ಬೆಳೆ ಸಮೀಕ್ಷೆ ಆ್ಯಪ್ ಮಾಹಿತಿ ವಿರುದ್ಧ 523 ರೈತರಿಂದ ಆಕ್ಷೇಪಣೆ ಸಲ್ಲಿಕೆ

2-klr-6
Published on

ಪಿ.ಎಸ್. ಹರೀಶ್ ಕೋಲಾರ

ಬೆಳೆಗಳ ನಿಖರ ಮಾಹಿತಿ ತಿಳಿಯಲು ದೇಶದಲ್ಲಿ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಬಳಸಿ ನಡೆಸಿದ ಬೆಳೆ ಸಮೀಕ್ಷೆಯಲ್ಲಿನ ವ್ಯತ್ಯಾಸದ ಸಂಬಂಧ 523 ರೈತರು ಆಕ್ಷೇಪಣೆ ಸಲ್ಲಿಸಿದ್ದಾರೆ.

ರಾಜ್ಯ ಸರ್ಕಾರದ ಇ-ಆಡಳಿತ ಇಲಾಖೆಯ ಬೆಳೆ ದರ್ಶಕ್ ಆ್ಯಪ್ ಬಳಸಿಕೊಂಡು ಕೃಷಿ ಇಲಾಖೆ ರಾಜ್ಯಾದ್ಯಂತ 2019-20ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನು ಸೆಪ್ಟೆಂಬರ್‌ನಲ್ಲಿ ಕೈಗೆತ್ತಿಕೊಂಡಿತ್ತು.

ಜಿಲ್ಲೆಯಲ್ಲಿ 2.36 ಲಕ್ಷ ರೈತರ ವಿವಿಧ ಸರ್ವೇ ನಂಬರ್‌ಗಳಲ್ಲಿರುವ 8.67 ಲಕ್ಷ ಪ್ಲಾಟ್‌ಗಳನ್ನು 1098 ಸಮೀಕ್ಷೆದಾರರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸಮೀಕ್ಷೆ ಮುಗಿಸಿದ್ದರು. ಸಮೀಕ್ಷೆಯಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿರುವ ಬಗ್ಗೆ ರೈತರಿಂದ ವ್ಯಾಪಕ ದೂರು ವ್ಯಕ್ತವಾಗಿತ್ತು. ರೈತರು ರಾಗಿ ಬೆಳೆದಿದ್ದರೂ ಪಹಣಿಯಲ್ಲಿ ಬೆಳೆ ದಾಖಲಾಗದಿರುವುದರಿಂದ ಬೆಂಬಲ ಬೆಲೆಗೆ ರಾಗಿ ಮಾರಾಟಕ್ಕೆ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಒಂದೇ ಸರ್ವೇ ನಂಬರ್‌ನಲ್ಲಿನ ಬಹುಬೆಳೆಗಳನ್ನು ದಾಖಲಿಸದಿರುವುದು, ಮಾವು ತೋಟದ ಮಧ್ಯೆ ರಾಗಿ ಇನ್ನಿತರ ಬೆಳೆಗಳು ಬೆಳೆದಿದ್ದ ಪ್ರಕರಣದಲ್ಲಿ ರಾಗಿ ಬಿಟ್ಟು ಬರೀ ಮಾವು ಎಂದು ದಾಖಲಾಗಿರುವುದು, ರಾಗಿ ಇನ್ನಿತರ ಕೃಷಿ, ತೋಟಗಾರಿಕೆ ಬೆಳೆ ಬೆಳೆದಿದ್ದರೂ ನೀಲಗಿರಿ ತೋಪು ಹೀಗೆ ಹತ್ತು ಹಲವು ಲೋಪದೋಷ ಕಂಡುಬಂದಿವೆ.

523 ಆಕ್ಷೇಪಣೆ: ಬೆಳೆ ಸಮೀಕ್ಷೆ ಸಂಬಂಧ ರೈತ ಸಂಪರ್ಕ ಕೇಂದ್ರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಜನವರಿ 31ಕ್ಕೆ ಮುಕ್ತಾಯಗೊಂಡಿದೆ. 6 ತಾಲೂಕುಗಳಲ್ಲಿ ಒಟ್ಟು 523 ರೈತರು ಆಕ್ಷೇಪಣೆ ಸಲ್ಲಿಸಿದ್ದಾರೆ.

