ಪುಸ್ತಕ ಮಾರಾಟಕ್ಕೆ ಪ್ರಚಾರ ಕೊರತೆ

6-klr-4
Published on

ಪಿ.ಎಸ್. ಹರೀಶ್ ಕೋಲಾರ

ಕನ್ನಡ ರಾಜ್ಯೋತ್ಸವದ ಅಂಗವಾಗಿ ನವೆಂಬರ್‌ನಲ್ಲಿ ಮಾತ್ರ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕಗಳನ್ನು ಶೇ.50ರ ರಿಯಾಯಿತಿ ದರಗಳಲ್ಲಿ ನೀಡುತ್ತಿದ್ದು, ಮಾರಾಟ ಮಾಡಲು ಹಾಗೂ ಕನ್ನಡ ಓದುಗರನ್ನು ಸೆಳೆಯುವಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿಂದೆ ಬಿದ್ದಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ನ.30ರವರೆಗೆ ರಿಯಾಯಿತಿ ಸೌಲಭ್ಯ ದೊರೆಯಲಿದೆ.

302 ಪುಸ್ತಕಗಳು ಲಭ್ಯ: ಆದಿಪುರಾಣ, ಶ್ರೀಕೃಷ್ಣ ದೇವರಾಯ ಸಮಗ್ರ ನಾಟಕ, ಡಾ.ಸಿದ್ದಲಿಂಗಯ್ಯ ಸಮಗ್ರ ಸಾಹಿತ್ಯ ಸಂಪುಟ, ಮೊಸರುನಾಡು ಕತೆಗಳು, ಪಾಪು ಗಾಂಧಿ ಬಾಪು ಆದ ಕಥೆ, ರಾಮಾಶ್ವಮೇಧಂ, ಕನ್ನಡದಲ್ಲಿ ಪ್ರವಾಸ ಸಾಹಿತ್ಯ ಒಂದು ಸಾಂಸ್ಕೃತಿಕ ಅಧ್ಯಯನ, ಶೇಕ್ಸ್‌ಪಿಯರ್‌ನ ನಾಟಕಗಳ ಅಧ್ಯಯನ, ಪ್ರಾಚೀನ ಕನ್ನಡ ಗ್ರಂಥ ಸಂಪಾದನೆ, ಕರ್ನಾಟಕ ಪಂಚತಂತ್ರ ಹೀಗೆ ಒಟ್ಟು 302 ಪುಸ್ತಕಗಳನ್ನು ಶೇ.50 ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಿದೆ.

ಜಿಲ್ಲೆಯಲ್ಲಿ ಏನಿದೆ ಪರಿಸ್ಥಿತಿ: ಟಿ.ಚನ್ನಯ್ಯ ರಂಗಮಂದಿರ ಆವರಣದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ಪ್ರತ್ಯೇಕ ಮಾರಾಟ ಮಳಿಗೆ ತೆರೆಯಲಾಗಿದ್ದು, ಮಳಿಗೆ ಕಾರ್ಯಾರಂಭದ ದಿನ ತೆರೆದದ್ದು ಬಿಟ್ಟರೆ ಬೇರೆ ದಿನ ತೆರೆದಿದ್ದನ್ನು ಕಂಡವರಿಲ್ಲ. ಕಚೇರಿಗೆ ಹೋಗಿ ಬೇಕಿರುವ ಪುಸ್ತಕ ಕೇಳಿದರೆ ಸಿಬ್ಬಂದಿ ಬೀಗ ತೆಗೆದು ಮಾರಾಟ ಮಾಡುವ ಪರಿಪಾಠ ಇಟ್ಟುಕೊಂಡಿದ್ದಾರೆ. ಉಳಿದಂತೆ ಸಾರ್ವಜನಿಕರಿಗೆ ಇಲ್ಲಿ ಪುಸ್ತಕ ಮಾರಾಟ ಮಳಿಗೆ ಇದೆ ಎಂಬುದೇ ತಿಳಿದಿಲ್ಲ. ಮಳಿಗೆಯಲ್ಲಿ ದಿನನಿತ್ಯ ಸಿಬ್ಬಂದಿ ನಿಯೋಜಿಸಲು ಸಿಬ್ಬಂದಿ ಕೊರತೆ ಇನ್ನಿತರ ಕಾರಣ ನೀಡುತ್ತಾರೆ ಅಧಿಕಾರಿಗಳು.

