

ಲಕ್ಕೂರು: ಲಕ್ಕೂರಿನ ಶ್ರೀಸೋಮೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರಿಗಿತು.
ವೇದ ಬ್ರಹ್ಮ ಶ್ರೀ ವೆಂಕಟಾಚಲಯ್ಯ ಅವರ ಅಗಮಿಕತ್ವದಲ್ಲಿ ಆಯೋಜಿಸಿದ್ದ 156ನೇ ಬ್ರಹ್ಮರಥೋತ್ಸವಕ್ಕೆ ತಹಸೀಲ್ದಾರ್ ಮುನಿರಾಜ್ ಚಾಲನೆ ನೀಡಿದ ಬಳಿಕ ಕರ್ನಾಟಕ, ತಮಿಳುನಾಡು, ಆಂಧ್ರ ಸೇರಿ ಹೋಬಳಿ ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪ್ರಸನ್ನ ಸೋಮೇಶ್ವರ ಸ್ವಾಮಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಹರ, ಹರ ಮಹದೇವ್, ಓಂ ನಮಃ ಶಿವಾಯ ಘೋಷಣೆ ಕೂಗುತ್ತಾ ರಥವನ್ನು 2 ಕಿಮೀ ಗ್ರಾಮ ಪ್ರದಕ್ಷಣೆ ಹಾಕಿಸಲಾಯಿತು.
ಒಂಬತ್ತು ದಿನ ನಡೆಯುವ ಜಾತ್ರೆ ಮಹೊತ್ಸೋವದಲ್ಲಿ ಹಂಸವಾಹನೋತ್ಸವ, ಪಲ್ಲಕ್ಕಿ ಉತ್ಸವ, ಅಶ್ವವಾಹನೋತ್ಸವ, ಶಯನೋತ್ಸವ, ವಸಂತೋತ್ಸವ, ಧ್ವಜಾರೋಹಣ, ಮಹಾಭಿಷೇಕ ಮುಂತಾದ ಉತ್ಸವ ನಡೆದವು. ರಥೋತ್ಸವದಲ್ಲಿ ಸೋಮೇಶ್ವರಸ್ವಾಮಿ, ಕೋದಂಡರಾಮಸ್ವಾಮಿ, ಅಂಜನೇಯಸ್ವಾಮಿ, ನರಸಿಂಹಸ್ವಾಮಿ, ಮುತ್ಯಾಲಮ್ಮದೇವಿ, ಯಲ್ಲಮ್ಮದೇವಿ, ಗಂಗಮ್ಮದೇವಿ, ಗಣೇಶ ದೇವರ ಪಲ್ಲಕ್ಕಿಗಳ ಮೆರವಣಿಗೆ ಮಾಡಲಾಯಿತು.
ಜಾತ್ರೆಯಲ್ಲಿ ಪಂಡರಿ ಭಜನೆ, ಕೀಲು ಕುದರೆ, ಮುಂತಾದ ಮನರಂಜನಾ ಕಾರ್ಯಕ್ರಮಗಳನ್ನು ನಡೆಯಿತು. ಬಿಜೆಪಿ ಮುಖಂಡ ಹೂಡಿ ವಿಜಯ್‌ಕುಮಾರ್, ಮಾಜಿ ತಾಪಂ ಸದಸ್ಯ ಕೃಷ್ಣಸಿಂಗ್, ಮಾಜಿ ಗ್ರಾಪಂ ಸದಸ್ಯ ವಕೀಲ ಡಿ.ನಾರಾಯಣಸ್ವಾಮಿ, ಕೆ.ಮನೋಹರ್, ಎ.ಸುರೇಶ್‌ರೆಡ್ಡಿ, ಗ್ರಾಪಂ ಅಧ್ಯಕ್ಷೆ ಸುಬ್ಬಮ್ಮ ಕೃಷ್ಣಪ್ಪ, ಅಗ್ರಿನಾರಾಯಣಪ್ಪ, ಎಸ್‌ಐ ಆಂಜಿನಪ್ಪ, ಧರ್ಮದರ್ಶಿಗಳು, ಗ್ರಾಮದ ಹಿರಿಯರು, ಜನಪ್ರತಿನಿದಿಗಳು ಭಾಗವಹಿಸಿದ್ದರು.