ಸತ್ಯ, ಶುದ್ಧ ಸಮಾನತೆಯ ಹೋರಾಟಗಾರ ಮಾಚಿದೇವ

1-klr-7
Published on

ಕೋಲಾರ: ಶರಣಶ್ರೀ ಮಡಿವಾಳ ಮಾಚಿದೇವರು ಸತ್ಯ, ಶುದ್ಧ ಸಮಾನತೆಯ ಹೋರಾಟಗಾರರು ಎಂದು ಅಪರ ಜಿಲ್ಲಾಧಿಕಾರಿ ಡಾ. ಸ್ನೇಹ ವಿ.ಸಿ. ಅಭಿಪ್ರಾಯಿಸಿದರು.

ಜಿಲ್ಲಾಡಳಿತ ಭವನದ ನ್ಯಾಯಾಂಗ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಮಾಚಿದೇವರು ಬಸವಣ್ಣ ಅವರ ಸಮಕಾಲೀನ ವಚನಕಾರರು ಹಾಗೂ ಬಸವಣ್ಣರ ಅಚ್ಚುಮೆಚ್ಚಿನ ಅನುಯಾಯಿ. ಅನುಭವ ಮಂಟಪ ಕಟ್ಟುವಲ್ಲಿ ಮಾಚಿದೇವ ಅವರ ಕಾಯಕ ಅತಿ ಮಹತ್ವದ್ದಾಗಿದೆ. ಇವರು ಕಾಯಕಕ್ಕೆ ವಿಶೇಷ ಪ್ರಾಶಸ್ತ್ಯ ನೀಡಿದ್ದರು ಎಂದರು.

12ನೇ ಶತಮಾನದಲ್ಲಿ ಶರಣರ ಅಗ್ರಮಾನ್ಯ ಬಳಗದಲ್ಲಿ ಮಡಿವಾಳ ಮಾಚಿದೇವರು ಅತ್ಯಂತ ಪ್ರಕಾಶಮಾನವಾಗಿ ಕಂಡುಬರುವ ನಿಜ ಶರಣರು. ಸಾಮಾಜಿಕ ಅಸಮಾನತೆಯಿಂದ ತುಳಿತಕ್ಕೆ ಒಳಗಾದವರು, ಮಹಿಳೆಯರು, ವೃತ್ತಿ ನಿರತ ಶ್ರಮಜೀವಿಗಳು ಹಾಗೂ ದೀನ ದಲಿತರ ಧ್ವನಿಯಾಗಿ ಹೋರಾಟ ಮಾಡಿದರು. ಕಲ್ಯಾಣದಲ್ಲಿ ಬಸವಣ್ಣ ಅವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಚಳವಳಿಯಲ್ಲಿ ಮಾಚಿದೇವರು ಅಗ್ರಮಾನ್ಯರು. ಅರಸುತನ ಮೇಲಲ್ಲ-ಅಗಸತನ ಕೀಳಲ್ಲ ಎಂಬ ಸಂದೇಶ ಸಾರಿದರು. ದುರ್ಬಲರ ಮೇಲಿನ ಶೋಷಣೆ, ಜಾತೀಯತೆ, ಮೇಲು-ಕೀಲು ಎಂಬ ತಾರತಮ್ಯ, ಮೂಡನಂಬಿಕೆಗಳ ವಿರುದ್ಧ ಸಾಮಾಜಿಕ ಹೋರಾಟ ಮಾಡಿದವರು ಎಂದು ಸ್ಮರಿಸಿದರು.

ಉಪನ್ಯಾಸ ನೀಡಿದ ಹರಿಕಥಾ ವಿದ್ವಾನ್ ಎನ್.ಆರ್.ಜ್ಞಾನಮೂರ್ತಿ, 12ನೇ ಶತಮಾನ ಸಾಹಿತ್ಯ ಕ್ಷೇತ್ರದಲ್ಲಿ ಪ್ರಮುಖವಾದ ಘಟ್ಟ. ಮಾಚಿದೇವರು ಸಾಹಿತ್ಯವನ್ನು ಜನಸಾಮಾನ್ಯರಿಗೆ ಅರ್ಥವಾಗುವ ಆಡುಭಾಷೆಯಲ್ಲಿ ಬರೆಯುತ್ತಿದ್ದರು. ಕಲ್ಯಾಣಕ್ರಾಂತಿ ಸಮಯದಲ್ಲಿ ವಚನ ಸಂಪುಟದ ರಕ್ಷಣೆ ಮಾಡಿದ ಕೀರ್ತಿ ಮಾಚಿದೇವರಿಗೆ ಸಲ್ಲುತ್ತದೆ ಎಂದರು.

ಬಿಸಿಎಂ ಜಿಲ್ಲಾಧಿಕಾರಿ ರಾಜಣ್ಣ, ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ರಂಗನಾಥ್, ಸಮುದಾಯದ ಮುಖಂಡರಾದ ಚಂದ್ರಣ್ಣ, ನಾಗರಾಜ್, ವಡಗೂರು ರಾಮಮೂರ್ತಿ, ಅಮರನಾಥ್, ಸತೀಶ್‌ಕುಮಾರ್ ಭಾಗವಹಿಸಿದ್ದರು.

ಮಡಿವಾಳ ಮಾಚಿದೇವರು ನೇರ ನಡೆ ನುಡಿ, ವ್ಯಕ್ತಿತ್ವದ ಸಾಮಾಜಿಕ ಹೋರಾಟಗಾರರು. ಅವರು ಗಟ್ಟಿ ಕಾಯಕದ ಹಿರಿಯಾಳು. ಸರ್ವರಿಗೂ ಸಮಬಾಳು-ಸರ್ವರಿಗೂ ಸಮಪಾಲು ಒದಗಿಸಲು ಹೋರಾಟ ಮಾಡಿದವರು. ಮಂಜುನಾಥ್, ಮಡಿವಾಳ ಸಂಘದ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net