

ಕೋಲಾರ: ಸರ್ಕಾರಿ ಆಸ್ಪತ್ರೆಗಳಲ್ಲಿ ಕರೊನಾ ವೇಳೆ ಗುತ್ತಿಗೆಯಡಿ ಕೆಲಸ ನಿರ್ವಹಿಸಿದವರಿಗೆ ವೇತನ ಪಾವತಿಸದಿರುವ ಬಗ್ಗೆ ಶಾಸಕ ಎಂ.ರೂಪಕಲಾ ಎತ್ತಿದ ಪ್ರಶ್ನೆಗೆ ಡಿಎಚ್‌ಒ ಹಾಗೂ ಕೆಜಿಎಫ್ ಜಿಲ್ಲಾ ಸರ್ಜನ್ ಜಿಲ್ಲಾಧಿಕಾರಿಗಳಿಂದ ತೀವ್ರ ತರಾಟೆಗೆ ತುತ್ತಾದರೆ, ಉಸ್ತುವಾರಿ ಸಚಿವರ ಸಮ್ಮುಖದಲ್ಲೇ ಡಿಸಿ ಹಾಗೂ ಶಾಸಕರ ನಡುವೆ ಮಾತಿನ ಸಮರ ನಡೆಯಿತು.
ಕರೊನಾ ವೇಳೆ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ತೆಗೆದುಕೊಂಡವರಿಗೆ, ಡಿ ಗ್ರೂಪ್ ನೌಕರರಿಗೆ ನಾಲ್ಕೈದು ತಿಂಗಳಿನಿಂದ ಸಂಬಳ ಆಗಿಲ್ಲ, ಗುತ್ತಿಗೆದಾರರು ನೌಕರರ ಪಿಎಫ್, ಇಎಸ್‌ಐ ಹಾಕುತ್ತಿಲ್ಲ, ಮಾಸಿಕ 12,000 ರೂ. ನೀಡಬೇಕಾದ ಕಡೆ 8000 ರೂ, ನೀಡುತ್ತಾರೆ. ಗುತ್ತಿಗೆ ಅವಧಿ ಮುಗಿದಿದ್ದರೂ ಮುಂದುವರಿಸಿದ್ದಾರೆ, ಬದಲಾಯಿಸಲು ಹೇಳಿದ್ದರೂ ಸ್ಪಂದಿಸುವುದಿಲ್ಲ ಎಂದು ಸೋಮವಾದ ನಡೆದ ಅಧಿಕಾರಿಗಳ ಸಭೆಯಲ್ಲಿ ಡಿಎಚ್‌ಒ ಎಸ್.ಎನ್. ವಿಜಯಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಗುತ್ತಿಗೆ ನೌಕರರ ಸಂಬಂಧಿಸಿದ ಕಡತ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಲೇವಾರಿಯಾಗಿಲ್ಲವೆಂದು ಅಧಿಕಾರಿ ಹೇಳುತ್ತಾರೆಂದು ರೂಪಕಲಾ ದೂರಿದ್ದು ಡಿಸಿ ಸತ್ಯಭಾಮ ಅವರನ್ನು ಸಿಟ್ಟಿಗೇಳಿಸಿತು, ನಾನು ಆ ಮಾತು ಹೇಳಿಲ್ಲ, ಕೆಜಿಎಫ್ ಜಿಲ್ಲಾ ಸರ್ಜನ್ ಹೇಳಿರಬಹುದೆಂದು ಡಿಎಚ್‌ಒ ಸಮಜಾಯಶಿ ನೀಡಿದರಾದರೂ ನನ್ನಲ್ಲಿ ಕಡತ ಬಾಕಿಯಿಲ್ಲ, ಸುಮ್ಮನೆ ಹೇಳಿದ್ದನ್ನು ಕೇಳಿಕೊಂಡು ಕುಳಿತಿರಲು ಬಿಟ್ಟಿ ಬಿದ್ದಿಲ್ಲ ಎಂದು ಡಿಸಿ ಝಾಡಿಸಿದರು.
