ನವಜಾತ ಹೆಣ್ಣು ಶಿಶು ರಕ್ಷಣೆ

25-klr-6
Published on

ಕೋಲಾರ: ನವಜಾತ ಹೆಣ್ಣು ಶಿಶುವನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ತಾಲೂಕಿನ ತೊಟ್ಲಿ ಪಂಚಾಯಿತಿ ವ್ಯಾಪ್ತಿಯ ಅಲೇರಿ ಗೇಟ್ ಬಳಿ ಶುಕ್ರವಾರ ನಡೆದಿದೆ.

ಬೆಳಗ್ಗೆ ದನ ಮೇಯಿಸಲು ಹೋಗಿದ್ದವರು ಪೊದೆ ಬಳಿ ಗೋಣಿ ಚೀಲದ ಮೇಲೆ ಅಳುತ್ತಿರುವ ಮಗುವನ್ನು ಕಂಡು ಸುಗಟೂರು ಹೊರಠಾಣೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಪೊಲೀಸರ ಮಾಹಿತಿ ಮೇರೆಗೆ ಸುಗಟೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಕಾವ್ಯಾ ಸ್ಥಳಕ್ಕೆ ಆಗಮಿಸಿ ಶಿಶುವನ್ನು ರಕ್ಷಿಸಿದ್ದಾರೆ. ಆಶಾ ಕಾರ್ಯಕರ್ತೆ ಸುಮಿತ್ರಾ ಸಾಥ್ ನೀಡಿದರು.

ಮಗುವಿನ ಬೆನ್ನಿನ ಮೇಲೆ, ಕಾಲುಗಳಿಗೆ ಮುಳ್ಳು ತರುಚಿದ ಗಾಯಗಳಾಗಿದ್ದು, ಮುಖದ ಭಾಗದಲ್ಲಿ ಇರುವೆ ಕಚ್ಚಿರುವ ಗುರುತಿದೆ. ಅತ್ತು ನಿತ್ರಾಣವಾಗಿದ್ದ ಮಗುವಿಗೆ ಹಾಲು ಕೊಟ್ಟು ಉಪಚರಿಸಿ ಎಸ್ಸೆನ್ನಾರ್ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಶಿಶು 1.7 ಕೆಜಿ ತೂಕ ಇದ್ದುದರಿಂದ ಎನ್‌ಐಸಿಯು ಘಟಕಕ್ಕೆ ದಾಖಲಿಸಲಾಗಿದೆ. ಐದು ದಿನ ಚಿಕಿತ್ಸೆ ನೀಡಿದ ನಂತರ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಲಿದ್ದಾರೆ.

ಸರ್ವೇ ನಡೆಸಿ ಪಾಲಕರ ಪತ್ತೆ: ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಇರುವ ಗರ್ಭಿಣಿಯರ ವಿವರ ಲಭ್ಯವಿದ್ದು, ಈ ತಿಂಗಳಲ್ಲಿ ಹೆರಿಗೆ ದಿನಾಂಕ ಇರುವವರ ಸರ್ವೇ ನಡೆಸಿ ಶಿಶುವಿನ ಪಾಲಕರು ಯಾರೆಂಬುದನ್ನು ಪತ್ತೆಹಚ್ಚುವ ಪ್ರಯತ್ನ ಮಾಡಲಾಗುತ್ತಿದೆ. ಕೇಂದ್ರ ವ್ಯಾಪ್ತಿ ಹೊರಗಿನವರೂ ಕೂಡ ಬಿಟ್ಟು ಹೋಗಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಕಾವ್ಯಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net