

ಕೋಲಾರ: ಶ್ರೀನಿವಾಸಪುರದಲ್ಲಿ ರೈಲ್ವೆ ಕಾರ್ಯಾಗಾರ ಆರಂಭಿಸಿ ಎರಡನೇ ಹಂತದಲ್ಲಿ ಕೋಚ್ ಫ್ಯಾಕ್ಟರಿ ಆರಂಭಿಸುವ ಬಗ್ಗೆ ರೈಲ್ವೆ ಸಚಿವರು ಭರವಸೆ ನೀಡಿದ್ದು, ನಿರ್ಮಿಸದಿದ್ದಲ್ಲಿ ಹೋರಾಟ ಮಾಡಿಯಾದರೂ ಫ್ಯಾಕ್ಟರಿ ತಂದೇ ತರುತ್ತೇನೆ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.
ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2012-13ನೇ ಸಾಲಿನಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ದಕ್ಷಿಣ ಭಾರತದಲ್ಲೇ ಅತಿ ದೊಡ್ಡ ಕೋಚ್ ಫ್ಯಾಕ್ಟರಿ ಹಾಗೂ 15 ರೈಲು ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿತ್ತು. ಯೋಜನೆಗೆ ಉಚಿತವಾಗಿ ಭೂಮಿ ಹಾಗೂ ವೆಚ್ಚದಲ್ಲಿ ಶೇ.50 ಪಾಲು ಭರಿಸಲು ಅಂದಿನ ಸಿಎಂ ಡಿ.ವಿ.ಸದಾನಂದಗೌಡ ಒಪ್ಪಿದ್ದರು ಎಂದು ಮಾಹಿತಿ ನೀಡಿದರು.
ಕೋಚ್ ಫ್ಯಾಕ್ಟರಿಗೆ ಅವಶ್ಯವಿರುವ 1200 ಎಕರೆ ಜಮೀನು ಗುರುತಿಸಲು ಸರ್ಕಾರ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದು, ಶ್ರೀನಿವಾಸಪುರದಲ್ಲಿ 600 ಎಕರೆ ಸರ್ಕಾರಿ ಜಾಗ, ಉಳಿದ ಜಾಗವನ್ನು ಭೂ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿತ್ತು. ಎಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಬೆಂಗಳೂರಿಗೆ ಮೆಟ್ರೋ ಚಾಲನೆಗೆ ಬಂದಿದ್ದ ರೈಲ್ವೆ ಸಚಿವ ಪಿಯೂಷ್ ಗೋಯಲ್ ಫ್ಯಾಕ್ಟರಿ ನಿರ್ಮಿಸುವುದಾಗಿ ಭರವಸೆ ನೀಡಿದ್ದರು ಎಂದು ಸ್ಮರಿಸಿದರು.
ಸದನದಲ್ಲಿ ಅನುಮೋದನೆ ಸಿಕ್ಕಿರುವ ಯೋಜನೆ ರದ್ದುಗೊಳಿಸಲು ಸಾಧ್ಯವಿಲ್ಲ. ಯೋಜನೆ ಸಂಬಂಧದ ಒಡಂಬಡಿಕೆಯನ್ನು 2024ರವರೆಗೆ ವಿಸ್ತರಿಸಲಾಗಿದೆ. ಕೇಂದ್ರ ರೈಲ್ವೆ ಸಚಿವರ ಜತೆಗೂ ಶುಕ್ರವಾರ ಮಾತನಾಡಿದ ವೇಳೆ 495 ಕೋಟಿ ರೂ.ವೆಚ್ಚದಲ್ಲಿ ರೈಲ್ವೆ ಕಾರ್ಯಾಗಾರ ಮಾಡಿ ಹಂತ ಹಂತವಾಗಿ ಕೋಚ್ ಫ್ಯಾಕ್ಟರಿ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದರು.
ಹಿಂದಿನ ಸರ್ಕಾರ ಮಂಜೂರು ಮಾಡಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಕೋಚ್ ಫ್ಯಾಕ್ಟರಿಯನ್ನು ಕೇಂದ್ರ ಸರ್ಕಾರ ಕೈಬಿಟ್ಟಿಲ್ಲ. ಕಷ್ಟಪಟ್ಟು ಯೋಜನೆ ತಂದಿದ್ದೇನೆ. ಉಳಿಸಿಕೊಳ್ಳುವ ಜವಾಬ್ದಾರಿ ಸಂಸದ ಮುನಿಸ್ವಾಮಿ ಅವರ ಮೇಲಿದೆ. ಸ್ಥಳೀಯ ಶಾಸಕರೂ ಕೈ ಜೋಡಿಸಬೇಕು. ಸರ್ಕಾರಿ ಜಮೀನು ಹಸ್ತಾಂತರ, ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಸಿಎಂ ಯಡಿಯೂರಪ್ಪ ಅವರನ್ನು ಆಗ್ರಹಿಸಿದರು.
ಸರ್ಕಾರಗಳು ಬದಲಾದ ಸಂದರ್ಭದಲ್ಲಿ ತೀರ್ಮಾನ ಕೈಗೊಳ್ಳುವಲ್ಲೂ ವಿಳಂಬವಾಗುತ್ತದೆ. ರಾಜಕಾರಣ ಮತ್ತು ಸರ್ಕಾರ ಒಂದೇ ರೀತಿ ಇರುವುದಿಲ್ಲ. ಮುಂದೆ ಒಳ್ಳೆಯ ದಿನಗಳು ಬರುತ್ತವೆ. ಸರ್ಕಾರ ಬದಲಾಗಿ ನಾನು ತಂದಿರುವ ಕೋಚ್ ್ಯಾಕ್ಟರಿ ನೂರಕ್ಕೆ ನೂರರಷ್ಟು ಆಗಿಯೇ ಆಗುತ್ತದೆ. ಮುಂದಿನ ವಾರ ದೆಹಲಿಗೆ ಹೋಗಿ ಒತ್ತಡ ಹೇರುತ್ತೇನೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಎಲ್.ಎ.ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಪ್ರಸಾದ್‌ಬಾಬು, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ.ಜಯದೇವ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ನಾಗರಾಜ್, ನಗರಸಭೆ ಸದಸ್ಯರಾದ ಬಿ.ಎಂ. ಮುಬಾರಕ್, ಅಸ್ಲಂ, ಕೆಯುಡಿಎ ಮಾಜಿ ಅಧ್ಯಕ್ಷ ಅತಾವುಲ್ಲಾ, ಮುಖಂಡ ಊರುಬಾಗಿಲು ಶ್ರೀನಿವಾಸ್, ಕುಮಾರ್, ಮುರಳಿ ಇದ್ದರು.