ಕೆಜಿಎಫ್ ಆಸ್ಪತ್ರೆ ಜಿಲ್ಲಾ ಸರ್ಜನ್ ಶಿವಕುಮಾರ್ ಸಭೆಗೆ ಬರುತ್ತಿದ್ದಂಥೆ ಏನ್ರಿ.. ಗುತ್ತಿಗೆ ನೌಕರರ ಸಂಬಂಧಿಸಿದ ಕಡತ ಡಿಸಿ ಬಳಿ ಇದೆ ಎಂದು ನೀವು ಹೇಳಿಲ್ವ ಎಂದು ರೂಪಕಲಾ ಪ್ರಶ್ನಿಸಿದಾಗ ಮಾರ್ಚ್‌ನಲ್ಲಿ ಗುತ್ತಿಗೆ ಅವಧಿ ಮುಗಿದಿತ್ತು. ಕಡತವನ್ನು ಆಪ್ತ ಸಹಾಯಕರ ಬಳಿ ಕೊಟ್ಟಿದ್ದೆ, ಎರಡ್ಮೂರು ಮಂದಿ ಆಪ್ತ ಸಹಾಯಕರು ಬದಲಾಗಿದ್ದಾರೆ, ಕಡತ ಮಿಸ್ ಆಗಿರಬಹುದೆಂದು ಸಮಜಾಯಶಿ ನೀಡಿದರು.
ಆಪ್ತ ಸಹಾಯಕರ ಬಳಿ ಫೈಲ್ ನೀಡಿ ಡಿಸಿ ಬಳಿ ಕಡತ ಬಾಕಿಯಿದೆ ಎಂದರೆ ನಾನಾ ಜವಾಬ್ದಾರಿ, ಟೆಂಡರ್ ಅವಧಿ ಮುಗಿಯಲು 3 ತಿಂಗಳ ಮುಂಚೆ ಟೆಂಡರ್ ಮಾಡದೆ ಅವರನ್ನೇ ಮುಂದುವರಿಸುವ ಉದ್ದೇಶ ಏನಿತ್ತು ಎಂದು ಕೇಳಿದ್ದೆ, ಚರ್ಚಿಸಿ ಎಂದರೂ ಚರ್ಚೆ ಮಾಡಿಲ್ಲವೆಂದು ಸತ್ಯಭಾಮ ಸರ್ಜನ್‌ರನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಅಧಿಕಾರಿಗಳು ಹೇಳಿದ್ದನ್ನು ನಂಬುವ ಬದಲು ನನ್ನಿಂದ ಸ್ಪಷ್ಟಪಡಿಸಿಕೊಳ್ಳಬಹುದಿತ್ತಲ್ಲವೇ ಎಂದು ಬೇಸರದಿಂದಲೇ ಶಾಸಕಿ ರೂಪಕಲಾ ಅವರನ್ನು ಪ್ರಶ್ನಿಸಿದರು.
ಶಾಸಕಿ ಬೆಂಬಲಕ್ಕೆ ನಿಂತ ಎಮ್ಮೆಲ್ಸಿ ಗೋವಿಂದರಾಜು ನಿಮ್ಮ ಪಿಎಗೆ ಬೇಜವಾಬ್ದಾರಿ, ನನ್ನ ಮೂರು ಕಡತ ಕೂಡಾ ಬಾಕಿ ಇದೆ, ಅವರನ್ನು ಸಸ್ಪೆಂಡ್ ಮಾಡಿ ಎಂದು ಆಕ್ರೋಶಭರಿತರಾಗಿ ನುಡಿದಾಗ ಏನು ಕಾರಣ ಎಂದು ಈ ಸಂದರ್ಭದಲ್ಲಿ ಹೇಳಬೇಕಾ? ಇದು ವೇದಿಕೆಯಲ್ಲ ಎಂದು ಡಿಸಿ ಸತ್ಯಭಾಮ ಗದ್ಗದಿತರಾಗಿ ತಿರುಗೇಟು ನೀಡಿದರು.
ಮಧ್ಯಪ್ರವೇಶಿಸಿದ ಸಚಿವ ಎಚ್. ನಾಗೇಶ್ ಸಮಸ್ಯೆ ಬಗ್ಗೆ ಡಿಸಿ ಗಮನಕ್ಕೆ ತಂದಿದ್ದರೆ ರಾಮಾಯಣ ಆಗುತ್ತಿರಲಿಲ್ಲ. ವಿಶೇಷ ಪ್ರಕರಣವೆಂದು ಪರಿಗಣಿಸಿ ಆದಷ್ಟು ಬೇಗ ಇತ್ಯರ್ಥಪಡಿಸಿ ಎಂದು ಸೂಚಿಸಿದರು.
ಆಸ್ಪತ್ರೆಯಲ್ಲಿ ಗುತ್ತಿಗೆ ನೌಕರರಿಗೆ ವೇತನ ಪಾವತಿ ಸಂಬಂಧ ಪರಿಶೀಲನೆ ನಡೆಸಿ ಎರಡ್ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಡಿಸಿ ಸತ್ಯಭಾಮ ಜಿಪಂ ಸಿಇಒ ಎನ್.ಎಂ.ನಾಗರಾಜ್‌ಗೆ ಸೂಚಿಸಿದರು.