

ಕೋಲಾರ: ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಅಬ್ದುಲ್ ನಜೀರ್‌ಸಾಬ್ ಬಲಪಡಿಸಿರುವ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಗ್ರಾಪಂಗಳು ಚೆನ್ನಾಗಿ ನಡೆಸಿಕೊಂಡು ಹೋಗಬೇಕೆಂದು ಶಾಸಕ ಕೆ. ಶ್ರೀನಿವಾಸಗೌಡ ಹೇಳಿದರು.
ತಾಲೂಕಿನ ದೊಡ್ಡಹಸಾಳ ಗ್ರಾಪಂ ಕಾರ್ಯಾಲಯದ ಮೇಲ್ಭಾಗ ನಿರ್ಮಿಸಿರುವ ರಾಜೀವ್‌ಗಾಂಧಿ ಸೇವಾ ಕೇಂದ್ರವನ್ನು ಸೋಮವಾರ ಲೋಕಾರ್ಪಣೆ ಮಾಡಿ ಮಾತನಾಡಿ, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಗ್ರಾಪಂಗೆ ಹೆಚ್ಚು ಬಲ ಬಂತು. ಅಂದಿನ ಆರ್‌ಡಿಪಿಆರ್ ಸಚಿವರಾಗಿದ್ದ ನಜೀರ್‌ಸಾಬ್ ಉತ್ತಮ ತಳಪಾಯ ಹಾಕಿಕೊಟ್ಟಿದ್ದಾರೆ. ಅವರು ಮಾಡಿರುವ ಕೆಲಸ ನೆನಪಿಸಿಕೊಳ್ಳುವುದು ಎಲ್ಲರ ಕರ್ತವ್ಯ ಎಂದರು.
ಹಿಂದಿನ ದಿನಗಳಲ್ಲಿ ಹಳ್ಳಿಗಳಲ್ಲಿದ್ದ ಪರಿಸ್ಥಿತಿಗೂ ಇಂದಿನ ಸ್ಥಿತಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಹಿಂದೆ ಹಳ್ಳಿಗಳಿಗೆ ಬಸ್ ವ್ಯವಸ್ಥೆ ಇರಲಿಲ್ಲ. ನಡಿಗೆಯಲ್ಲೇ ಸಾಗಬೇಕಿತ್ತು. ಇಂದು ಬಸ್ ವ್ಯವಸ್ಥೆಯಿದೆ. ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಗ್ರಾಪಂಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿವೆ. ಸರ್ಕಾರದಿಂದ ಅಭಿವೃದ್ಧಿ ಕೆಲಸ ಕಾರ್ಯಗಳು ಆಗುತ್ತಿದೆ. ಗ್ರಾಮಕ್ಕೆ ಹೈಮಾಸ್ಟ್ ವಿದ್ಯುತ್ ದೀಪದ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, 1993ರಲ್ಲಿ ಮಂಡಲ ಪಂಚಾಯಿತಿಗಳನ್ನು ಮರು ವಿಂಗಡಿಸಿ ಗ್ರಾಪಂಗಳನ್ನಾಗಿಸಿ ಅಧಿಕಾರ ವಿಕೇಂದ್ರೀಕರಣಗೊಳಿಸಲಾಯಿತು. ಇಂದು ಪ್ರತಿ ಗ್ರಾಪಂಗಳಲ್ಲೂ ಕೋಟ್ಯಂತರ ರೂಗಳ ಕೆಲಸ ನಡೆಯುತ್ತಿದೆ ಎಂದರು.
ಜಿಪಂ ಒಂಬಡ್ಸ್‌ಮನ್ ಡಾ.ಶ್ರೀರಾಮಯ್ಯ ಮಾತನಾಡಿ, ದೇಶದೆಲ್ಲೆಡೆ ಗ್ರಾಪಂನಲ್ಲಿ ರಾಜೀವ್‌ಗಾಂಧಿ ಸೇವಾ ಕೇಂದ್ರ ಸ್ಥಾಪಿಸಲು ಅವಕಾಶವಿದೆ. ಒಡಿಸ್ಸಾ ಈ ಸೌಲಭ್ಯವನ್ನು ಹೆಚ್ಚು ಬಳಸಿಕೊಂಡಿದೆ. ಪಂಚಾಯಿತಿ ಚಟುವಟಿಕೆಗಳ ಹೃದಯಭಾಗ ರಾಜೀವ್‌ಗಾಂಧಿ ಸೇವಾ ಕೇಂದ್ರ. ಇಲ್ಲಿ ಅಭಿವೃದ್ಧಿಗೆ ಪೂರಕವಾದ ತರಬೇತಿ, ತಿಳಿವಳಿಕೆ ನೀಡುವ ಹಾಗೂ ಎಲ್ಲ ಯೋಜನೆಗಳ ಮಾಹಿತಿ ಸಾರ್ವಜನಿಕರಿಗೆ ನೀಡುವ ಕೆಲಸ ಆಗಬೇಕು ಎಂದರು.
ಗ್ರಾಪಂ ಅಧ್ಯಕ್ಷ ಡಿ.ಕೆ. ನಾರಾಯಣಸ್ವಾಮಿ ಗ್ರಾಪಂ ಮುಂಭಾಗ ಹೈಮಾಸ್ಟ್ ದೀಪ ಹಾಗೂ ಸಿಸಿ ರಸ್ತೆ ಸೌಲಭ್ಯ ಕಲ್ಪಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.
ರಾಜೀವ್‌ಗಾಂಧಿ ಸೇವಾ ಕೇಂದ್ರಕ್ಕೆ ಹವಾನಿಯಂತ್ರಣ ವ್ಯವಸ್ಥೆ ಕಲ್ಪಿಸಿದ ಸಿಎಂಆರ್ ಶ್ರೀನಾಥ್, ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಜಮೀನು ದಾನ ನೀಡಿದ ಮರೇಗೌಡ ಅವರನ್ನು ಸನ್ಮಾನಿಸಲಾಯಿತು.
ಜಿಪಂ ಸದಸ್ಯೆ ಮುನಿಲಕ್ಷ್ಮಮ್ಮ, ಟಿಎಪಿಸಿಎಂಎಸ್ ನಿರ್ದೇಶಕ ಶ್ರೀನಿವಾಸ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶ್ರೀರಾಮರೆಡ್ಡಿ, ತಾಪಂ ಇಒ ಎನ್.ವಿ. ಬಾಬು, ಗ್ರಾಪಂ ಉಪಾಧ್ಯಕ್ಷೆ ಅಂಬಿಕಾ ಕೃಷ್ಣಪ್ಪ, ಮಾಜಿ ಅಧ್ಯಕ್ಷರಾದ ನಾರಾಯಣಸ್ವಾಮಿ, ಮುನಿವೆಂಕಟಪ್ಪ, ಚನ್ನಕೇಶವ, ಮಂಜುನಾಥ್, ಸದಸ್ಯರಾದ ರಾಜಣ್ಣ, ಮುಳಬಾಗಿಲಪ್ಪ, ಅಂಬಿಕಾ ವೆಂಕಟೇಶ್ ಇತರರಿದ್ದರು.