ಕೃಷಿ, ಕಂದಾಯ, ತೋಟಗಾರಿಕೆ, ರೇಷ್ಮೆ ಇಲಾಖೆ ಹೀಗೆ ವಿವಿಧ ಇಲಾಖೆ ಅಧಿಕಾರಿಗಳು ಮೇಲ್ವಿಚಾರಕರಾಗಿರುತ್ತಾರೆ. ಇವರು ಆಕ್ಷೇಪಣೆಯ ಸ್ವರೂಪಕ್ಕೆ ಅನುಗುಣವಾಗಿ ಅವಶ್ಯವಾಗಿದ್ದಲ್ಲಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಆಕ್ಷೇಪಣೆ ನೈಜವಾಗಿದ್ದಲ್ಲಿ ಸರಿಪಡಿಸಬಹುದು.

ವಿಲೇವಾರಿ: ರೈತರು ಸಲ್ಲಿಸಿರುವ ಆಕ್ಷೇಪಣೆಗಳನ್ನು ಮೇಲ್ವಿಚಾರಕರು ಪರಿಶೀಲನೆ ನಡೆಸುತ್ತಿದ್ದು, ವಿವಿಧ ಕಾರಣಗಳಿಗಾಗಿ 59 ಅರ್ಜಿ ತಿರಸ್ಕರಿಸಿದ್ದಾರೆ. ಉಳಿದ ಅರ್ಜಿಗಳು ಪರಿಶೀಲನೆಯಲ್ಲಿವೆ. 213 ಆಕ್ಷೇಪಣೆಗಳನ್ನು ವಿಲೇವಾರಿ ಮಾಡಲಾಗಿದೆ.

ಹಿಂಗಾರು ಬೆಳೆ ಸಮೀಕ್ಷೆ: ಮುಂಗಾರು ಬೆಳೆ ಸಮೀಕ್ಷೆ ಮಾದರಿಯಲ್ಲೇ ಹಿಂಗಾರು ಸಮೀಕ್ಷೆ ನಡೆಯಬೇಕಿದೆ. ಮುಂಗಾರಿನಲ್ಲಿ ಸಮೀಕ್ಷೆ ನಡೆಸಿದವರಿಂದಲೇ ಸಮೀಕ್ಷೆಗೆ ಉದ್ದೇಶಿಸಲಾಗಿದೆ. ಆಲೂಗಡ್ಡೆ, ಟೊಮ್ಯಾಟೊ, ಇನ್ನಿತರ ಬೆಳೆಗಳು ಸಮೀಕ್ಷೆ ನಡೆಸಬೇಕಾಗಿದೆ.

ಹಣ ಬಂದಿಲ್ಲ: ಮುಂಗಾರು ಹಂಗಾಮಿನಲ್ಲಿ ಬೆಳೆ ಸಮೀಕ್ಷೆಗೆ ಪ್ರತಿ ಪ್ಲಾಟ್‌ಗೆ 10 ರೂ. ಹಾಗೂ ಒಂದೇ ಸರ್ವೇ ನಂಬರ್‌ನಲ್ಲಿ ಬಹು ಬೆಳೆಗಳಿದ್ದಲ್ಲಿ ಹೆಚ್ಚುವರಿ 5 ರೂ. ನೀಡುವುದಾಗಿ ಸರ್ಕಾರ ತಿಳಿಸಿತ್ತು. ಕೋಲಾರದಲ್ಲಿ ಯಾರೊಬ್ಬರಿಗೂ ಇನ್ನೂ ಕೂಡ ಹಣ ಕೈ ಸೇರಿಲ್ಲ, ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಸಮೀಕ್ಷೆದಾರ ಟಿ.ವಿ.ರಮೇಶ್ ಮನವಿ ಮಾಡಿದ್ದಾರೆ.

ಬೆಳೆ ಸಮೀಕ್ಷೆ ಸಂಬಂಧ ಸಲ್ಲಿಕೆಯಾಗಿರುವ ಆಕ್ಷೇಪಣೆಗಳನ್ನು ಪರಿಶೀಲಿಸಿ ವಾರದೊಳಗೆ ಇತ್ಯರ್ಥಪಡಿಸುವಂತೆ ಮೇಲ್ವಿಚಾರಕರಿಗೆ ಸೂಚಿಸಲಾಗಿದೆ. ಈಗಾಗಲೇ ಶೇ.50 ಪೂರ್ಣಗೊಂಡಿದೆ. ಉಳಿದವು ಪ್ರಗತಿಯಲ್ಲಿವೆ. ಡಾ. ಎಚ್.ಕೆ. ಶಿವಕುಮಾರ್, ಜಂಟಿ ಕೃಷಿ ನಿರ್ದೇಶಕ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net