ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಯೊಂದಿಗೆ ಸ್ಥಳೀಯರಿಗೆ ಉದ್ಯೋಗಾವಕಾಶ

11-klr-1
Published on

ಕೋಲಾರ: ಜಿಲ್ಲೆಯ ವಿದ್ಯಾವಂತ ನಿರುದ್ಯೋಗಿಗಳಿಗೆ ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮುಳಬಾಗಿಲಿನಲ್ಲಿ 1650 ಎಕರೆಯಲ್ಲಿ ಕೈಗಾರಿಕಾ ಪ್ರದೇಶ ಆರಂಭ ಹಾಗೂ ನರಸಾಪುರ ಕೈಗಾರಿಕಾ ಪ್ರದೇಶ ವಿಸ್ತರಿಸಲಾಗುವುದು ಎಂದು ಸಚಿವ ಎಚ್.ನಾಗೇಶ್ ಹೇಳಿದರು.

ಸಿಬಿಐಟಿ ಕಾಲೇಜಿನಲ್ಲಿ ಕೌಶಲಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಎರಡು ದಿನ ಆಯೋಜಿಸಿರುವ ಬೃಹತ್ ಉದ್ಯೋಗ ಮೇಳಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ನೀರಿನ ಸಮಸ್ಯೆಯಿಂದಾಗಿ ಕೈಗಾರಿಕೆಗಳು ಜಿಲ್ಲೆಗೆ ಬರಲು ಹಿಂದೇಟು ಹಾಕುತ್ತಿದ್ದವು.

ಮುಳಬಾಗಿಲಿನಲ್ಲಿ ಕೈಗಾರಿಕಾ ಪ್ರದೇಶ ಆರಂಭಿಸುವಂತೆ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಪ್ರಸ್ತಾವನೆ ನೀಡಲಾಗಿತ್ತು. ನೀರಿಲ್ಲದ ಕಾರಣಕ್ಕೆ ತಡೆಹಿಡಿಯಲಾಗಿತ್ತು. ಕೆಸಿ ವ್ಯಾಲಿ ನೀರು ಬಂದಿರುವುದರಿಂದ ಅಂತರ್ಜಲಮಟ್ಟ ಸುಧಾರಿಸಿದೆ. ಮುಳಬಾಗಿಲಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆ ಸರ್ಕಾರದ ಹಂತದಲ್ಲಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ಓದು ಸಾರ್ಥಕವಾಗಲು ಉದ್ಯೋಗ ಪಡೆಯಬೇಕು, ನಿರೀಕ್ಷೆಯೊಂದಿಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. ಉದ್ಯೋಗಾಕಾಂಕ್ಷಿಗಳ ಬಳಿ ದಾಖಲೆ ಕೊರತೆಯಿದ್ದರೂ ಕಾಲಾವಕಾಶ ಕೊಟ್ಟು ಆದ್ಯತೆ ಮೇರೆಗೆ ಕೆಲಸ ನೀಡಬೇಕು. ಉದ್ಯೋಗ ಸಿಕ್ಕವರು ಮನೆಗೆ ಆಧಾರಸ್ಥಂಭವಾಗಿ ತಂದೆ-ತಾಯಿಯನ್ನು ನೋಡಿಕೊಳ್ಳಬೇಕು. ಉದ್ಯೋಗ ಸಿಗದವರು ನಿರಾಶರಾಗದೆ ಅವಕಾಶಕ್ಕಾಗಿ ಕಾಯಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ಉದ್ಯೋಗ ಮೇಳಕ್ಕೆ 15500ಕ್ಕೂ ಹೆಚ್ಚು ಮಂದಿ ಆನ್‌ಲೈನ್ ನೋಂದಣಿ ಮಾಡಿಕೊಂಡಿದ್ದಾರೆ. 2000ಕ್ಕೂ ಅಧಿಕ ಮಂದಿ ನೇರವಾಗಿ ಸಂದರ್ಶನಕ್ಕೆ ಬಂದಿರಬಹುದು. 308 ಕಂಪನಿಗಳು ಬಂದಿವೆ. 50ಕ್ಕೂ ಅಧಿಕ ಕಂಪನಿಗಳು ಬರಲಿವೆ ಎಂದರು.

