ಕೆಪಿಸಿಸಿ ಅಧ್ಯಕ್ಷ ಸ್ಥಾನ ತಪ್ಪಿಸಿದವರು ನಮ್ಮವರೇ

28-klr-12
Published on

ಕೋಲಾರ: ನಾನೊಬ್ಬ ಸ್ವಾತಂತ್ರ್ಯ ಹೋರಾಟಗಾರರ ಮಗನಾಗಿ ಕಾಂಗ್ರೆಸ್‌ನಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದೇನೆ. ಜೀವಂತವಾಗಿರುವವರೆಗೂ ಕಾಂಗ್ರೆಸ್ ಬಿಟ್ಟು ಬೇರೆ ಯಾವುದೇ ಪಕ್ಷಕ್ಕೆ ಸೇರುವುದಿಲ್ಲ ಎಂದು ಮಾಜಿ ಸಂಸದ, ಎಐಸಿಸಿ ಖಾಯಂ ಆಹ್ವಾನಿತ ಸದಸ್ಯ ಕೆ.ಎಚ್. ಮುನಿಯಪ್ಪ ಹೇಳಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿ, ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಬಲಪಡಿಸಲು ನನ್ನ ಶಕ್ತಿಮೀರಿ ಕೆಲಸ ಮಾಡುವೆ. ಇಲ್ಲಿಯ ಕಾಂಗ್ರೆಸ್ಸಿಗರು ಒಗ್ಗೂಡಿ ಕೆಲಸ ಮಾಡಿದಲ್ಲಿ ಬಿಜೆಪಿಯನ್ನು ಕಟ್ಟಿ ಹಾಕುವುದು ಕಷ್ಟವೇನಿಲ್ಲ ಎಂದರು.

ನಮ್ಮಲ್ಲಿನ ದೌರ್ಬಲ್ಯದಿಂದ ಬಿಜೆಪಿ ಅಧಿಕಾರ ಹಿಡಿಯುವಂತಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಈಗಿನಿಂದಲೇ ಪೈಪೋಟಿ ನಡೆಸುವ ಬದಲು ಪಕ್ಷ ಬಲಪಡಿಸಿ ಅಧಿಕಾರಕ್ಕೆ ಬಂದ ಮೇಲೆ ಯಾರಿಗೆ ಅರ್ಹತೆ ಇದೆಯೋ ಅವರು ಮುಖ್ಯಮಂತ್ರಿಯಾಗಬಹುದು ಎಂದು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಿಗೆ ಕಿವಿಮಾತು ಹೇಳಿದರು.

ಪಕ್ಷವನ್ನು ಈಗ ಬೂತ್‌ಮಟ್ಟದಲ್ಲಿ ಸಂಘಟಿಸಬೇಕು. ಮುಖಂಡರು ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಬೇಕು. ಇದಕ್ಕಾಗಿ ನಾನು ಹಗಲಿರುಳು ಶ್ರಮಿಸಲು ಬದ್ಧ ಎಂದರು.

ನನ್ನನ್ನು ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡಲು ಸೋನಿಯಾ ಗಾಂಧಿ ಎರಡು ಬಾರಿ ಪ್ರಯತ್ನಿಸಿದರು. ಆದರೆ ನಮ್ಮವರೇ ಅಡ್ಡಗಾಲು ಹಾಕಿದರು. ಇದರಿಂದ ನನಗೇನೂ ಬೇಸರವಿಲ್ಲ. ಪಕ್ಷದ ಹಿತಕ್ಕಿಂತ ನನಗೆ ಬೇರೆ ಯಾವುದೇ ಆಸೆಗಳಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net