

ಕೋಲಾರ: ಕೋಲಾರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಫಲಿತಾಂಶ ಘೋಷಣೆಗೆ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಅಧ್ಯಕ್ಷೆಯಾಗಿ ಜೆಡಿಎಸ್‌ನ ಆರ್.ಶ್ವೇತಾ ಶಬರೀಷ್ ಹಾಗೂ ಉಪಾಧ್ಯಕ್ಷರಾಗಿ ಎನ್.ಎಸ್.ಪ್ರವೀಣ್‌ಗೌಡ ಬುಧವಾರ ಪಗ್ರಹಣ ಮಾಡಿದರು.
ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ(ಎ) ವರ್ಗಕ್ಕೆ ನಿಗದಿಯಾಗಿದ್ದ ಮೀಸಲಾತಿ ರೋಸ್ಟರ್ ಪದ್ಧತಿಗೆ ವಿರುದ್ಧವಾಗಿದೆ ಎಂದು ಸದಸ್ಯೆ ಭಾಗ್ಯಮ್ಮ ಹೈಕೋರ್ಟ್ ಮೆಟ್ಟಿಲೇರಿದ್ದರು. ಚುನಾವಣೆ ನಡೆಸಲು ಅನುಮತಿ ನೀಡಿದ ಕೋರ್ಟ್ ಫಲಿತಾಂಶ ಪ್ರಕಟಿಸದಂತೆ ತಡೆ ನೀಡಿತ್ತು. ಹೀಗಾಗಿ ನ.1ರಂದು ಚುನಾವಣೆ ನಡೆದು ಜೆಡಿಎಸ್ ಮೇಲುಗೈ ಸಾಧಿಸಿತ್ತಾದರೂ ಫಲಿತಾಂಶ ಘೋಷಣೆ ಆಗಿರಲಿಲ್ಲ.
ಮಂಗಳವಾರ ಕೋರ್ಟ್‌ನಲ್ಲಿ ವಿಚಾರಣೆ ನಡೆದಾಗ ಸರ್ಕಾರ ತನ್ನ ವಾದ ಮಂಡಿಸಿ ಮೀಸಲಾತಿ ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಫಲಿತಾಂಶ ಘೋಷಣೆಗೆ ಕೋರ್ಟ್ ಅನುಮತಿ ನೀಡಿದ್ದರಿಂದ ಪ್ರಾದೇಶಿಕ ಆಯುಕ್ತರ ಸೂಚನೆ ಮೇರೆಗೆ ಬುಧವಾರ ಚುನಾವಣಾಧಿಕಾರಿಗಳಾಗಿದ್ದ ಎಸಿ ಸೋಮಶೇಖರ್ ಫಲಿತಾಂಶ ಪ್ರಕಟಿಸಿದರು.
ಅಧಿಕಾರ ಸ್ವೀಕಾರ: ಅಧಿಕಾರ ಸ್ವೀಕರಿಸಲು ಕಾಯುತ್ತಿದ್ದ ಅಧ್ಯಕ್ಷ-ಉಪಾಧ್ಯಕ್ಷರು ಬುಧವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ಶಾಸಕ ಕೆ.ಶ್ರೀನಿವಾಸಗೌಡ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.
ಸಚಿವ ಎಚ್.ನಾಗೇಶ್ ಮಾತನಾಡಿ, ರಾಜ್ಯದ 6 ನಗರಸಭೆಗಳಲ್ಲಿ ಈ ರೀತಿಯ ಸಮಸ್ಯೆ ಆಗಿತ್ತು. ಫಲಿತಾಂಶ ಘೋಷಣೆಗೆ ಮಂಗಳವಾರ ನ್ಯಾಯಾಲಯ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಅಧಿಕಾರ ಸ್ವೀಕಾರ ನೆರವೇರಿದೆ. ನೂತನ ಅಧ್ಯಕ್ಷ, ಉಪಾಧ್ಯಕ್ಷರು ನಗರ ಜನತೆಯ ನಿರೀಕ್ಷೆಗೂ ಮೀರಿ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ನಗರದಲ್ಲಿ ನಡೆಯುತ್ತಿರುವ ರಸ್ತೆಗಳ ಅಗಲೀಕರಣ, ಮತ್ತಿತರ ಕಾಮಗಾರಿಗಳಿಗೆ ಎಲ್ಲರೂ ಸಹಕಾರ ನೀಡುವ ಮೂಲಕ ಸುಂದರ ಮತ್ತು ಧೂಳು ಮುಕ್ತ ನಗರವನ್ನಾಗಿಸಬೇಕು.
ರಾಜಕಾರಣವನ್ನು ಚುನಾವಣೆಗಳಿಗೆ ಸೀಮಿತಗೊಳಿಸಿ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಕಿವಿ ಮಾತು ಹೇಳಿದರು.
ನಗರಸಭೆ ಅಧ್ಯಕ್ಷೆ ಆರ್.ಶ್ವೇತಾ ಶಬರೀಷ್ ಮಾತನಾಡಿ, ಎಲ್ಲ ಜನಪ್ರತಿನಿಧಿಗಳು, ನಗರಸಭೆಯ ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ನಗರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷ ಎನ್.ಎಸ್.ಪ್ರವೀಣ್‌ಗೌಡ ಮಾತನಾಡಿದರು. ನಗರಸಭೆ ಪೌರಾಯುಕ್ತ ಶ್ರೀಕಾಂತ್, ಸದಸ್ಯರು,ಅಧಿಕಾರಿಗಳು ಉಪಸ್ಥಿತರಿದ್ದರು.