ಬೆಂಗಳೂರು-ಚೆನ್ನೈ ಇನ್ಫ್ರಾಸ್ಟ್ರಕ್ಚ್ಚರ್ ಕಾರಿಡಾರ್ ನಿರ್ಮಾಣ ಸಂಬಂಧ ಶೇ.80 ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಗುಲ್ಬರ್ಗದಲ್ಲಿನ ಸೋಲಾರ್ ಕ್ಲಸ್ಟರ್ ಕೆಜಿಎಫ್‌ಗೆ ಬರಲು ಉತ್ಸುಕವಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಿಜಿಎಂಎಲ್‌ನ 4500 ಎಕರೆ, ಬೆಮೆಲ್ ಬಳಸದಿರುವ 973 ಎಕರೆಯಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಕೈಗಾರಿಕೆ ಸ್ಥಾಪನೆಯಾದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಸಿಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.

ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೆಐಡಿಬಿ ಅಧ್ಯಕ್ಷರಾಗಿದ್ದ ಶಂಕರಲಿಂಗೇಗೌಡ ಜತೆ ಚರ್ಚಿಸಿ ನರಸಾಪುರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅವಕಾಶ ನೀಡಲಾಯಿತು. ಉದ್ಯೋಗ ಮೇಳದಲ್ಲಿ ಸ್ಥಳೀಯರಿಗೆ ಅವಕಾಶ ನೀಡಬೇಕು ಎಂದು ಕೋರಿದರು.

ಮದ್ಯ ಮಾರಾಟದಲ್ಲಿ ಮೀಸಲು: ಜಿಲ್ಲೆಯಲ್ಲಿ ಎಸ್ಸಿ, ಎಸ್ಟಿ ಉದ್ದಿಮೆದಾರರ ಸಮಾವೇಶ ನಡೆಸಬೇಕು. ಅಬಕಾರಿ ಇಲಾಖೆಗೆ ಹೆಚ್ಚು ಆದಾಯ ನೀಡುವವರು ಎಸ್ಸಿ, ಎಸ್ಟಿಗಳು. ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು ಮದ್ಯ ಮಾರಾಟದಲ್ಲಿ ಮೀಸಲು ಕಲ್ಪಿಸಬೇಕು ಎಂದು ಕೈಗಾರಿಕೋದ್ಯಮಿಗಳ ಸಂಘದ ಕಾರ್ಯಾಧ್ಯಕ್ಷ ಶ್ರೀನಿವಾಸ್ ಅಬಕಾರಿ ಸಚಿವರನ್ನು ಆಗ್ರಹಿಸಿದರು.

300ಕ್ಕೂ ಹೆಚ್ಚು ಕಂಪನಿ ಭಾಗಿ: ಮೇಳದಲ್ಲಿ ಐಟಿ 99 ಕಂಪನಿ, ಕೈಗಾರಿಕೆ 30, ಒಂದಕ್ಕಿಂತ ಹೆಚ್ಚು ಉದ್ಯೋಗಾವಕಾಶ ನೀಡುವ 60, ರಿಟೇಲ್, ಮಾರ್ಕೆಟಿಂಗ್ ಕ್ಷೇತ್ರದ 24, ಸೇವಾ ವಲಯದ 58, ಜವಳಿ, ಅೆರಲ್ 15, ಬಿಪಿಒ 10, ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರದ 9, ಆಸ್ಪತ್ರೆ 8 ಹೀಗೆ 300ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದವು.

ದಾಖಲೆಗಳೊಂದಿಗೆ ಬನ್ನಿ: ಜಿಲ್ಲೆಯಲ್ಲಿ 2017ರ ನಂತರ ನಡೆದ ಬೃಹತ್ ಉದ್ಯೋಗ ಮೇಳ ಇದಾಗಿದ್ದರಿಂದ ವಿವಿಧ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗಾಕಾಂಕ್ಷಿಗಳು ಬಂದಿದ್ದರು. ವಿದ್ಯಾರ್ಹತೆಗೆ ತಕ್ಕುದಾದ ವಿಭಾಗದ ಸಂದರ್ಶನ ಪತ್ರ ಪಡೆದು ವಿವರ ಭರ್ತಿ ಮಾಡಿ ಸಂದರ್ಶನ ಎದುರಿಸಿದರು. ಕೆಲವರಿಗೆ ಆಫರ್ ಪತ್ರ ಸಿಕ್ಕರೆ, ಕೈಗಾರಿಕೆ ವಲಯ ಸೇರಿ ಅನೇಕ ಕಂಪನಿಗಳು ಆಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್‌ಗೆ ಸೇರಿಸಿ ಸೂಕ್ತ ದಾಖಲಾತಿಗಳೊಂದಿಗೆ ಕಂಪನಿ ಕಚೇರಿಗೆ ಬರುವಂತೆ ಸೂಚಿಸಿದ್ದಾರೆ.

