

ಬೂದಿಕೋಟೆ: ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಸಮೀಪದ ಮಾರಾಂಡಹಳ್ಳಿ, ಊಸರಹಳ್ಳಿ ಸುತಮುತ್ತಲಿನ ಗ್ರಾಮಗಳಿಗೆ ಸೋಮವಾರ ರಾತ್ರಿ 30ಕ್ಕೂ ಹೆಚ್ಚು ಕಾಡಾನೆಗಳು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಟೊಮ್ಯಾಟೊ, ಬೀನ್ಸ್, ಆಲೂಗಡ್ಡೆ, ರಾಗಿ ಸೇರಿ ಹಲವು ಬೆಳೆಗಳನ್ನು ನಾಶ ಮಾಡಿವೆ.
ಎರಡು ತಿಂಗಳಿಂದ ಬೂದಿಕೋಟೆ ಹಾಗೂ ದಿನ್ನಹಳ್ಳಿ ಹೋಬಳಿಯ ಗಡಿಭಾಗಕ್ಕೆ ಬಂದಿರುವ 30ಕ್ಕೂ ಹೆಚ್ಚು ಕಾಡಾನೆಗಳ ಪುಂಡಾಟದಿಂದ ಪ್ರತಿದಿನ ಅಪಾರ ಪ್ರಮಾಣದ ಬೆಳೆ ನಾಶವಾಗುತ್ತಿದೆ.
ಸೋಮವಾರ ರಾತ್ರಿ ಕಾಡಾನೆಗಳು ಮಾರಾಂಡಹಳ್ಳಿ ಕೋಡೆಪ್ಪ ಅವರು ಬೆಳೆದ ರಾಗಿ ಬೆಳೆ, ಊಸರಹಳ್ಳಿ ರೈತ ನಾಗರಾಜು ಅವರು ಎರಡೂವರೆ ಎಕರೆ ಪ್ರದೇಶದಲ್ಲಿ ಬೆಳೆದ ಟೊಮ್ಯಾಟೊ ಬೆಳೆ, ವೆಂಕಟೇಶ್ ಅವರ ಎರಡು ಎಕರೆ ಬೀನ್ಸ್ ಬೆಳೆಯನ್ನು ನಾಶಮಾಡಿವೆ. ಇದೇ ಗ್ರಾಮದ ಕೃಷ್ಣಪ್ಪ ಹಾಗೂ ನಾರಾಯಣಪ್ಪ ಅವರ ಆಲೂಗಡ್ಡೆ ಬೆಳೆ, ವೆಂಕಟೇಶಪ್ಪ ಅವರ ರಾಗಿ ಮೆದೆ, ಗೋವಿಂದಪ್ಪ ಅವರ ನವಿಲುಕೋಸು ಬೆಳೆ ನಾಶ ಮಾಡಿವೆ.
ಆನೆ ದಾಳಿಯಿಂದ ನಿರಂತರವಾಗಿ ಬೆಳೆ ನಾಶವಾಗುತ್ತಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳು ಜಮೀನಿನತ್ತ ತಲೆ ಹಾಕದೇ ಇರುವುದರಿಂದ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಬೆಳೆ ಕಳೆದುಕೊಂಡ ರೈತರ ಸತತ ಪೋನ್ ಕರೆಗೆ ಓಗೊಟ್ಟು ಬಂದ ಅರಣ್ಯ ಸಿಬ್ಬಂದಿಗೆ ರೈತರು ತರಾಟೆಗೆ ತೆಗೆದುಕೊಂಡು, ಕಳೆದ ವರ್ಷ ಬೆಳೆ ಕಳೆದುಕೊಂಡ ರೈತರಿಗೆ ಇನ್ನೂ ಸೂಕ್ತ ಪರಿಹಾರ ಒದಗಿಸಲಿಲ್ಲ. ಈ ವರ್ಷ ಸಹ ಪ್ರತಿನಿತ್ಯ ಕಾಡಾನೆಗಳ ದಾಳಿಯಿಂದ ಬೆಳೆ ಹಾನಿಯಾಗುತ್ತಿದ್ದರೂ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡಲು ಮುಂದಾಗದಿರುವ ನಿಮಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಕಳೆದ ವರ್ಷ ಬೆಳೆ ಕಳೆದುಕೊಂಡ ಹಲವು ರೈತರು ಸೂಕ್ತ ದಾಖಲೆ ಸಲ್ಲಿಸದಿರುವ ಕಾರಣ ಪರಿಹಾರದ ಹಣ ಸಿಗಲಿಲ್ಲ. ಮತ್ತೆ ಅವರಿಂದ ಸೂಕ್ತ ದಾಖಲೆ ಪಡೆದು ಪರಿಹಾರ ನೀಡಲಾಗುವುದು. ಈ ವರ್ಷ ಬೆಳೆ ಕಳೆದುಕೊಂಡವರಿಂದ ದಾಖಲೆ ಪಡೆಯುತ್ತಿದ್ದು, ತ್ವರಿತವಾಗಿ ಪರಿಹಾರ ನೀಡಲಾಗುವುದು. ದಿವ್ಯಾ, ಅರಣ್ಯ ಇಲಾಖೆ ಸಿಬ್ಬಂದಿ ಸುಮಾರು 4 ಲಕ್ಷ ರೂ. ಸಾಲ ಮಾಡಿ ಎರಡೂವರೆ ಎಕರೆ ಪ್ರದೇಶದಲ್ಲಿ ಬೆಳೆದ ಟೊಮ್ಯಾಟೊ ಮತ್ತು ಬೀನ್ಸ್ ಬೆಳೆಯನ್ನು ಆನೆಗಳು ನಾಶ ಮಾಡಿವೆ. ಕರೆ ಮಾಡಿದರೂ ಅರಣ್ಯ ಇಲಾಖೆಯ ಸಿಬ್ಬಂದಿ ಬರತ್ತಿಲ್ಲ. ನಾಗರಾಜ್, ರೈತ ಊಸರಹಳ್ಳಿ