಿ ಯುವಸಮುದಾಯ ಕೊಚ್ಚಿ ಹೋಗುವ ಮುನ್ನ ಸಾಹಿತ್ಯ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆಯಿದೆ ಎಂದು ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ಟಿ.ಡಿ. ಕೆಂಪರಾಜು ಹೇಳಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾ ಕಸಾಪ, ದಾವಣಗೆರೆಯ ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಂಗಳೂರು ಉತ್ತರ ವಿವಿ ಸಹಕಾರದೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಗಡಿನಾಡಲ್ಲಿ ಶರಣ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಮಾತನಾಡಿದರು.

ವಿಶ್ವದಲ್ಲಿ ಭಾರತ ದೇಶ, ರಾಜ್ಯ ಬಲಿಷ್ಠವಾಗಿ ನಿಲ್ಲುವಂತಾಗಲು ನಮ್ಮ ಸಾಹಿತ್ಯ, ಸಂಸ್ಕೃತಿ, ಭಾಷೆಯ ನೆಲೆಗಟ್ಟು ಮತ್ತು ಅಸ್ಥಿತ್ವ ಕಾರಣ. ಇಂದಿನ ಬದಲಾವಣೆ ಅಲೆಗೆ ಯುವಸಮುದಾಯ ಕೊಚ್ಚಿ ಹೋಗದಂತೆ ಆ ಬದಲಾವಣೆಗೆ ಅನುಗುಣವಾಗಿ ಯುವ ಸಮುದಾಯವನ್ನು ತಲುಪುವುದು ಅತ್ಯವಶ್ಯಕ. ಇದಕ್ಕೆ ಪೂರಕವಾಗಿ ಉತ್ತರ ವಿವಿ ಚಟುವಟಿಕೆಯನ್ನು ಹಮ್ಮಿಕೊಳ್ಳುತ್ತದೆ ಎಂದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮುಖ್ಯ ಸಲಹೆಗಾರ ಗೊ.ರು.ಚನ್ನಬಸಪ್ಪ ಮಾತನಾಡಿ, ನಾವೇ ಮಾಡಿದ ಸಮಾಜ, ನಾವೇ ಮಾಡಿದ ಸಿದ್ಧಾಂತ, ಧರ್ಮ, ನಾವೇ ತಂದ ಅಡಳಿತದಲ್ಲಿ ಭ್ರಷ್ಟಾಚಾರ ಬುಸುಗುಡುತ್ತಿರುವ ಹಾವಿನಂತೆ ಎಲ್ಲ ರಂಗದಲ್ಲಿ ತುಂಬಿದೆ. ಧರ್ಮ ಗುರುಗಳು ಜೈಲಿಗೆ ಹೋಗಿ ಬಂದಿದ್ದಾರೆ. ಹಣಕಾಸು ವ್ಯವಹಾರ ಹಗರಣಗಳ ಹುತ್ತವಾಗಿದೆ. ರಾಜಕಾರಣಿಗಳು ಸ್ವಹಿತದಲ್ಲಿ ಮುಳುಗಿದ್ದು, ಪ್ರಜ್ಞಾಹೀನವಾಗಿರುವ ವ್ಯವಸ್ಥೆಯನ್ನು ಎಚ್ಚರಿಸುವ ಕೆಲಸವನ್ನು ವಿಚಾರವಂತರು, ಬುದ್ಧಿಜೀವಿಗಳು, ಶಿಕ್ಷಕರು ಮಾಡಬೇಕು ಎಂದು ಸಲಹೆ ನೀಡಿದರು.

ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನ ಅಧ್ಯಕ್ಷ ಎಂ.ಬಿ. ಸಂಗಮೇಶ್ವರಗೌಡ ಮಾತನಾಡಿ, ಬಸವಣ್ಣ ಜನಸಮುದಾಯಕ್ಕೆ ಸೇರಿದವರು, ಜಾತಿ ಭೇದವಿಲ್ಲದೆ ಎಲ್ಲರೂ ಶರಣತತ್ವ ಒಪ್ಪಿ ನಡೆದರೆ ಜೀವನ ಪಾವನವಾಗುತ್ತದೆ. ಕಸಾಪ ಕಾರ್ಯಕ್ರಮಗಳಲ್ಲಿ ಶರಣ ಸಾಹಿತ್ಯವನ್ನೂ ಪ್ರಚಾರ ಮಾಡಬೇಕು ಎಂದು ಕೋರಿದರು.

