ಸಚಿವ ಸಿ.ಸಿ.ಪಾಟೀಲ್ ಸಮ್ಮುಖದಲ್ಲಿ ಕಿತ್ತಾಡಿಕೊಂಡ ಸಂಸದ, ಶಾಸಕರು

31-klr-2
Published on

ಟೇಕಲ್: ಕ್ರಷರ್ ವಿಚಾರವಾಗಿ ಸಂಸದ ಎಸ್.ಮುನಿಸ್ವಾಮಿ ಮತ್ತು ಶಾಸಕ ಕೆ.ವೈ.ನಂಜೇಗೌಡ ನಡುವೆ ನಡೆಯುತ್ತಿದ್ದ ಗುದ್ದಾಟದ ಮುಂದುವರಿದ ಭಾಗವಾಗಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ಸಮ್ಮುಖದಲ್ಲಿ ಮತ್ತೊಮ್ಮೆ ಕಿತ್ತಾಡಿಕೊಂಡಿದ್ದಾರೆ.

ಟೇಕಲ್‌ನ ಕೆ.ಜಿ.ಹಳ್ಳಿಯ ಕೆಂಪನಹಳ್ಳಿ ಬಳಿಯ ರಮೇಶ್‌ಗೌಡರ ಒಡೆತನದ ಜಲ್ಲಿ ಕ್ರಷರ್‌ಗೆ ಗುರುವಾರ ಭೇಟಿ ನೀಡಿದ ಸಚಿವರು ನಂತರ ಶಾಸಕ ಕೆ.ವೈ.ನಂಜೇಗೌಡರ ಮಾಲೀಕತ್ವದ ಹರದಾಕೊತ್ತೂರು ಗ್ರಾಮದ ನಂಜುಂಡೇಶ್ವರ ಕ್ರಷರ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳದಲ್ಲಿ ಅಧಿಕಾರಿಗಳಿಗೆ ಗುಂಡು ತೋಪು ಮಾಹಿತಿ ಕೊಡಿ, ಇದೆಲ್ಲಾ ಸರ್ಕಾರಿ ಗುಂಡುತೋಪು ಎಂದು ಸಂಸದ ಎಸ್. ಮುನಿಸ್ವಾಮಿ ಹೇಳುತ್ತಿದ್ದಂತೆಯೇ ಶಾಸಕ ಕೆ.ವೈ.ನಂಜೇಗೌಡ ಸಿಡಿಮಿಡಿಗೊಂಡರು.

ಇಲ್ಲಿ ರಾಜಕೀಯ ಮಾಡೋದು ಬಿಡಬೇಕು, ಇಲ್ಲವಾದರೆ ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ. ಸಚಿವರ ಇಲಾಖೆಯಲ್ಲಿ ಉತ್ತಮ ಆಡಳಿತವಿದೆ. ಸುಮ್ಮನೆ ಏನೇನೋ ಹೇಳೋದಲ್ಲ ಎಂದು ನಂಜೇಗೌಡ ಕಿಡಿಕಾರಿದರು. ಇಷ್ಟಕ್ಕೇ ನಿಲ್ಲದ ಮಾತಿನ ಚಕಮಕಿ ಸಚಿವರು ತೆರಳುವವರೆಗೆ ಮುಂದುವರಿಯಿತು.

ಸಚಿವರು ಮುಂದಕ್ಕೆ ಪ್ರಯಾಣ ಬೆಳೆಸಲು ಅನುವಾಗುತ್ತಿದ್ದಂತೆಯೇ ಸಂಸದ ಮುನಿಸ್ವಾಮಿ ಅದೇ ಕಾರಿನಲ್ಲಿ ಹೊರಡಲು ಮುಂದಾದಾಗ ಶಾಸಕ ನಂಜೇಗೌಡ ‘ಸಾರ್ ಪರ್ಸನಲ್ ಆಗಿ ಹೋಗೊದು ಬೇಡ, ಸಂಸದ ಮುನಿಸ್ವಾಮಿ ನಮ್ಮೂರಿನವರೇ, ಅನಧಿಕೃತ ಇದ್ದರೆ ಮಾತಾಡಲಿ, ಸಮಸ್ಯೆ ಇಲ್ಲದಿದ್ದರೂ ಸಮಸ್ಯೆ ಸೃಷ್ಟಿಸೋದು ಬೇಡ. ಗುಂಡುತೋಪು ಇದೆಲ್ಲಾ ಬೇಡ, ಇದು ಪಕ್ಕಾ ಲೀಗಲ್ ಇದೆ’ ಎಂದು ಏರುಧ್ವನಿಯಲ್ಲಿ ತಿಳಿಸಿದರು.

