ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಅನುದಾನ ಕೋರಿ ಸಿಎಂ ಯಡಿಯೂರಪ್ಪಗೆ ಮನವಿ

23-klr-2
Published on

ಕೋಲಾರ: ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗೆ ಬಜೆಟ್‌ನಲ್ಲಿ 300 ಕೋಟಿ ರೂ. ಮೀಸಲಿಡುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿರುವುದಾಗಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್. ಸಚ್ಚಿದಾನಂದಮೂರ್ತಿ ಹೇಳಿದರು.

ನಗರದ ಗಾಯತ್ರಿ ಪ್ರಾರ್ಥನಾ ಮಂದಿರದಲ್ಲಿ ಕೋಲಾರ ಬ್ರಾಹ್ಮಣ ಸಂಘದಿಂದ ಭಾನುವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಬಿಜೆಪಿ ಸರ್ಕಾರ ಹೊಸದಾಗಿ ಮಂಡಳಿ ರಚಿಸಿ ಆರಂಭಿಕ ಅನುದಾನ 25 ಕೋಟಿ ರೂ. ನೀಡಿದೆ. ಬಜೆಟ್‌ನಲ್ಲಿ 75 ಕೋಟಿ ರೂ. ನೀಡುವುದಾಗಿ ಸಿಎಂ ಭರವಸೆ ನೀಡಿದ್ದರಾದರೂ 300 ಕೋಟಿ ರೂ. ನೀಡುವಂತೆ ಮನವಿ ಮಾಡಲಾಗಿದೆ ಎಂದರು.

ಯೋಜನೆಗಳು: ಸಾಂದೀಪನಿ ಶಿಷ್ಯ ವೇತನ, ಉನ್ನತ ವ್ಯಾಸಂಗಕ್ಕೆ ಶೈಕ್ಷಣಿಕ ಸಾಲ, ಆಚಾರ್ಯತ್ರಯ ವೇದ ಶಿಷ್ಯ ವೇತನ, ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ, ಚಾಣಕ್ಯ ಆಡಳಿತ ತರಬೇತಿ ಯೋಜನೆ, ಸನ್ನಿಧಿ ಯೋಜನೆಯಡಿ ಹಾಸ್ಟೆಲ್, ಕಲ್ಯಾಣ ಕಾರ್ಯಕ್ರಮ, ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಲಾಗುವುದು. ಈ ಯೋಜನೆಗಳಿಗೆ ಕುಟುಂಬಗಳ ವಾರ್ಷಿಕ ಆದಾಯ, ವಿದ್ಯಾರ್ಹತೆಗಳ ಕುರಿತು ಶೀಘ್ರ ನಿರ್ಧರಿಸಲಾಗುವುದು ಎಂದರು.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 21 ಕ್ಷೇತ್ರಗಳಲ್ಲಿ ಬ್ರಾಹ್ಮಣ ಸಮುದಾಯ ನಿರ್ಣಾಯಕ ಪಾತ್ರ ವಹಿಸುತ್ತದೆ. 40 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದ್ದರೂ ಸರ್ಕಾರದ ಅಂಕಿ-ಅಂಶದ ಪ್ರಕಾರ 17 ಲಕ್ಷ ಮಾತ್ರ ಇದೆ. ಜಾತಿ ಜನಗಣತಿಯಲ್ಲಿ ಬ್ರಾಹ್ಮಣ ಸಮುದಾಯ ಒಳ ಪಂಗಡ ನಮೂದಿಸಿರುವುದೇ ಸಮಸ್ಯೆ ಕಾರಣ. ಮರು ಸಮೀಕ್ಷೆ ನಡೆಸಲು ಸರ್ಕಾರವನ್ನು ಆಗ್ರಹಿಸಲಾಗಿದೆ ಎಂದರು.

ಸಂಘದ ಅಧ್ಯಕ್ಷ ಬಿಒ.ಎನ್. ವಾಸುದೇವಮೂರ್ತಿ ಮಾತನಾಡಿ, ಹೊಸದಾಗಿ ರಚನೆಯಾಗಿರುವ ಅಭಿವೃದ್ಧಿ ಮಂಡಳಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಸಲಹೆ, ಸೂಚನೆಗಳನ್ನು ನೀಡಬಹುದು ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸದಸ್ಯ ನರಸಿಂಹಮೂರ್ತಿ, ನಗರಸಭೆ ಪೌರಾಯುಕ್ತ ಶ್ರೀಕಾಂತ್, ಸಂಘದ ಪದಾಧಿಕಾರಿಗಳಾದ ಎನ್.ಕೆ. ಅಚ್ಯುತ, ಎಂ.ಪಿ.ಆನಂದ್, ಚಂದ್ರಪ್ರಕಾಶ್, ರವಿಶಂಕರ್ ಅಯ್ಯರ್, ಹಾಬಿ ರಮೇಶ್, ಡಾ. ಕೃಷ್ಣಮೂರ್ತಿ, ಉದಯಶಂಕರ್, ಅಮರನಾಥ್, ಜಯಶ್ರೀ ಹಾಜರಿದ್ದರು.

ನಂದವರಿಕ ಬ್ರಾಹ್ಮಣ ಸಂಘದ ಡಾ. ಜಯರಾಂ, ಉಲುಚುಕಮ್ಮೆ ಬ್ರಾಹ್ಮಣ ಸಂಘದ ಸಾ.ನಾ.ಮೂರ್ತಿ, ಯಾಜ್ಞವಲ್ಕ್ಯ ಸಂಘದ ಅಶ್ವತ್ಥನಾರಾಯಣ, ಕಾಳಹಸ್ತಿಪುರದ ಕೆ.ವಿ. ನಾಗರಾಜ್ ಮಂಡಳಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.

ಸ್ಥಾನ ಖುಷಿ ನೀಡಿಲ್ಲ: ಬಿಜೆಪಿಯಲ್ಲಿ 40 ವರ್ಷ ವಿವಿಧ ಹುದ್ದೆಗಳಲ್ಲಿದ್ದೆ. ನನಗಿಂತ ಕಿರಿಯರು ಶಾಸಕರು, ಸಚಿವರು, ಸಂಸದರಾಗಿದ್ದಾರೆ. ವಿಧಾನ ಪರಿಷತ್‌ಗೆ ಕಳುಹಿಸುವಂತೆ ಯಡಿಯೂರಪ್ಪ ಅವರನ್ನು ಕೋರಿದ್ದೆ. ಸಿಎಂ ಭೇಟಿಯಾಗಿ ಕೊಳಚೆ ನಿರ್ಮೂಲನಾ ಮಂಡಳಿ ಅಧ್ಯಕ್ಷ ಸ್ಥಾನದ ಕೋರಿಕೆ ಇಡುವ ಹಂತದಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷನನ್ನಾಗಿ ಆದೇಶಿಸಿದರು. ಈ ಸ್ಥಾನ ಖುಷಿ ತಂದುಕೊಟ್ಟಿಲ್ಲವಾದರೂ ಸಮುದಾಯದ ಅಭಿವೃದ್ಧಿಗೆ ಉಳಿದ ಮೂರು ವರ್ಷಗಳಲ್ಲಿ ಕೆಲಸ ನಿರ್ವಹಿಸಬೇಕೆಂಬ ಕಾಳಜಿಯಿಂದ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಸಚ್ಚಿದಾನಂದಮೂರ್ತಿ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net