

ಶ್ರೀನಿವಾಸಪುರ: ತಾಲೂಕಿನ ಗೌನಪಲ್ಲಿ ದೊಡ್ಡಪ್ರಮಾಣದ ವ್ಯವಸಾಯ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿಗೆ ನ.12ರಂದು ನಡೆಯುವ ಚುನಾವಣೆ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಜಿದ್ದಿನ ಕಣವಾಗಿ ಮಾರ್ಪಟ್ಟಿದೆ.
ಸಹಕಾರ ಸಂಘದ ನೂತನ ಆಡಳಿತ ಮಂಡಳಿ ಚುನಾವಣೆ ಸಂಬಂಧ ಮತದಾರರ ಪಟ್ಟಿಯಲ್ಲಿ 250 ಸದಸ್ಯರ ಹೆಸರಷ್ಟೇ ಉಳಿಸಿ ಉಳಿದ ಸದಸ್ಯರು ಸಭೆಗಳಿಗೆ ಸತತ ಗೈರಾದ ಕಾರಣವೊಡ್ಡಿ ಕೈಬಿಡಲಾಗಿತ್ತು. ಆಡಳಿತ ಮಂಡಳಿಯ ಈ ಕ್ರಮದ ವಿರುದ್ಧ ಜೆಡಿಎಸ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಕಾರ್ಯದರ್ಶಿ ವೀರಪ್ಪರೆಡ್ಡಿ ಮೇಲೆ ಗಲಾಟೆ ಮಾಡಿ ಹಲ್ಲೆ ನಡೆದಿತ್ತು. ಹಲ್ಲೆ ಸಂಬಂಧ ಕಾರ್ಯದರ್ಶಿ ಠಾಣೆಯಲ್ಲಿ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಜೆಡಿಎಸ್ ಬೆಂಬಲಿಗರು ಕಾರ್ಯದರ್ಶಿ ವಿರುದ್ಧ ಜಾತಿ ನಿಂದನೆಯ ಪ್ರತಿದೂರು ದಾಖಲಿಸಿದ್ದರು.
ಸೊಸೈಟಿ ಮತದಾರರ ಪಟ್ಟಿ ವಿವಾದದಿಂದ ಜೆಡಿಎಸ್ ಬೆಂಬಲಿಗರು ಚುನಾವಣೆ ಮುಂದೂಡುವ ನಿರೀಕ್ಷೆ ಇಟ್ಟುಕೊಂಡಿದ್ದರು.ಈ ಮಧ್ಯೆ ಸೊಸೈಟಿಗೆ ಮಂಜುಳಾ ಎಂಬುವರನ್ನು ಪ್ರಭಾರಿ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಚುನಾವಣೆ ಪ್ರಕ್ರಿಯೆ ಆರಂಭಿಸಿತ್ತು.
ಆದರೆ ಮತದಾರರ ಪಟ್ಟಿಯಿಂದ ನೂರಾರು ಜನರ ಹೆಸರು ಕೈಬಿಟ್ಟ ಕ್ರಮ ಪ್ರಶ್ನಿಸಿ ಜೆಡಿಎಸ್ ಬೆಂಬಲಿಗರು ಹೈ ಕೋರ್ಟ್‌ಗೆ ಹೋಗಿ ಎಲ್ಲ 1300 ಸದಸ್ಯರಿಗೂ ಮತದಾನದ ಅವಕಾಶ ಕೋರಿ ಆದೇಶ ತಂದು ಕಾಂಗ್ರೆಸ್‌ಗೆ ಶಾಕ್ ನೀಡಿದ್ದರು.
ಒಟ್ಟು 13 ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಎರಡೂ ಕಡೆಯಿಂದ ತಲಾ 13 ಮಂದಿಯಂತೆ ಒಟ್ಟು 26 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗುರುವಾರ ಬೆಳಗ್ಗೆ 9ರಿಂದ 4ರವರೆಗೆ ಮತದಾನ ನಡೆಯಲಿದೆ. ಸಂಜೆ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ.
ಪ್ರತಿಷ್ಠೆಯ ಕಣವಾಗಿದೆ: ಗೌನಪಲ್ಲಿ ಸೊಸೈಟಿ ಹಲವು ದಶಕಗಳಿಂದ ಕಾಂಗ್ರೆಸ್ ಬೆಂಬಲಿಗರ ವಶದಲ್ಲಿದೆ. ಇದನ್ನು ಉಳಿಸಿಕೊಳ್ಳಲು ಶಾಸಕ ಕೆ.ಆರ್.ರಮೇಶ್‌ಕುಮಾರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಶತಪ್ರಯತ್ನ ನಡೆಸುತ್ತಿದ್ದಾರೆ. ಕಳೆದ ತಿಂಗಳು ಸೊಸೈಟಿ ವ್ಯಾಪ್ತಿಯಲ್ಲಿ ಡಿಸಿಸಿ ಬ್ಯಾಂಕ್ ಮೂಲಕ ಪಕ್ಷಾತೀತವಾಗಿ ರೈತರಿಗೆ 3 ಕೋಟಿ ರೂ. ಸಾಲ ವಿತರಿಸಿರುವುದರಿಂದ ಮತದಾರರು ಕೈ ಹಿಡಿಯುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ.
ಆಡಳಿತ ಪಡೆಯಲು ಪ್ರಯತ್ನ: ಪ್ರತಿಷ್ಠೆಯ ಕಣವಾಗಿದ್ದ ಪುರಸಭೆ ಚುನಾವಣೆಯಲ್ಲಿ ಮಾಜಿ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಕಾಂಗ್ರೆಸ್‌ಗೆ ಸೋಲುಣಿಸಿ ಗಾದಿಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಹುಮ್ಮಸ್ಸಿನಲ್ಲಿ ಕಾಂಗ್ರೆಸ್ ವಶದಲ್ಲಿರುವ ಸೊಸೈಟಿ ಆಡಳಿತವನ್ನು ಕಸಿದುಕೊಳ್ಳಲು ಶತಪ್ರಯತ್ನ ನಡೆಸುತ್ತಿದ್ದಾರೆ. ಮತದಾರರನ್ನು ಓಲೈಸಿಕೊಳ್ಳಲು ಎರಡೂ ಕಡೆಯಿಂದ ಎಲ್ಲ ರೀತಿಯ ತಂತ್ರಗಾರಿಕೆ ನಡೆಯುತ್ತಿದೆ.