ಜಾತಿ-ಧರ್ಮದ ಆಧಾರದಲ್ಲಿ ಜನಸಮುದಾಯ ವಿಭಜನೆ

27-klr-3
Published on

ಕೋಲಾರ: ಮನುಷ್ಯನೇ ಸೃಷ್ಟಿಸಿಕೊಂಡಿರುವ ಜಾತಿ, ಧರ್ಮದ ಆಧಾರದಲ್ಲಿ ಜನಸಮುದಾಯ ವಿಭಜಿಸಿಕೊಳ್ಳುತ್ತಿರುವುದು ಸಮಾಜದ ಮೇಲೆ ದುಷ್ಪಪರಿಣಾಮ ಬೀರುತ್ತಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.

ಟಿ.ಚನ್ನಯ್ಯರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುವಾರ ಆಯೋಜಿಸಿದ್ದ ದಲಿತ ವಚನಕಾರರ ಜಯಂತ್ಸುತ್ಸವ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಜಾತಿ ಪದ್ಧತಿ ಹುಟ್ಟು ಹಾಕಿರುವ ಮಹಾನುಭಾವರಿಗೆ ಶಾಪ ಹಾಕಿದರೂ ತಪ್ಪಲ್ಲ. ಯಾರೂ ಇಂತಹದ್ದೇ ಜಾತಿ, ಧರ್ಮದಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಳ್ಳುವುದಿಲ್ಲ. ಬೆಳೆಯುತ್ತಾ ಬೆಳೆಯುತ್ತಾ ಜಾತಿ, ಧರ್ಮದ ವಿಷಯದಲ್ಲಿ ವಿಭಜನೆಗೊಳ್ಳುತ್ತಿರುವುದು ಬೇಸರದ ಸಂಗತಿ ಎಂದರು.

ದೇಶ ಸ್ವಾತಂತ್ರ್ಯ ಪಡೆದು 73 ವರ್ಷ ಕಳೆದರೂ ಅಸ್ಪ್ರಶ್ಯತೆ ಆಚರಣೆ ಕಂಡರೆ ಡಾ.ಅಂಬೇಡ್ಕರ್ ಚಿಂತನೆಗಳನ್ನು ಜನ ಇನ್ನೂ ಅರ್ಥಮಾಡಿಕೊಂಡಿಲ್ಲ. ನಾನು ವಿದ್ಯಾರ್ಥಿ ದೆಸೆಯಿಂದ ಜಾತಿಯತೆಯನ್ನು ವಿರೋಧಿಸಿಕೊಂಡು ಬಂದಿದ್ದೆ ಎಂದರು.

ಜಿಪಂ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಮಾತನಾಡಿ, ಶೋಷಿತರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಲು ಪ್ರಯತ್ನಿಸಿದವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಜಾತಿ, ಧರ್ಮದ ತಾರತಮ್ಯ ಬಿಟ್ಟು ಜೀವನ ರೂಪಿಸಿಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಡಳಿತದಿಂದ ವಿವಿಧೋದ್ದೇಶಗಳಿಗೆ ಸರ್ಕಾರಿ ಗೋಮಾಳ ಜಮೀನು ನೀಡಲಾಗುತ್ತಿದೆ. ಅದೇ ರೀತಿ ದಲಿತ ಕಲಾವಿದರಿಗೆ, ಪತ್ರಕರ್ತರಿಗೆ ನಿವೇಶನ ಕಲ್ಪಿಸಲು ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಕೋರಿದರು.

ಉಪನ್ಯಾಸ ನೀಡಿದ ನಿವೃತ್ತ ಪ್ರಾಧ್ಯಾಪಕ ಡಾ. ರಂಗಾರೆಡ್ಡಿ ಕೋಡಿರಾಂಪುರ, ಸಮಾಜದಲ್ಲಿನ ಅನಿಷ್ಟ ಜಾತಿ ಪದ್ಧತಿ, ಢಾಂಬಿಕ ಭಕ್ತಿಯ ವಿರುದ್ಧ ಕುದಿಯುತ್ತಿದ್ದ ದಲಿತ ವಚನಕಾರರಾದ ಮಾದಾರ ಚನ್ನಯ್ಯ, ಮಾದಾರ ಧುಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗಪೆದ್ದಿ ಇತರರನ್ನು ಬಸವಣ್ಣನವರು ಒಗ್ಗೂಡಿಸಿದ್ದರು ಎಂದರು.