ಜಿಪಂ ಅಧ್ಯಕ್ಷ ಸಿ.ಎಸ್. ವೆಂಕಟೇಶ್, ಉಪಾಧ್ಯಕ್ಷೆ ಯಶೋದಾ ಕೃಷ್ಣಮೂರ್ತಿ, ಸದಸ್ಯ ನಂಜುಂಡಪ್ಪ, ಸಿಬಿಐಟಿ ಕಾಲೇಜು ಅಧ್ಯಕ್ಷ ಡಾ.ಪ್ರಭಾಕರರೆಡ್ಡಿ, ಕಾರ್ಯದರ್ಶಿ ವಿ.ಕೃಷ್ಣಾರೆಡ್ಡಿ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಮುದುವಾಡಿ ಮಂಜುನಾಥ್, ತೊರದೇವಂಡಹಳ್ಳಿ ಗ್ರಾಪಂ ಅಧ್ಯಕ್ಷ ವೆಂಕಟರೆಡ್ಡಿ, ರಾಜ್ಯ ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘದ ಅಧ್ಯಕ್ಷ ಸಿ.ಆರ್. ಜನಾರ್ದನ್, ಲಘು ಉದ್ಯೋಗ ಭಾರತಿ ಅಧ್ಯಕ್ಷ ಶ್ರೀಕಂಠದತ್ತ, ರಾಜ್ಯ ಮಹಿಳಾ ಉದ್ದಿಮೆದಾರರ ಸಂಘದ ಅಧ್ಯಕ್ಷೆ ಡಾ.ರಾಜೇಶ್ವರಿ, ಪೀಣ್ಯ ಕೈಗಾರಿಕೆ ಸಂಘದ ಅಧ್ಯಕ್ಷ ಶ್ರೀನಿವಾಸ್, ಎಸ್ಪಿ ಕಾರ್ತಿಕ್ ರೆಡ್ಡಿ, ಎಸಿ ಸೋಮಶೇಖರ್, ತಹಸೀಲ್ದಾರ್ ಶೋಭಿತಾ, ಕೌಶಲಾಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಜಂಟಿ ಕೃಷಿ ನಿರ್ದೇಶಕ ಎಸ್. ಬಿ. ಪೂಜಾರ್ ಇತರರಿದ್ದರು.

ಬಿಕಾಂ ಪದವೀಧರಳಾಗಿ ಇದೇ ಮೊದಲ ಬಾರಿಗೆ ಉದ್ಯೋಗಕ್ಕಾಗಿ ಸಂದರ್ಶನ ಎದುರಿಸಿದ್ದೆ. ಆರಂಭದಲ್ಲಿ ಭಯ ಇತ್ತು. ಕೇಳಿದ ಪ್ರಶ್ನೆಗಳಿಗೆ ಆತ್ಮವಿಶ್ವಾಸದಿಂದ ಉತ್ತರಿಸಿದೆ. ಬೆಂಗಳೂರಿನ ಕಂಪನಿಯೊಂದಕ್ಕೆ ಉದ್ಯೋಗಕ್ಕೆ ಆಯ್ಕೆಯಾಗಿದ್ದೇನೆ. ನಂದಿತಾ, ಕೋಲಾರ ಹೋಂಡಾ ಕಂಪನಿಯಲ್ಲಿ ಕೆಲಸದಲ್ಲಿದ್ದೆ. ಇನ್ನಷ್ಟು ಉತ್ತಮ ಉದ್ಯೋಗದ ನಿರೀಕ್ಷೆಯಲ್ಲಿ ಉದ್ಯೋಗ ಮೇಳಕ್ಕೆ ಬಂದಿದ್ದೆ. ಕಂಪನಿಯೊಂದರಲ್ಲಿ ಅವಕಾಶ ಸಿಕ್ಕಿದೆ. ಅನೇಕ ವಿದ್ಯಾವಂತ ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ಸಿಗಲಿದೆ. ಎಂ. ಸುಬ್ರಮಣಿ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net