ರಸಗೊಬ್ಬರಕ್ಕೆ ಗುಡ್ ಬೈ, ಶೂನ್ಯ ಬಂಡವಾಳ ಕೃಷಿಯಲ್ಲಿ ಖುಷಿ ಕಂಡ ಚಿಟ್ನಹಳ್ಳಿ ಪ್ರಗತಿಪರ ಕೃಷಿಕ ನಾಗರಾಜ್

9-klr-1
Published on

ಪಿ.ಎಸ್.ಹರೀಶ್ ಕೋಲಾರ

ರಸಗೊಬ್ಬರಕ್ಕೆ ಗುಡ್ ಬೈ ಹೇಳಿರುವ ಚಿಟ್ನಹಳ್ಳಿ ಪ್ರಗತಿಪರ ರೇಷ್ಮೆ ಕೃಷಿಕ ಸಿ.ಎಲ್.ನಾಗರಾಜ್ ಶೂನ್ಯ ಬಂಡವಾಳ ಪದ್ಧತಿಯಲ್ಲಿ ಜೀವಾಮೃತ ಬಳಸಿ ಹಿಪ್ಪುನೇರಳೆ ಬೆಳೆದು ಗುಣಮಟ್ಟದ ಬೈವೋಲ್ಟಿನ್ ರೇಷ್ಮೆ ತಯಾರಿಸಿ ಲಾಭಗಳಿಸುವ ಮೂಲಕ ಕೃಷಿಯಲ್ಲಿ ಖುಷಿ ಕಂಡಿದ್ದಾರೆ.

ಕೋಲಾರ ತಾಲೂಕಿನ ನಾಗರಾಜ್ 2008ರಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ದಶಕಗಳಿಂದ 2 ಎಕರೆಯಲ್ಲಿ ಹಿಪ್ಪುನೇರಳೆ ತೋಟಕ್ಕೆ ರಸಗೊಬ್ಬರ ಬಳಸುತ್ತಿದ್ದರು. ವರ್ಷದಿಂದ ಸುಭಾಷ್ ಪಾಳೇಕರ್ ಅವರ ಶೂನ್ಯ ಬಂಡವಾಳ ಕೃಷಿಯತ್ತ ಆಕರ್ಷಿತರಾಗಿ ಯೂ ಟ್ಯೂಬ್‌ನಲ್ಲಿ ಜೀವಾಮೃತ ತಯಾರಿಕೆ ಕಲಿತು ಕೃಷಿಯಲ್ಲಿ ಅಳವಡಿಸಿಕೊಂಡಿದ್ದಾರೆ.

ಜೀವಾಮೃತ ತಯಾರಿಕೆಯ ಪ್ರಮುಖ ಜೀವಾಳ ಸಗಣಿ ಮತ್ತು ಗಂಜಲ. ಇದಕ್ಕಾಗಿಯೇ ಕುಂದಾಪುರ, ಬೈಂದೂರು, ಮಂಡ್ಯದಿಂದ 3 ದೇಸಿ ಹಸು ತಂದು ಸಾಕಿದ್ದು, ಸಗಣಿ ಮತ್ತು ಗಂಜಲ ಸಂಗ್ರಹಿಸಿ ನಿಗದಿತ ಪ್ರಮಾಣದಲ್ಲಿ ಬೆಲ್ಲ, ಕಡಲೆಹಿಟ್ಟು ಹಾಕಿ ಜೀವಾಮೃತ ತಯಾರಿಸಿ 15 ದಿನಕ್ಕೊಮ್ಮೆ ಮೂರು ಸಲ ಹಿಪ್ಪುನೇರಳೆ ಗಿಡಕ್ಕೆ ನೀಡುತ್ತಿದ್ದಾರೆ. ಇದರ ಜತೆಗೆ ಸಗಣಿ, ಗಂಜಲ, ಬೆಲ್ಲ ಹಾಗೂ ಅರಣ್ಯ ಪ್ರದೇಶದ ಸ್ವಲ್ಪ ಮಣ್ಣು ಮಿಶ್ರಣ ಮಾಡಿ ಬೆರಣಿ ಸಿದ್ಧಪಡಿಸಿ ಹಿಪ್ಪುನೇರಳೆ ಗಿಡಕ್ಕೆ ಸಾವಯವ ಗೊಬ್ಬರವಾಗಿ ಒದಗಿಸುತ್ತಿದ್ದಾರೆ.