ವಿದ್ಯಾರ್ಥಿಗಳು ವಚನ, ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಅಚ್ಚುಕಟ್ಟಾಗಿ ಓದಿ ಅರ್ಥ ಮಾಡಿಕೊಂಡರೆ ಅರಿವಿನ ಆಯುಧವಾಗಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಜಿಪಂ ಸದಸ್ಯ ಅರುಣ್‌ಪ್ರಸಾದ್, ತಾಪಂ ಅಧ್ಯಕ್ಷ ಸೂಲೂರು ಎಂ. ಆಂಜಿನಪ್ಪ, ಎಡಿಸಿ ಬಿ.ಶಿವಸ್ವಾಮಿ, ಎಸಿ ಸೋಮಶೇಖರ್, ತಹಸೀಲ್ದಾರ್ ಶೋಭಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಕಸಾಪ ಅಧ್ಯಕ್ಷ ನಾಗಾನಂದ ಕೆಂಪರಾಜ್, ಹರಿಕಥಾ ವಿದ್ವಾನ್ ಎನ್.ಆರ್.ಜ್ಞಾನಮೂರ್ತಿ, ಮುಖಂಡರಾದ ಡಾ.ಚಂದ್ರಶೇಖರ್, ಕೃಷ್ಣಪ್ಪ, ಖಾದ್ರಿಪುರ ಬಾಬು, ಮಂಜುಳಾ, ಜನ್ನಘಟ್ಟ ಕೃಷ್ಣಮೂರ್ತಿ, ಶಿವಾರೆಡ್ಡಿ, ಯಲ್ಲಪ್ಪ ವೆಂಕಟಾಚಲಪತಿ ಇತರರಿದ್ದರು.

ಪ್ರಮುಖರ ಗೈರು: ಜಯಂತಿಗೆ ಐಟಿಐ ವಿದ್ಯಾರ್ಥಿಗಳನ್ನು ಕರೆತಂದಿದ್ದು ಬಿಟ್ಟರೆ ಸಾರ್ವಜನಿಕರೇ ಬಂದಿರಲಿಲ್ಲ. 11ಕ್ಕೆ ಶುರುವಾಗಬೇಕಿದ್ದ ಕಾರ್ಯಕ್ರಮ 1 ಗಂಟೆ ತಡವಾಯಿತು. ಆಹ್ವಾನಿತರಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಒಳಗೊಂಡು ಎಲ್ಲ ಶಾಸಕರು, ಡಿಸಿ, ಎಸ್ಪಿ ಗೈರಾಗಿದ್ದು ಟೀಕೆಗೆ ಗ್ರಾಸವಾಯಿತು. ಸಮ ಸಮಾಜ ನಿರ್ಮಾಣಕ್ಕೆ ಹಾಗೂ ಶೋಷಿತರ ಹೇಳಿಗೆಗೆ ಶ್ರಮಿಸಿದವರ ಜಯಂತಿ ನಡೆಯುತ್ತಿದ್ದರೂ ಜನ ಭಾಗವಹಿಸಿಲ್ಲ ಎಂದರೆ ಹೇಗೆ ಎಂದು ಶಾಸಕ ಶ್ರೀನಿವಾಸಗೌಡ ಪ್ರಶ್ನಿಸಿದರು. ಜಿಲ್ಲಾಡಳಿತ,ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪಕ ಪ್ರಚಾರ ನೀಡಿದ್ದರೆ ರಂಗಮಂದಿರ ತುಂಬುತ್ತಿತ್ತು ಎಂದು ಜಿಪಂ ಸದಸ್ಯ ಅರುಣ್‌ಪ್ರಸಾದ್ ಹೇಳಿದರು.

ಶಿಷ್ಠಾಚಾರದ ಪ್ರಕಾರ ಆಮಂತ್ರಣ ಪತ್ರ ಮುದ್ರಿಸದಿದ್ದಲ್ಲಿ ಪ್ರಶ್ನಿಸುತ್ತಾರೆ. ಗೈರಾಗುವುದು ಆ ಮಹನೀಯರಿಗೆ, ಸಮುದಾಯಕ್ಕೆ ಅಪಮಾನಿಸಿದಂತೆ, ಇನ್ನು ಮುಂದೆ ಕಡ್ಡಾಯವಾಗಿ ಪಾಲ್ಗೊಳ್ಳುವವರ ಹೆಸರು ಮಾತ್ರ ಹಾಕಬೇಕು. ಸಿ.ಎಸ್.ವೆಂಕಟೇಶ್, ಜಿಪಂ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net