

ಕೋಲಾರ: ನಗರ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಇಕ್ಕೆಲಗಳಲ್ಲಿ ತೆರೆದಿರುವ ಅನಧಿಕೃತ ಅಂಗಡಿ, ತ್ಯಾಜ್ಯದ ರಾಶಿಗಳ ತೆರವಿಗೆ ಸಂಸದ ಎಸ್. ಮುನಿಸ್ವಾಮಿ ನಗರಸಭೆ ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ರಾಷ್ಟ್ರೀಯ ಹೆದ್ದಾರಿ 75ರ ಪವನ್ ಕಾಲೇಜು ಸಮೀಪದ ಸೇವಾ ರಸ್ತೆಯುದ್ದಕ್ಕೂ ಮಾಂಸದ ಅಂಗಡಿಗಳಲ್ಲಿ ಹೊರಬೀಳುವ ಕೋಳಿಗಳ ರೆಕ್ಕೆಪುಕ್ಕ ಹಾಗೂ ಕೊಳೆತ ತ್ಯಾಜ್ಯಗಳನ್ನು ಎಸೆದಿರುವ ಸ್ಥಳಕ್ಕೆ ಮೂಗು ಮುಚ್ಚಿಕೊಂಡೇ ಅಧಿಕಾರಿಗಳನ್ನು ಕರೆದೊಯ್ದು ಪ್ರತ್ಯಕ್ಷ ದರ್ಶನ ಮಾಡಿದರು. ಕೆಲ ಭಾಗದಲ್ಲಿ ರಸ್ತೆ ಇಕ್ಕೆಲಗಳಲ್ಲಿ ಕಟ್ಟಡಗಳ ಅನುಪಯುಕ್ತ ಕಲ್ಲು ಮಣ್ಣುಗಳನ್ನು ರಾಶಿ ಹಾಕುತ್ತಿರುವುದರಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದನ್ನು ಕಂಡು ಕೂಡಲೆ ಇದನ್ನು ತೆರವುಗೊಳಿಸಲು ಕ್ರಮ ವಹಿಸುವಂತೆ ಸೂಚಿಸಿದರಲ್ಲದೆ, ಮುಂದಿನ ದಿನಗಳಲ್ಲಿ ಈ ರೀತಿ ರಸ್ತೆ ಬದಿಗೆ ತ್ಯಾಜ್ಯ ಎಸೆಯುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕ್ಕೆ ಸೂಚನೆ ನೀಡಿದರು.
ನಗರದ ಬಂಗಾರಪೇಟೆ ವೃತ್ತದ ಬಳಿ, ಹೆದ್ದಾರಿ ಸುತ್ತ ಮುತ್ತಲಿನ ಮತ್ತು ಪವನ್ ಕಾಲೇಜು ಸಮೀಪದಲ್ಲಿ ಎಡ ಮತ್ತು ಬಲ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಸೂಚಿಸಿದ ಸಂಸದರು, ಬಂಗಾರಪೇಟೆ ಮೇಲ್ಸೇತುವೆಯ ಕೆಳಗೆ ರಾಶಿ ಬಿದ್ದಿರುವ ಕಸವನ್ನು ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಪ್ರಶಾಂತ್, ಲ್ಯಾಂಕೋ ಸಂಸ್ಥೆಯ ಅಧಿಕಾರಿಗಳಾದ ಅಂಬರೀಷ್, ನಗರಸಭೆ ಪೌರಾಯುಕ್ತ ಶ್ರೀಕಾಂತ್, ನಗರಸಭೆ ಸದಸ್ಯ ಎಸ್.ಆರ್.ಮುರಳಿ ಗೌಡ, ಕುಡಾ ಸದಸ್ಯ ಅಪ್ಪಿ ನಾರಾಯಣಸ್ವಾಮಿ ಇತರರು ಇದ್ದರು.
ಜಿಲ್ಲಾಸ್ಪತ್ರೆಗೆ ಭೇಟಿ: ಇದಕ್ಕೂ ಮುನ್ನ ನಗರದ ಎಸ್ಸೆನ್ನಾರ್ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಆವರಣದಲ್ಲಿನ ಅಂಗಡಿ ಮುಂಗಟ್ಟುಗಳ ಬಗ್ಗೆ ಹಾಗೂ ಅಲ್ಲಿನ ಆಗುಹೋಗುಗಳ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಜಿ. ನಾರಾಯಣಸ್ವಾಮಿ, ಆರೋಗ್ಯ ಅಧಿಕಾರಿ ಡಾ. ಜಗದೀಶ್ ಇತರರು ಇದ್ದರು.