ಗೊಬ್ಬರ ಉತ್ಪಾದನೆ: ಒಂದು ಟನ್ ಸಂಗ್ರಹ ಸಾಮರ್ಥ್ಯದ ಪ್ಲಾಸ್ಟಿಕ್ ತೊಟ್ಟಿಯಲ್ಲಿ ಉತ್ಕೃಷ್ಟ ಕಾಂಪೋಸ್ಟ್ ಗೊಬ್ಬರ ತಯಾರಿಸುತ್ತಿದ್ದಾರೆ. ನಾಗರಾಜ್ ಅವರ ರೇಷ್ಮೆ, ತೋಟಗಾರಿಕೆ ಇಲಾಖೆ ಗಮನ ಸೆಳೆದಿದೆ. ಫೆ.1ರಂದು ನಾಗರಾಜ್ ಅವರ ತೋಟದಲ್ಲಿ ಕೃಷಿ ವಿಜ್ಞಾನ ಕೇಂದ್ರ, ರೇಷ್ಮೆ ಇಲಾಖೆ ಆಶ್ರಯದಲ್ಲಿ ನಡೆದ ಸಾವಯವ ಗೊಬ್ಬರ ಕ್ಷೇತ್ರೋತ್ಸವದಲ್ಲಿ 70 ರೈತರು ಮಾಹಿತಿ ಪಡೆದುಕೊಂಡಿದ್ದಾರೆ. ಸುತ್ತಮುತ್ತಲ ಗ್ರಾಮಗಳ ರೈತರೂ ಶೂನ್ಯ ಬಂಡವಾಳ ಕೃಷಿ ಮಾಹಿತಿ ಪಡೆಯುತ್ತಿದ್ದಾರೆ.

ಗೋ ಮೂತ್ರಕ್ಕೆ ಬೇಡಿಕೆ: ದೇಸಿ ತಳಿಯ ಗೋವಿನ ಹಾಲು ಪೌಷ್ಟಿಕಾಂಶ ಹೊಂದಿದೆ. ಗೋಮೂತ್ರವು ಔಷಧೀಯ ಗುಣಗಳನ್ನು ಹೊಂದಿದ್ದು, ಗಂಜಲಕ್ಕೆ ಸ್ಥಳೀಯರಿಂದ ಬೇಡಿಕೆಯಿದೆ. ಮುಂದಿನ ದಿನಗಳಲ್ಲಿ ಗೋಮೂತ್ರವನ್ನು ಪರಿಣಾಮಕಾರಿಯಾಗಿ ಬಳಸುವ ಯೋಚನೆಯಿದೆ ಎನ್ನುತ್ತಾರೆ ನಾಗರಾಜು ತಿಳಿಸಿದ್ದಾರೆ.

ಇಳುವರಿ ಹೆಚ್ಚಿಸಿದ ಕೃಷಿ ಪದ್ಧತಿ: ಶೂನ್ಯ ಬಂಡವಾಳ ಕೃಷಿವಿಧಾನ ಅಳವಡಿಕೆಯಿಂದಾಗಿ ರೇಷ್ಮೆ ಗೂಡು ಬೆಳೆಯುವ ವೆಚ್ಚ ಕಡಿಮೆಯಾಗಿದೆ, ವರ್ಷಕ್ಕೆ ಮೂರು ಬೆಳೆ ತೆಗೆಯಲು ರಸಗೊಬ್ಬರ ಹಾಗೂ ಕೀಟನಾಶಕಕ್ಕೆ ಬಳಸುತ್ತಿದ್ದ ಒಟ್ಟು 25,000 ರೂ.ಗಳಷ್ಟು ಉಳಿತಾಯವಾಗುತ್ತದೆ. ಹಿಂದೆ ಬೈವೋಲ್ಟೀನ್ 100 ಮೊಟ್ಟೆಗೆ 80 ಕೆಜಿ ರೇಷ್ಮೆ ಗೂಡು ಸಿಗುತ್ತಿತ್ತು. ಪ್ರಸ್ತುತ 95 ಕೆಜಿ ಸಿಗುತ್ತಿದೆ ಎನ್ನುತ್ತಾರೆ ನಾಗರಾಜ್.

ಪಾಳೇಕರ್ ಅವರ ಕೃಷಿ ಪದ್ಧತಿ ಅಳವಡಿಸಿಕೊಂಡ ನಂತರ ರೇಷ್ಮೆ ಕೃಷಿಯಲ್ಲಿ ಗೂಡು ಉತ್ಪಾದನಾ ವೆಚ್ಚ ತಗ್ಗಿದೆ. ಭೂಮಿಯ ಫಲವತ್ತತೆ ಹೆಚ್ಚುವ ಜತೆಗೆ ನೀರಿನ ಮಿತ ಬಳಕೆ ಸಾಧ್ಯವಾಗಿದೆ. ಸಾವಯವ ಕೃಷಿಗೆ ರೈತರು ಪರಿವರ್ತನೆ ಮಾಡಿಕೊಳ್ಳದಿದ್ದಲ್ಲಿ ನಮ್ಮ ಮುಂದಿನ ತಲೆಮಾರಿಗೆ ಸತ್ವರಹಿತವಾದ ಭೂಮಿ ಕೊಟ್ಟು ಹೋಗಬೇಕಷ್ಟೇ. ಸಿ.ಎಲ್.ನಾಗರಾಜು, ಶೂನ್ಯ ಬಂಡವಾಳ ಕೃಷಿಕ, ಚಟ್ನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net