ಹಳೇ ಮಾವಿನ ಮರ ಪುನಶ್ಚೇತನ

27-klr-1
Published on

ಪಿ.ಎಸ್. ಹರೀಶ್ ಕೋಲಾರ

ಹಳೇ ಮಾವಿನ ಮರಗಳಲ್ಲಿ ಗುಣಮಟ್ಟದ ಮಾವು ಇಳುವರಿ ನಿರೀಕ್ಷಿಸಲಾಗದು. ಕಡಿದು ಹೊಸದಾಗಿ ನಾಟಿ ಮಾಡುವುದು ಲಾಭದಾಯಕವಲ್ಲವಾದ್ದರಿಂದ ಹಳೇ ತೋಟಗಳ ಪುನಶ್ಚೇತನ ಕಾರ್ಯಕ್ರಮ ರೈತರಿಗೆ ವರದಾನವಾಗಿದೆ.

ಜಿಲ್ಲೆಯಲ್ಲಿ ಮಾವು ಯಥೇಚ್ಛವಾಗಿ ಬೆಳೆದರೂ ಅವೈಜ್ಞಾನಿಕ ವಿಧಾನದಲ್ಲಿ ಕೊಯ್ಲು ಹಾಗೂ ಕೊಯ್ಲೋತ್ತರ ನಿರ್ವಹಣೆಯಲ್ಲಿನ ಲೋಪಗಳಿಂದ ಗುಣಮಟ್ಟ ಕಳೆದುಕೊಳ್ಳುತ್ತಿದೆ. ಅದರಲ್ಲೂ ಹಳೇ ಮರಗಳ ನಿರ್ವಹಣೆ, ಔಷಧ ಸಿಂಪಡಣೆ ಹಾಗೂ ಫಸಲು ಕೀಳುವುದು ಕಷ್ಟ. ಕಾಯಿ ಗಾತ್ರವೂ ಸಣ್ಣದಾಗಿರುವುದರಿಂದ ಉತ್ತಮ ಬೆಲೆಯೂ ನಿರೀಕ್ಷಿಸಲಾಗದು.

ಶೇ.20 ಹಳೇ ಮರ: ಜಿಲ್ಲೆಯಲ್ಲಿ ಮಾವು ಬೆಳೆಯುವ ಪ್ರದೇಶಗಳಲ್ಲಿ ಶೇ.20 ಮಾವಿನ ಮರಗಳು ಹಳೆಯದಾಗಿದ್ದು, ತೋಟಗಾರಿಕೆ ಇಲಾಖೆ ಕಾರ್ಯಕ್ರಮಗಳಲ್ಲಿ ಒಂದಾದ ಮರಗಳ ಪುನಶ್ಚೇತನ ಕಾರ್ಯಕ್ರಮ ರೈತರಿಗೆ ವರದಾನವಾಗಿದೆ.

ಪುನಶ್ಚೇತನ ಹೇಗೆ: ಇಳುವರಿ ಬಾರದ ಹಳೇ ಮರಗಳನ್ನು ಗುರುತಿಸಿ 4ರಿಂದ 5 ಅಡಿ ಎತ್ತರಕ್ಕೆ ಸಂಪೂರ್ಣ ರೆಂಬೆ-ಕೊಂಬೆ ಕಡಿದು ಕಾಂಡ ಸಂರಕ್ಷಣಾ ಪೇಸ್ಟ್ (ಕ್ಲೋರೋಫೈರಿಪಾಸ್, ಎಕ್ಸಾಪೋನಾಜೋಲ್) ಬಳಿಯಬೇಕು. ಕತ್ತರಿಸಿರುವ ರೆಂಬೆಗಳಲ್ಲಿ ಬರುವ ಹೊಸ ಚಿಗುರಿನಲ್ಲಿ ಮೂರ್ನಾಲ್ಕು ಮಗ್ಗುಲು ಉಳಿಸಿಕೊಂಡು ಉಳಿದವನ್ನು ಕತ್ತರಿಸಿ ಹಂತ-ಹಂತವಾಗಿ ಒಂದು ರೆಂಬೆ ಉಳಿಸಿಕೊಳ್ಳಬೇಕು.

