

ಕೋಲಾರ: ಗ್ರಾಪಂ ಚುನಾವಣೆಯಲ್ಲಿ ಗ್ರಾಮಸ್ಥರು ಮತ ಹಾಕಿಲ್ಲ ಎಂಬ ಕಾರಣಕ್ಕೆ ಪರಾಜಿತ ಅಭ್ಯರ್ಥಿ ರಾತ್ರೋರಾತ್ರಿ ನಡು ರಸ್ತೆಯಲ್ಲಿ ಗುಂಡಿ ಅಗೆದು ಸಂಚಾರಕ್ಕೆ ಅಡ್ಡಿಪಡಿಸಿದ ಘಟನೆ ಮಾಲೂರಿನ ಅಗ್ರಹಾರ ಹೊಸಹಳ್ಳಿಯಲ್ಲಿ ನಡೆದಿದೆ.
ಮಾಲೂರು ತಾಲೂಕಿನ ಶಿವಾರಪಟ್ಟಣ ಗ್ರಾಪಂ ವ್ಯಾಪ್ತಿಯ ಅಗ್ರಹಾರ ಹೊಸಹಳ್ಳಿಯ ಅಭ್ಯರ್ಥಿ ಗಿರಿಗೌಡ ಈ ಕೃತ್ಯ ಎಸಗಿದವರು. ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಸೋಲಿನಿಂದ ಹತಾಶರಾದ ಅಭ್ಯರ್ಥಿ ಅಗ್ರಹಾರ ಹೊಸಹಳ್ಳಿ ಯಿಂದ ಹುಣಸೆದಿನ್ನೆಗೆ ಹೋಗುವ ದಾರಿಯನ್ನು ಜೆಸಿಬಿ ಮೂಲಕ ಅಗೆದು ರಸ್ತೆ ಸಂಪರ್ಕ ಕಡಿತಗೊಳಿಸಿ ಮತದಾರರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ಬೆಳಗ್ಗೆ ರಸ್ತೆ ಅಗೆದಿರುವುದು ಸ್ಥಳೀಯರ ಗಮನಕ್ಕೆ ಬಂದಿದ್ದು, ಊರಿನಲ್ಲಿ ಸುದ್ದಿ ಹಬ್ಬುತ್ತಿದ್ದಂತೆಯೇ ಊರಿನ ಹಿರಿಯರು ಸೇರಿಕೊಂಡು ಪಂಚಾಯಿತಿ ಮಾಡಿ ರಸ್ತೆಗೆ ಅಡ್ಡಲಾಗಿ ತೋಡಿದ್ದ ಕಂದಕ ಮುಚ್ಚಿಸುವುದರೊಂದಿಗೆ ಸಮಸ್ಯೆಗೆ ಮಂಗಳ ಹಾಡಿದ್ದಾರೆ.
ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಯೊಬ್ಬರು ರಸ್ತೆ ಅಗೆದು ಹಾಕಿರುವುದು ಗಮನಕ್ಕೆ ಬಂದಿದೆ. ಪ್ರಸ್ತುತ ಗ್ರಾಮದ ಮುಖಂಡರು ಸೇರಿ ಸಮಸ್ಯೆ ಬಗೆಹರಿಸಿಕೊಂಡಿದ್ದಾರೆ ಎಂದು ಪಿಡಿಒ ಕೆ.ಎಂ. ವೇಣು ತಿಳಿಸಿದ್ದಾರೆ.