

ಮಾಸ್ತಿ: ಟೇಕಲ್ ಹೋಬಳಿಯ ಕಾಡಶೆಟ್ಟಿಹಳ್ಳಿ ಗ್ರಾಪಂ ಪಂಚಾಯಿತಿ ವ್ಯಾಪ್ತಿಯ ಚಂಬೆ, ಕಾರಂಗುಟ್ಟೆ, ನಕ್ಕನಹಳ್ಳಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಗ್ರಾಪಂ ವತಿಯಿಂದ ಶುಕ್ರವಾರ ಟ್ಯಾಂಕರ್ ಮೂಲಕ ನೀರು ಪೂರೈಸಲಾಯಿತು.
ಈ ಮೂರು ಗ್ರಾಮಗಳಲ್ಲಿ ಹಲವು ದಿನಗಳಿಂದ ಗ್ರಾಮಸ್ಥರು ಕುಡಿಯುವ ನೀರಿಗಾಗಿ ನಾನಾ ಸಮಸ್ಯೆ ಅನುಭವಿಸುತ್ತಿದ್ದು, ಕಾರಂಗುಟ್ಟೆಯಲ್ಲಿ ಕೆರೆಗೆ ಕೆಸಿ ವ್ಯಾಲಿ ನೀರು ಹರಿಸಿರುವುದರಿಂದ ಬೋರ್‌ವೆಲ್ ನೀರು ಕೂಡಾ ದುರ್ವಾಸನೆ ಬರುತ್ತಿದ್ದ ಬಗ್ಗೆ ನ.4ರಂದು ‘ಕಾರಂಗುಟ್ಟೆ ಗ್ರಾಮದಲ್ಲಿ ಕುಡಿಯುವ ನೀರು ಕಲುಷಿತ’ ಎಂಬ ಶೀರ್ಷಿಕೆಯಲ್ಲಿ ವಿಜಯವಾಣಿ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಗ್ರಾಪಂ ಆಡಳಿತ ಈ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ಕೈಗೊಂಡಿದೆ.
ಚಂಬೆ ಗ್ರಾಮದಲ್ಲಿ ಬೋರ್‌ವೆಲ್ ಮೋಟಾರ್ ಸಮಸ್ಯೆಯಿಂದ 2 ತಿಂಗಳಿನಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿತ್ತು. ಹೊಸ ಮೋಟಾರ್ ಪಂಪ್ ಅಳವಡಿಸಿ ಸಮಸ್ಯೆ ಪರಿಹರಿಸಲಾಗುತ್ತದೆ ಎಂದು ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಹಿರಿಯ ಸಹಾಯಕ ತೋಟಗಾರಿಕಾ ಅಧಿಕಾರಿ ಶಿಲ್ಪಶ್ರೀ ತಿಳಿಸಿದ್ದಾರೆ.
ನಕ್ಕನಹಳ್ಳಿಗೆ ಖಾಸಗಿ ಕೊಳವೆ ಬಾವಿಯಿಂದ ಕುಡಿಯುವ ನೀರಿನ ಸೌಕರ್ಯ ದೊರಕಿಸಲಾಗಿದೆ ಎಂದು ಪಿಡಿಒ ಮುನಿರಾಜು ತಿಳಿಸಿದ್ದಾರೆ.