ಆರ್ಥಿಕವಾಗಿ ಲಾಭ: ಮಾವಿನ ತೋಟ ಆರ್ಥಿಕವಾಗಿ ಲಾಭದಾಯಕವಾಗಲು 8ರಿಂದ 10 ವರ್ಷ ಬೇಕು. 15 ವರ್ಷ ಮೇಲ್ಪಟ್ಟ, ಎತ್ತರಕ್ಕೆ ಬೆಳೆದಿರುವ ಮರಗಳು ಪುನಶ್ಚೇತನಕ್ಕೆ ಸೂಕ್ತ. ಹಳೇ ಮರ ಕಡಿದು ಹೊಸದಾಗಿ ನಾಟಿ ಮಾಡಲು ದುಬಾರಿ ವೆಚ್ಚವಾಗುತ್ತದೆ. ಆದರೆ ಪುನಶ್ಚೇತನಗೊಳಿಸಿದ ಮರದಲ್ಲಿ ಮೂರನೇ ವರ್ಷದಿಂದ ಉತ್ತಮ ಫಸಲು, ಗುಣಮಟ್ಟದ ಕಾಯಿ ಸಿಗಲಿದೆ.

ಔಷಧ ಸಿಂಪಡಣೆ, ಕಾಯಿ ಕೀಳುವುದು ಸುಲಭ. ಉತ್ತಮ ಇಳುವರಿ ನಿರೀಕ್ಷಿಸಬಹುದು. ರೈತರು ಬೇಕಾದ ತಳಿಯನ್ನು ಕಸಿ ಕಟ್ಟಬಹುದು. ಒಂದು ಗಿಡ ಪುನಶ್ಚೇತನಗೊಳಿಸಲು ನೀರು, ಗೊಬ್ಬರ ಸೇರಿ 500 ರೂ. ಗಳಿಂದ 1000 ರೂ. ವೆಚ್ಚ ಅಂದಾಜಿಸಲಾಗಿದೆ.

ರೋಗ ಬಾಧೆ: ಹೊಸ ಚಿಗುರಿಗೆ ಕೀಟಬಾಧೆ ಜಾಸ್ತಿ, ರಸ ಹೀರುವ ಕೀಟ ನಿಯಂತ್ರಣಕ್ಕೆ ಅಂತರವ್ಯಾಪಿ ಕೀಟನಾಶಕ ಬಳಸಬೇಕು. ಮರದ ಬುಡದ ಮಣ್ಣಿನಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳಬೇಕು.

ಸಹಾಯಧನ: ಮಾವು ಪುನಶ್ಚೇತನ ಕಾರ್ಯಕ್ರಮದಡಿ ರಾಷ್ಟ್ರೀಯ ತೋಟಗಾರಿಕೆ ಮಿಷನ್‌ನಿಂದ ಪ್ರತಿ ಹೆಕ್ಟೇರ್‌ಗೆ ಗರಿಷ್ಠ 20,000 ರೂ.ಗಳ ಸಹಾಯಧನವಿದ್ದು, ನರೇಗಾದಡಿ ಹೆಕ್ಟೇರ್‌ಗೆ 42,000 ರೂ.ಪಡೆಯುವ ಅವಕಾಶ ಇದೆ.

ಮಾವಿನ ತೋಟಗಳಲ್ಲಿ ಹಳೇ ತೋಟಗಳ ಪುನಶ್ಚೇತನ ಕಾರ್ಯಕ್ರಮವಿದ್ದು, ಶ್ರೀನಿವಾಸಪುರದ ಹೊಗಳಗೆರೆ ಮತ್ತು ಮುಳಬಾಗಿಲಿನ ಜೋಡಿವಮ್ಮಸಂದ್ರ ತೋಟಗಾರಿಕಾ ಕ್ಷೇತ್ರದಲ್ಲಿ ತಲಾ 200 ಮರಗಳ ಪುನಶ್ಚೇತನಗೊಳಿಸಲಾಗುತ್ತಿದೆ. ರೈತರು ನರೇಗಾ ಯೋಜನೆ ಬಳಸಿಕೊಂಡು ಹಳೇ ಮಾವಿನ ತೋಟ ಪುನಶ್ಚೇತನಗೊಳಿಸಲು ಅವಕಾಶವಿದೆ. ಎಚ್.ಮಂಜುನಾಥ್, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net