ಕೊತ್ತಂಬರಿ ಸೊಪ್ಪಿನ ಬೆಲೆ ಕುಸಿತ, ಉಚಿತವಾಗಿ ಜಾನುವಾರು ಮೇವಿಗೆ ಹಂಚಿದ ರಾಮಾಂಜಪ್ಪ

1-klr-5
Published on

ಕೋಲಾರ: ತೀವ್ರ ಬೆಲೆ ಕುಸಿತದ ಕಾರಣದಿಂದ ತೊಟ್ಲಿ ಗ್ರಾಮದ ರೈತ ರಾಮಾಂಜಪ್ಪ ಕಟಾವು ಮಾಡದೆ ಬಿಟ್ಟಿದ್ದ ಕೊತ್ತಂಬರಿ ಸೊಪ್ಪನ್ನು ಸುತ್ತಮುತ್ತಲಿನವರಿಗೆ ದಾನ ಮಾಡಿದ್ದಾರೆ.

ಕೆಲ ರೈತರು ಜಾನುವಾರುಗಳ ಮೇವಿಗೆ ಕೊಯ್ದರೆ, ಅಕ್ಕಪಕ್ಕದ ನಿವಾಸಿಗಳು, ಚಿಲ್ಲರೆ ವ್ಯಾಪಾರಸ್ಥರು ಪುಕ್ಕಟೆಯಾಗಿ ಸೊಪ್ಪು ಕಿತ್ತುಕೊಂಡು ಹೋಗಿದ್ದಾರೆ.

ರಾಮಾಂಜಪ್ಪ 1 ಎಕರೆಯಲ್ಲಿ ಸುಮಾರು 15ರಿಂದ 20 ಸಾವಿರ ವೆಚ್ಚ ಮಾಡಿ ಕೊತ್ತಂಬರಿ ಬೆಳೆಸಿದ್ದರು. ದೀಪಾವಳಿ ಸಂದರ್ಭದಲ್ಲಿ ಉತ್ತಮ ಬೇಡಿಕೆ ಕಂಡುಬರಬಹುದು ಎಂದು ಬೆಲೆಯ ನಿರೀಕ್ಷೆ ಇಟ್ಟುಕೊಂಡಿದ್ದರು.

ಪ್ರಮುಖವಾಗಿ 20 ಕೆಜಿ ಚೀಲದ ಮೂಟೆಯಲ್ಲಿ ಸೊಪ್ಪನ್ನು ತಿರುಪತಿ, ಬೆಂಗಳೂರು ಇನ್ನಿತರೆಡೆ ಕಳುಹಿಸಲಾಗುತ್ತಿತ್ತು. ಆದರೆ ಹತ್ತು ದಿನಗಳಿಂದ ಕಟ್ಟನ್ನು 5 ರೂ.ಗೆ ಕೊಳ್ಳುವವರಿಲ್ಲದಂತಾಯಿತು. ಪ್ರತಿ ಸಲ ಆಂಧ್ರ, ತಮಿಳುನಾಡು, ಚಿಂತಾಮಣಿ ಕಡೆಯಿಂದ ಬರುವ ವ್ಯಾಪಾರಸ್ಥರನ್ನು ಸಂಪರ್ಕಿಸಿ ಮಾರಾಟಕ್ಕೆ ಪ್ರಯತ್ನ ನಡೆಸಿದರೂ ಕೈ ಗೂಡಲಿಲ್ಲ. ಇದರಿಂದ ಬೇಸತ್ತ ರಾಮಾಂಜಪ್ಪ ಮಂಗಳವಾರ ಸುತ್ತಮುತ್ತಲ ರೈತರಿಗೆ ಕಟಾವು ಮಾಡಿಕೊಂಡು ಹೋಗಲು ಅವಕಾಶ ಕಲ್ಪಿಸಿದರು.

ಅಕ್ಕಪಕ್ಕದ ನಿವಾಸಿಗಳು ಅಡುಗೆ ಮನೆಗೆ ಬೇಕಾದಷ್ಟು ಹಾಗೂ ಚಿಲ್ಲರೆ ವ್ಯಾಪಾರಿಗಳು ಬೇಕಾದಷ್ಟು ಸೊಪ್ಪನ್ನು ಪುಕ್ಕಟೆಯಾಗಿ ಕೊಂಡೊಯ್ದರು.

ಕೈ ಕೊಟ್ಟ ಅದೃಷ್ಟ: ಕೊತ್ತಂಬರಿ ಬೆಳೆಯಲು ಖರ್ಚು ಕಡಿಮೆ, ಲಾಭ ಜಾಸ್ತಿ. ಕಳೆದ ತಿಂಗಳು ಇದೇ ಗ್ರಾಮದಲ್ಲಿ 1 ಎಕರೆ ಸೊಪ್ಪಿನ ತೋಟವನ್ನು 1.60 ಲಕ್ಷ ರೂ.ಗೆ ಮಾರಿದ್ದ್ದರು. ಕೇಳುವವರಿಲ್ಲದೆ ಕಳೆದ ಕೆಲ ದಿನಗಳ ಹಿಂದೆ ಸುಗಟೂರಿನ ಗೋಪಾಲಪ್ಪ 3 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕೊತ್ತಂಬರಿ ಸೊಪ್ಪನ್ನು ರೊಟವೇಟರ್ ಸಹಾಯದಿಂದ ಉಳುಮೆ ಮಾಡಿ ಹೊಲಕ್ಕೆ ಗೊಬ್ಬರ ಮಾಡಿದ್ದರು.

ಕೊತ್ತಂಬರಿ ಸೊಪ್ಪು ಇರುವ ಬಗ್ಗೆ ಹತ್ತು ದಿನಗಳಿಂದ ವ್ಯಾಪಾರಸ್ಥರನ್ನು ಸಂಪರ್ಕಿಸಿ ಬಲವಂತ ಮಾಡಿದರೂ ತೋಟ ನೋಡಿಕೊಂಡು ಹೋದವರಿಗೆ ಕಾದು ಕಾದು ಸಾಕಾಯಿತು. ಯಾರೂ ಬಾರದಿದ್ದುದರಿಂದ ಜಾನುವಾರುಗಳ ಮೇವಿಗಾದರೂ ಆದೀತು ಎಂದು ರೈತರಿಗೆ ಪುಕ್ಕಟೆಯಾಗಿ ಕೊಟ್ಟುಬಿಟ್ಟೆ. ರಾಮಾಂಜಪ್ಪ, ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net