ಸಾನ್ನಿಧ್ಯ ವಹಿಸಿದ್ದ ನಾಗಲಾಪುರ ಮಠದ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿ ಮಾತನಾಡಿ, ಅನೇಕ ಕ್ರಾಂತಿಗಳನ್ನು 12ನೇ ಶತಮಾನದಲ್ಲಿ ಕಾಣಬಹುದಾಗಿದೆ. ಅರಿವಿನ ಕಂದಕ ನಿವಾರಿಸಲು ಶರಣರು ಶ್ರಮಿಸಿದ್ದರು. ನುಡಿದಂತೆ ನಡೆದವರು, ನಡೆದಂತೆ ನುಡಿದವರು ಶರಣರು ಎಂದರು.

ಜಿಪಂ ಅಧ್ಯಕ್ಷ ಸಿ.ಎಸ್. ವೆಂಕಟೇಶ್, ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯ ವಿ.ರಂಗಪ್ಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಬಿ.ಎಂ.ಚನ್ನಪ್ಪ, ದಾವಣಗೆರೆ ಕಸಾಪ ಅಧ್ಯಕ್ಷ ಡಾ.ಎಚ್.ಎಸ್. ಮಂಜುನಾಥಕುರ್ಕಿ, ಕೊಡಗು ಜಿಲ್ಲೆ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್, ಅಬಕಾರಿ ಇಲಾಖೆ ನಿವೃತ್ತ ಉಪ ಆಯುಕ್ತ ಎಲ್.ಎ.ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಹಾಜರಿದ್ದರು.

ಎನ್.ಆರ್.ಜ್ಞಾನಮೂರ್ತಿ ಅವರಿಗೆ 2019ನೇ ಸಾಲಿನ ಆರೂಢ ದಾಸೋಹಿ ಮಹಾಶರಣ ಮಾಗನೂರು ಬಸಪ್ಪ ಗೌರವ ಸಮರ್ಪಣೆ ಮಾಡಲಾಯಿತು. ಕನ್ನಡ ಸಾಹಿತ್ಯ ಸಂಶೋಧನೆಯಲ್ಲಿ ಯಶಸ್ಸು ಪಡೆದ ಸಂಶೋಧಕರಾದ ಡಾ. ಸಿ.ಎ.ರಮೇಶ್, ಡಾ.ಎನ್. ಕವಿತ, ಡಾ.ಡಿ.ಎಸ್. ಶ್ರೀನಿವಾಸಪ್ರಸಾದ್, ಡಾ.ವಿ.ಮುನಿರಾಜು, ಡಾ. ಗಾಯತ್ರಿ ದೇವಿ, ಡಾ.ಕೆ.ಪ್ರಕಾಶ್, ಡಾ.ಕೆ.ಪ್ರಸನ್ನ ಕುಮಾರ್, ಡಾ. ಪ್ರಸನ್ನಕುಮಾರ್ ಅವರನ್ನು ಸನ್ಮಾನಿಸಲಾಯಿತು.

ದತ್ತಿನಿಧಿಯಿಂದ ಕನ್ನಡಾನಂದ ಬಿರುದು: ಜಿಲ್ಲೆಯಲ್ಲಿ ಶರಣ ಸಂಸ್ಕೃತಿ ಉತ್ಸವ ನಡೆಸಬೇಕೆಂಬ ಕನಸು ನನಸಾಗುತ್ತಿದೆ. 1 ಲಕ್ಷ ರೂ.ಗಳನ್ನು ತಂದೆ ಕೆ.ಎನ್. ಕೆಂಪಯ್ಯ, ತಾಯಿ ಎಸ್.ನಾಚಮ್ಮ ಸ್ಮರಣಾರ್ಥ ದತ್ತಿನಿಧಿಯಾಗಿ ಇಡಲಾಗಿದೆ. ಇದರಡಿ ನಾಡಿನ ಅಥವಾ ಜಿಲ್ಲೆಯ ಕನ್ನಡಪರ ಹೋರಾಟಗಾರ ಅಥವಾ ಸಾಹಿತಿಗಳ ಕುರಿತು ಉಪನ್ಯಾಸ ಹಾಗೂ ಜಿಲ್ಲೆಯ ಕನ್ನಡಪರ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಬ್ಬರಿಗೆ ಕನ್ನಡಾನಂದ ಬಿರುದು ನೀಡಿ ಗೌರಿವಿಸಲಾಗುವುದು ಎಂದು ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ಪ್ರಕಟಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net