ರಾಯಲ್ಟಿ ವಿಚಾರದ ಬಗ್ಗೆ ಸಚಿವರು ಪ್ರಸ್ತಾಪಿಸಿದಾಗ ಇದು ಇಡೀ ರಾಜ್ಯಕ್ಕೆ ಸಂಬಂಧಿಸಿದ್ದಾಗಿದೆ. ನ್ಯಾಯಾಲಯ ತೆಗೆದುಕೊಳ್ಳುವ ತೀರ್ಪಿಗೆ ಬದ್ಧರಾಗಿದ್ದೇವೆ ಎಂದು ನಂಜೇಗೌಡ ಉತ್ತರಿಸಿದರು.

ಶಾಸಕರಿಗೆ ತಿರುಗೇಟು ನೀಡಿದ ಮುನಿಸ್ವಾಮಿ ನೀವು ಇದೆಲ್ಲ ಬಿಡಿ, ನನಗೂ ಗೊತ್ತಿದೆ ಎಂದರು. ಮಾತು ಬೆಳೆಸಿದ ಶಾಸಕರು ರಾಜಕೀಯವನ್ನು ರಾಜಕೀಯವಾಗಿ ಎದುರಿಸಿ, ನೀನು ಗಾಳಿಯಲ್ಲಿ ಬಂದಿದ್ದೀಯ, ಗಾಳಿಯಲ್ಲೇ ಹೋಗ್ತೀಯ ಬಿಡು ಎಂದು ಛೇಡಿಸಿದರಲ್ಲದೆ ನಾವಿಬ್ಬರೂ ಒಂದೇ ಹೋಬಳಿಯವರು ಇದೆಲ್ಲಾ ಬಿಟ್ಟು ಬಿಡು ಎಂದಾಗ ಒಂದೇ ಹೋಬಳಿಯವರಾದರೆ ಏನು ಎಂದು ಸಂಸದರು ಪ್ರತ್ಯುತ್ತರ ನೀಡಿದರು. ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಸಚಿವ ಸಿ.ಸಿ.ಪಾಟೀಲ್ ಸಂಸದರನ್ನು ಸುಮ್ಮನಿರುವಂತೆ ತಿಳಿಸಿ ತೆರೆ ಎಳೆದು ಮುಂದುವರಿದರು.

ಸಚಿವರು ಬೆಟ್ಟಹಳ್ಳಿ ಸಮೀಪದ ಜಿ.ಕೆ.ಎಸ್. ಸ್ಟೋನ್ ಕ್ರಷರ್, ಶ್ರೀರಂಗನಾಥ ಸ್ಟೋನ್ ಕ್ರಷರ್, ಜೆ.ಪಿ.ಸ್ಟೋನ್ ಕ್ರಷರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಷಣ್ಮುಗಯ್ಯ ಜತೆಗಿದ್ದು ಮಾಹಿತಿ ಒದಗಿಸಿದರು.

ನಾವು ಯಾವುದೇ ದ್ವೇಷ ರಾಜಕಾರಣ ಮಾಡುವುದಿಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಸಚಿವರ ಭೇಟಿ ಕಾರ್ಯಕ್ರಮ ಇತ್ತು. ಯಾವ್ಯಾವ ಗಣಿ ಚಟುವಟಿಕೆ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂಬುದು ಇಲಾಖೆಯ ಮಾಹಿತಿಯಾಗಿತ್ತು. ಸ್ಥಳೀಯ ಶಾಸಕರು ತಪ್ಪು ಮಾಡದಿದ್ದಲ್ಲಿ ಏಕೆ ಈ ರೀತಿ ಮಾತನಾಡಬೇಕು. ಎಸ್. ಮುನಿಸ್ವಾಮಿ, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net