ಪುಸ್ತಕ ಓದುವ ಸಂಸ್ಕೃತಿ ದಿನೇದಿನೆ ಕಡಿಮೆ ಆಗುತ್ತಿರುವ ಸಂದರ್ಭದಲ್ಲಿ ಕನಿಷ್ಠ ಪಕ್ಷ ನವೆಂಬರ್ ಮಟ್ಟಿಗಾದರೂ ಕನ್ನಡ ಪುಸ್ತಕ ಪ್ರಾಧಿಕಾರ ಶೇ.50ರ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮಾಡುತ್ತಿರುವ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತನ್ನ ಕಚೇರಿ ಹೊರಗೆ ಬ್ಯಾನರ್ ಅಳವಡಿಸಿ ಪ್ರಚಾರ ನೀಡಿದ್ದರೆ ಪ್ರಾಧಿಕಾರದ ಉದ್ದೇಶ ಸಾರ್ಥಕವಾಗುತ್ತಿತ್ತೋ ಏನೋ.

ಕರೊನಾ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯಾವುದೇ ಕಾರ್ಯಕ್ರಮಗಳಿಲ್ಲ. ರಾಜ್ಯೋತ್ಸವದ ಅಂಗವಾಗಿ ಪುಸ್ತಕ ಪ್ರಾಧಿಕಾರದ ಪುಸ್ತಕಗಳು ಶೇ.50 ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯವಿರುವ ಬಗ್ಗೆ ಪ್ರಚಾರ ನೀಡಿದರೆ ಉತ್ತಮ. ನಾಗಾನಂದ ಕೆಂಪರಾಜ್, ಕಸಾಪ ಜಿಲ್ಲಾಧ್ಯಕ್ಷ, ಕೋಲಾರ ಕನ್ನಡ ಪುಸ್ತಕ ಪ್ರಾಧಿಕಾರದಿಂದ ರಿಯಾಯಿತಿ ದರದಲ್ಲಿ ಲಭ್ಯವಿರುವ ಪುಸ್ತಕಗಳ ವಿವರಗಳನ್ನು ನೋಟಿಸ್ ಬೋರ್ಡ್‌ನಲ್ಲಿ ಹಾಕಲಾಗಿದೆ. ಈವರೆಗೆ 1080 ರೂ. ಮೌಲ್ಯದ 6 ಪುಸ್ತಕಗಳು ಮಾರಾಟವಾಗಿವೆ. ಸಿಬ್ಬಂದಿ ನಿಯೋಜಿಸಿ ಮಳಿಗೆ ತೆರೆದಿಟ್ಟು, ಪ್ರಚಾರಕ್ಕೆ ಕ್ರಮ ವಹಿಸಲಾಗುವುದು. ಡಿ.ಎಂ.ರವಿಕುಮಾರ್, ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೋಲಾರ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲೂ ಪ್ರಾಧಿಕಾರದ ಪುಸ್ತಕಗಳು ಶೇ.50ರ ರಿಯಾಯಿತಿ ದರದಲ್ಲಿ ಲಭ್ಯವಿದ್ದು, ಅಕ್ಷರ ಪ್ರೇಮಿಗಳಿಂದ ಉತ್ತಮ ಸ್ಪಂದನೆಯಿದೆ. ಇನ್ನು 50 ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಹಾ.ಮಾ.ರಾಮಚಂದ್ರ, ಸಿರಿಗನ್ನಡ ಪುಸ್ತಕ ಮಳಿಗೆ ಮುಖ್ಯಸ್ಥ, ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net