ಕೋಲಾರ ನಗರದ ವಿವಿಧೆಡೆ ಡಿಸಿ ಸತ್ಯಭಾಮ ಸಂಚಾರ

7-klr-2
Published on

ಕೋಲಾರ: ನಗರಸಭೆ, ಪರಿಸರ ಇಲಾಖೆ ಅಧಿಕಾರಿಗಳು ಮಾಡಬೇಕಾದ ಕೆಲಸಗಳನ್ನು ನಾನು ಮಾಡಬೇಕಾಗಿ ಬಂದಿದೆ. ನಿಮಗೆ ಜವಾಬ್ದಾರಿ ಇಲ್ಲವೇ ಎಂದು ಅಧಿಕಾರಿಗಳ ಮೇಲೆ ಗರಂ ಆದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಆಯಾ ವಾರ್ಡ್‌ನ ಮೇಸ್ತ್ರಿಗಳು ಸರಿಯಾಗಿ ಕೆಲಸ ಮಾಡದಿದ್ದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತ ಶ್ರೀಕಾಂತ್ ಅವರಿಗೆ ಸೂಚಿಸಿದರು.

ಶನಿವಾರ ಬೆಳಗ್ಗೆ 6 ಗಂಟೆಯಿಂದ 9 ರವರೆಗೆ ನಗರದ ಅಮ್ಮವಾರಿ ಪೇಟೆ ವೃತ್ತದಿಂದ ಕಾಳಮ್ಮಗುಡಿ ರಸ್ತೆ, ಕೆಎಸ್‌ಆರ್‌ಟಿ ಬಸ್ ನಿಲ್ದಾಣ, ಬಸ್ ನಿಲ್ದಾಣದ ಹಿಂಭಾಗದ ರಸ್ತೆ, ಅಂತರಗಂಗೆ, ಕಾರಂಜಿಕಟ್ಟೆ ರಸ್ತೆ ಸುತ್ತಮುತ್ತ ಪ್ರದೇಶಗಳಲ್ಲಿ ಸುತ್ತು ಹಾಕಿದ ವೇಳೆ ರಸ್ತೆ ಬದಿಯಲ್ಲಿ ಕಸದ ರಾಶಿಗಳು, ಪಾದಚಾರಿ ರಸ್ತೆಗಳ ಒತ್ತುವರಿ, ಅಬಕಾರಿ ನಿಯಮ ಉಲ್ಲಂಘನೆಯಂತಹ ಅವ್ಯವಸ್ಥೆ ಕಂಡು ಕೆಂಡಾಮಂಡಲವಾದರು.

ಕೆಎಸ್‌ಆರ್‌ಟಿ ಬಸ್ ನಿಲ್ದಾಣ ಬಳಿಯ ನಗರಸಭೆ ವಾಣಿಜ್ಯ ಮಳಿಗೆ ಬಳಿ ಒತ್ತುವರಿ ತೆರವು ಮಾಡಲು ಖಾಸಗಿ ಆಸ್ಪತ್ರೆಗೆ ಸೂಚಿಸಿದರಲ್ಲದೆ ಪಕ್ಕದಲ್ಲಿದ್ದ ಕ್ಲಿನಿಕ್ ಬಳಿ ಚರಂಡಿಯಲ್ಲಿ ಕಸದ ರಾಶಿ ಕಂಡು ನೋಟಿಸ್ ಜಾರಿಗೆ ಪರಿಸರದ ಅಧಿಕಾರಿ ಪುನೀತ್‌ಗೆ ಸೂಚಿಸಿದರು. ಅಕ್ರಮ ಪೆಟ್ಟಿಗೆ ಅಂಗಡಿ ತೆರವಿಗೆ ನಿರ್ದೇಶನ ನೀಡಿದರು.

