

ವೇಮಗಲ್: ಗಡಿಯಲ್ಲಿ ಜೀವದ ಹಂಗು ತೊರೆದು ಸೈನಿಕರು ಕಾವಲು ಕಾಯುತ್ತಿರುವುದರಿಂದಲೇ ನಾವಿಂದು ನೆಮ್ಮದಿಯಿಂದ ಜೀವಿಸುತ್ತಿದ್ದೇವೆ. ಅವರ ದೇಶ ಪ್ರೇಮ ನಮಗೆಲ್ಲಾ ಮಾದರಿ ಎಂದು ವಿಧಾನಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಹೇಳಿದರು.
ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ಗ್ರಾಮಕ್ಕೆ ಬಂದ ಜೆ.ಮುರಳೀಧರ ಅವರಿಗೆ ವೀರಭದ್ರಸ್ವಾಮಿ ದೇವಾಲಯದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಸೈನಿಕರು ಮತ್ತು ರೈತರು ದೇಶಕ್ಕೆ ನೀಡಿರುವ ಕೊಡುಗೆ ಅಪಾರ. ಗಡಿಯಲ್ಲಿ ಸೈನಿಕ ದೇಶ ಕಾಯ್ದರೆ, ಇಲ್ಲಿ ರೈತ ನಮಗೆ ಅನ್ನ ನೀಡಲು ದುಡಿಯುತ್ತಾನೆ. ಇವರಿಬ್ಬರನ್ನು ಗೌರವಿಸುವುದು ಪ್ರತಿ ಭಾರತೀಯನ ಕರ್ತವ್ಯ ಎಂದರು.
ಸೇನಾ ರ‌್ಯಾಲಿಗಳನ್ನು ಗಮನಿಸಿದಾಗ ಸಾವಿರಾರು ಸಂಖ್ಯೆಯಲ್ಲಿ ಯುವಕರು ಪಾಲ್ಗೊಂಡರೂ ದೈಹಿಕ ಸಾಮರ್ಥ್ಯವಿಲ್ಲ ಎಂಬ ಕಾರಣಕ್ಕೆ ಸೇನೆಗೆ ಸೇರಲಾಗದೆ ಹೊರಗುಳಿಯುತ್ತಿದ್ದಾರೆ. ಯುವಕರು ನಿವೃತ್ತ ಯೋಧರಿಂದ ಉತ್ತಮ ತರಬೇತಿ ಪಡೆದುಕೊಂಡು ಸೈನ್ಯಕ್ಕೆ ಸೇರಲು ಅರ್ಹತೆ ಪಡೆದುಕೊಳ್ಳಬೇಕು. ನಿಯಮಿತ ವ್ಯಾಯಾಮದ ಮೂಲಕ ದೇಹದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಗೌರವ ಸಮರ್ಪಣೆ ಸ್ವೀಕರಿಸಿದ ನಿವೃತ್ತ ಯೋಧ ಜೆ.ಮುರಳೀಧರ್, ಸೈನಿಕ ನಾನು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಗಡಿಯಲ್ಲಿ ಪ್ರಾಣ ಒತ್ತೆ ಇಟ್ಟು ಹೋರಾಡಬೇಕು ಎಂದಿದ್ದರೂ, ಆ ಭಯ ನಮ್ಮನ್ನು ಕಾಡುವುದಿಲ್ಲ. ಅಲ್ಲಿ ದೇಶ ರಕ್ಷಣೆಯೇ ನಮ್ಮ ಗುರಿಯಾಗಿರುತ್ತದೆ. ಸಿಯಾಚಿನ್‌ನಲ್ಲಿ ಹಿಮದ ನಡುವೆ ಬದುಕು, ಗಡಿಯಲ್ಲಿ ಪ್ರತಿ ನಿತ್ಯ ಬರುವ ಗುಂಡಿನ ಸದ್ದು, ಇವೆಲ್ಲವನ್ನು ಮೆಟ್ಟಿನಿಂತು ದೇಶದ್ರೋಹಿಗಳಿಗೆ ಉತ್ತರ ನೀಡುವುದು ನಮ್ಮ ಕರ್ತವ್ಯ ಎಂದು ತಿಳಿದು ಗುಂಡಿಗೆ ಎದೆಯೊಡ್ಡಿ ನಿಲ್ಲಬೇಕಾಗುತ್ತದೆ ಎಂದರು.
ನಿವೃತ್ತ ಯೋಧನ ತಾಯಿ ಲಕ್ಷ್ಮಮ್ಮ ಮಾತನಾಡಿ, ತನ್ನ ಮಗ ಸೈನ್ಯಕ್ಕೆ ಹೋದಾಗ ಮೊದಲು ಭಯವಾಯಿತು. ಆದರೂ ಅವನು ದೇಶಕ್ಕಾಗಿ ಹೋಗುತ್ತಿದ್ದಾನೆ ಎಂದು ನೆನೆದು ಖುಷಿಯಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.
ತಾಪಂ ಮಾಜಿ ಅಧ್ಯಕ್ಷ ಉದಯಶಂಕರ್, ಯೋಧನ ಪತ್ನಿ ಜ್ಯೋತಿ, ಸ್ನೇಹಿತ ಪ್ರಕಾಶ್ ಮತ್ತಿತರರಿದ್ದರು.