ಡಿಸಿಎಂ ಅಶ್ವತ್ಥನಾರಾಯಣ್‌ಗೆ ಅಧಿಕಾರದ ಮದ

21-klr-4
Published on

ಕೋಲಾರ: ಡಿಸಿಎಂ ಅಶ್ವತ್ಥನಾರಾಯಣ್ ಅಧಿಕಾರದ ಮದ ತಲೆಗೇರಿಸಿಕೊಂಡು ಕಾಂಗ್ರೆಸ್ ನಾಯಕರ ವಿರುದ್ಧ ಮಾಡಿರುವ ಟೀಕೆಗಳನ್ನು ವಾಪಸ್ ಪಡೆದು ಜನರಲ್ಲಿ ಕ್ಷಮೆ ಕೋರಬೇಕು ಎಂದು ಕಾಂಗ್ರೆಸ್ ಮಾಧ್ಯಮ ವಿಭಾಗದ ಸಹ ಅಧ್ಯಕ್ಷ, ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಅಶ್ವತ್ಥನಾರಾಯಣ್ ಸಭ್ಯ ವ್ಯಕ್ತಿ. ಚಿಕ್ಕ ವಯಸ್ಸಿನಲ್ಲೇ ಡಿಸಿಎಂ ಹುದ್ದೆಯನ್ನೇರಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ದುರಹಂಕಾರದಿಂದ ನೀಡಿರುವ ಹೇಳಿಕೆಯನ್ನು ಕೆಪಿಸಿಸಿ ಖಂಡಿಸುತ್ತದೆ. ಟೀಕೆಗಳು ಪಕ್ಷ ಆಧಾರಿತ, ವಿಷಯಾಧಾರಿತವಾಗಿರಬೇಕೇ ವಿನಾ ವೈಯಕ್ತಿಕ ಟೀಕೆಗಳಿಂದ ವ್ಯಕ್ತಿತ್ವ ಬೆಳೆಯುವುದಿಲ್ಲ ಎಂಬುದನ್ನು ಅಶ್ವತ್ಥನಾರಾಯಣ್ ಅರ್ಥ ಮಾಡಿಕೊಳ್ಳಬೇಕು ಎಂದರು.

ಶಿರಾ ಮತ್ತು ಆರ್‌ಆರ್ ನಗರದ ಉಪ ಚುನಾವಣೆ ಹಾಗೂ ವಿಧಾನ ಪರಿಷತ್‌ನ ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಆಗ್ನೇಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮೇಶ್‌ಬಾಬು ಹಿಂದೆ 15 ತಿಂಗಳ ಅವಧಿಯಲ್ಲಿ ಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಪ್ರಜ್ಞಾವಂತ ಮತದಾರರು ಇಂತಹವರನ್ನು ಬೆಂಬಲಿಸಬೇಕು ಎಂದರು.

ಬಿಜೆಪಿ ನಾಯಕತ್ವದ ಬಗ್ಗೆ ಕಾಂಗ್ರೆಸ್ಸಿಗರು ಮಾತನಾಡುತ್ತಿಲ್ಲ. ಅವರ ಪಕ್ಷದವರೇ ಮಾತನಾಡಲಾರಂಭಿಸಿದ್ದಾರೆ. ನಾವು ಜನರ ಪರ ಮಾತನಾಡುತ್ತಿದ್ದೇವೆ ಎಂದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘದ ತಾಲೂಕು ಅಧ್ಯಕ್ಷ ಲಕ್ಷ್ಮೀನಾರಾಯಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಜಗದೀಶ್, ಉಪಾಧ್ಯಕ್ಷ ನಾಗಭೂಷಣ್, ಪದಾಧಿಕಾರಿಗಳಾದ ವೆಂಕಟಾಚಲಪತಿ, ಜಮೀರ್ ಅಹಮದ್, ಉಪನ್ಯಾಸಕ ಎನ್.ವಿ. ಗೋಪಿನಾಥ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net