ಬಸ್ ನಿಲ್ದಾಣದ ಮುಂಭಾಗದಲ್ಲಿನ ವಿನಾಯಕ, ರಿಗಲ್, ಗಿರೀಶ್ ಸೇರಿ ಕೆಲವು ಮದ್ಯದಂಗಡಿಗಳು ಬೆಳಗ್ಗೆಯೇ ಬಾಗಿಲು ತೆರೆದು ವಹಿವಾಟು ನಡೆಸುತ್ತಿವೆ. ನೀವು ಬರುತ್ತಿರುವ ಮಾಹಿತಿ ತಿಳಿದು ಬಾಗಿಲು ಹಾಕಿದ್ದಾರೆಂದು ಸಾರ್ವಜನಿಕರು ದೂರಿದಾಗ ಈ ಬಗ್ಗೆ ಪರಿಶೀಲಿಸಿ ನೋಟಿಸ್ ಜಾರಿ ಮಾಡಿ ಪರವಾನಗಿ ರದ್ದುಗೊಳಿಸಲು ಶಿಫಾರಸು ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪತ್ರಕರ್ತರ ಭವನದ ಹಿಂಭಾಗದ ರಸ್ತೆ ಬದಿಯಲ್ಲಿ ಕಸದ ರಾಶಿಗಳಿಗೆ ಬೆಂಕಿ ಹಚ್ಚಿದ್ದನ್ನು ಕಂಡು ರಸ್ತೆಗೆ ಕಸ ಸುರಿದರೆ ಅದನ್ನು ನಿಮ್ಮಮನೆಯ ಒಳಗೆ ಸುರಿಯಬೇಕಾಗುತ್ತದೆ ಅದಕ್ಕೆ ಅವಕಾಶ ನೀಡದಂತೆ ಕಸವನ್ನು ವಿಂಗಡಿಸಿ ನಗರಸಭೆಯ ವಾಹನಗಳಿಗೆ ನೀಡಿ ಆರೋಗ್ಯ ಕಾಪಾಡಿಕೊಳ್ಳಿ, ನಗರಸಭೆ ನಿಮಗೆ ಮೂಲ ಸೌಲಭ್ಯ ಒದಗಿಸಿದರೂ ಬಳಸಿಕೊಂಡು ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ ಹೇಗೆಂದು ನಿವಾಸಿಗಳನ್ನು ಪ್ರಶ್ನಿಸಿದರು.

ನಗರಸಭೆಗೆ ಸೇರಿದ ಸರ್ವೇ ನಂಬರ್ 181ರ ಕುರಿತು ಮಾಹಿತಿ ಪಡೆದ ಡಿಸಿ ನಗರಸಭೆಯ ಎಲ್ಲ ಆಸ್ತಿಗಳಿಗೆ ಬೇಲಿ ಹಾಕಿ ಫಲಕ ಆಳವಡಿಸುವಂತೆ, ಬಸ್ ನಿಲ್ದಾಣದ ಮುಂಭಾಗ ಚರಂಡಿಗಳ ಮೇಲೆ ನಿರ್ಮಿಸಿದ್ದ ಕಟ್ಟಡ ತೆರವು ಹಾಗೂ ಬಸ್ ನಿಲ್ದಾಣ ವೃತ್ತದಲ್ಲಿನ ನಾಲ್ಕು ಚಕ್ರ ಬಾವಿಯಲ್ಲಿ ತುಂಬಿರುವ ಕಸ ತೆರವುಗೊಳಿಸಲು ಪೌರಾಯುಕ್ತ ಶ್ರೀಕಾಂತ್‌ಗೆ ಸೂಚಿಸಿದರು.

ನಗರದ ಕೆಲವು ಕಡೆ ಅಕ್ರಮವಾಗಿ ಗೋ ವಧೆ ಮಾಡುತ್ತಿರುವ ವಿರುದ್ಧ ಹಾಗೂ ತ್ಯಾಜ್ಯಗಳನ್ನು ರಸ್ತೆಗಳಲ್ಲಿ ಎಸೆಯುವವರ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದರು. ಕೀಲುಕೋಟೆ ಅಂಜನೇಯ ಸ್ವಾಮಿ ದೇವಾಲಯದ ಕಾಪೌಂಡ್ ನಿರ್ಮಾಣಕ್ಕೆ ಸಲಹೆ ನೀಡಿದರು. ನಗರಸಭೆ ವ್ಯವಸ್ಥಾಪಕ ತ್ಯಾಗರಾಜ್, ಸದಸ್ಯ ಮಂಜುನಾಥ್, ಸಿಬ್ಬಂದಿ ನಾಗರಾಜ್ ಇತರರು ಉಪಸ್ಥಿತರಿದ್ದರು.

ಲಾಠಿ ರುಚಿ: ಆರ್‌ಒ ಘಟಕದ ಬಳಿ ಅಡ್ಡಾದಿಡ್ಡಿ ನಿಲ್ಲಿಸಿದ್ದ ವಾಹನಗಳಿಗೆ ದಂಡ ವಿಧಿಸಲು ತಾಕೀತು ಮಾಡಿದರು. ಇದೇ ವೇಳೆ ದ್ವಿಚಕ್ರವಾಹನದಲ್ಲಿ ಮಾಸ್ಕ್ ಧರಿಸದೆ ಬಂದ ಯುವಕ ಶಾಬಾಸ್‌ನನ್ನು ಸತ್ಯಭಾಮ ತಡೆದು ಪ್ರಶ್ನಿಸಿದಾಗ ಉದ್ದಟತನ ತೋರಿದ್ದಕ್ಕೆ ಕೋಪಗೊಂಡು ಪೊಲೀಸರಿಂದ ಲಾಠಿ ಪಡೆದು ಯುವಕನಿಕಗೆ ಎರಡು ಬಾರಿಸಿದರಲ್ಲದೆ 500 ರೂ. ದಂಡ ವಿಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net